ಗ್ರಾಮೀಣ ಜೀವನ ಎಷ್ಟೊಂದು ಸೊಗಸು. ಅಲ್ಲಿನ ಆಚಾರ – ವಿಚಾರಗಳು, ಉಡುಗೆ-ತೊಡುಗೆಗಳು, ಪ್ರಕೃತಿ ಸೌಂದರ್ಯ ಎಲ್ಲವೂ ಅದ್ಭುತ. ಈ ಜೀವನವನ್ನು ಮತ್ತಷ್ಟು ಹಸನಾಗಿಸುವುದು ಗ್ರಾಮೀಣ ಆಟಗಳು. ಈ ಆಟಗಳು ಕೇವಲ ಮನೋರಂಜನೆಗಾಗಿ ಮಾತ್ರ ಸೀಮಿತವಾಗಿರದೆ ಅವರ ಜೀವನದ ಬವಣೆಗಳನ್ನು, ದುಃಖ – ದುಮ್ಮಾನಗಳನ್ನು ಮರೆಯಲು ಈ ಆಟಗಳನ್ನು ಆಡುವುದುಂಟು. ಅಂತಹ ಆಟಗಳಲ್ಲಿ ಈ ನಿಧಿ ಶೋಧವೂ ಒಂದು.
ಇಲ್ಲಿ ಆಟಗಾರನ್ನು ಎರಡು ತಂಡಗಳಾಗಿ ವಿಂಗಡಣೆ ಮಾಡಲಾಗುತ್ತೆ.ಬಳಿಕ ಎರಡೂ ತಂಡಗಳಿಂದ ನಾಯಕರನ್ನು ಆಹ್ವಾನಿಸಿ ಒಬ್ಬೊಬ್ಬರಿಗೆ ಒಂದೊಂದು ಚೀಟಿ ನೀಡಬೇಕು. ಈ ಚೀಟಿಯನ್ನು ಕೊಟ್ಟ ತತ್‌ಕ್ಷಣ ತೆರೆಯುವಂತಿಲ್ಲ. ಎರಡೂ ತಂಡದ ನಾಯಕರು ತಮ್ಮ ತಂಡಗಳಿಗೆ ಹಿಂದಿರುಗಿದ ಅನಂತರ ತಂಡದ ಸದಸ್ಯರ ಜತೆಗೂಡಿ ಈ ಚೀಟಿಯನ್ನು ತೆರೆಯಬೇಕು.
ಉದಾಹರಣೆಗೆ ಎ ತಂಡ ಮತ್ತು ಬಿ ತಂಡ ಎಂದು ಗುರುತಿಸಿದ್ದೇವೆ ಎಂದು ಇಟ್ಟುಕೊಳ್ಳುವ, ಈಗ ಎರಡೂ ತಂಡಗಳಿಗೆ ಬೇರೆ ಬೇರೆ ಚೀಟಿ ಕೊಟ್ಟ ಕಾರಣ ಅದರಲ್ಲಿ ಬೇರೆ ಬೇರೆ ವಿಷಯಗಳನ್ನು ಒಳಗೊಂಡ ಸುಳಿವುಳಿರುತ್ತದೆ. ತಂಡ ಇದರ ಮೊದಲು ಚೀಟಿಯಲ್ಲಿ “ಗಾಳಿ ನೀಡುವ ಸಾಧನ ಎಂದಿದೆ’ ಎಂದಾಗ ಅವರು ಗಾಳಿ ನೀಡುವ ಸಾಧನಗಳು ಯಾವುವು ಎಂದು ಹುಡುಕುತ್ತಾ ಹೋಗಬೇಕು, ಅಲ್ಲಿ ಫ್ಯಾನ್, ಬೀಸಣಿಕೆ , ಹೀಗೆ ಹಲವಾರು ಗಾಳಿ ನೀಡುವ ಸಾಧನಗಳು ಆಟವಾಡಲು ನಿರ್ಧರಿಸಿದ ಜಾಗದಲ್ಲಿ ಇರಬಹುದು ಆಗ ತಂಡದ ಎಲ್ಲ ಸದಸ್ಯರು ಈ ವಸ್ತುಗಳನ್ನು ಸರಿಯಾಗಿ ಪರಿಶೀಲಿಸಿದರೆ ಅಲ್ಲಿ 2ನೇ ಚೀಟಿಯನ್ನು ಪಡೆಯುತ್ತಾರೆ. ಹೀಗೆ ಬೇರೆ ಸುಳಿವು ಇರುವ ಬೇರೆ ಬೇರೆ ಚೀಟಿಗಳು ಬೇರೆ ಬೇರೆ ವಸ್ತುಗಳ ಬಳಿ ಸಿಗುತ್ತಾ ಹೋಗುತ್ತದೆ. ಇಲ್ಲಿ ಆಟ ಆಡಿಸುವವರು ಮೊದಲೇ ಈ ಚೀಟಿಯನ್ನು ತಯಾರಿಸಿ ನಾವು ಯೋಜನೆ ಮಾಡಿದ ಜಾಗದಲ್ಲಿ ಇಟ್ಟುಕೊಂಡಿರಬೇಕು. ಇದು ಆಟ ಆಡುವ ತಂಡದ ಯಾವುದೇ ಒಬ್ಬ ಸದಸ್ಯನಿಗೂ ತಿಳಿಯುವಂತೆ ಇಲ್ಲ. ತಯಾರಿಸುವ ಚೀಟಿಯ ಸಂಖ್ಯೆ ಎಷ್ಟು ಬೇಕಾದರೂ ಇರಬಹುದು.
ಹೀಗೆ ಆಟ ಮುಂದುವರೆದಂತೆ ಕೊನೆಯ ಚೀಟಿಯ ಸುಳಿವು ಒಂದೇ ಆಗಿರುತ್ತದೆ. ಅಂದರೆ ಎರಡೂ ತಂಡ ಕೊನೆಯದಾಗಿ ಹುಡುಕುವ ವಸ್ತು ಒಂದೇ ಆಗಿರುತ್ತದೆ. ಅಂತಿಮ ವಸ್ತುವಿನ ಬಳಿ ಮತ್ತೂಂದು ಚೀಟಿ ಇಟ್ಟಿರುತ್ತಾರೆ. ಮೊದಲಿಗೆ ಆ ಚೀಟಿಯನ್ನು ಹುಡುಕಿದ ತಂಡ ಗೆಲ್ಲುತ್ತದೆ.
ಆ ಚೀಟಿಯಲ್ಲಿ ಯಾವುದೇ ಸುಳಿವುಗಳು ಇರುದಿಲ್ಲ. ಬದಲಿಗೆ ನಿಧಿ ಎಂದು ಬರೆದಿರುತ್ತದೆ ಇದು ಗ್ರಾಮೀಣ ಜೀವನದಲ್ಲಿ ನೋಡ ಸಿಗುವ ಒಂದು ಅಪರೂಪದ ಆಟವಾಗಿದ್ದು, ಇದನ್ನು ನಿಧಿ ಶೋಧ, ಹಿರಣ್ಯ ಶೋಧ ಎಂದು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.
ಹೆಸರುಗಳು ಬೇರೆ ಬೇರೆ ಆದರೂ ಆಟ ಮತ್ತು ಆಟ ಆಡುವ ವಿಧಾನ ಒಂದೇ. ಹೀಗೆ ನಮ್ಮ ನಿಮ್ಮೆಲ್ಲರ ನಡುವೆ ಕಾಲದ ಅಡಿಯಲ್ಲಿ ಹುದುಗಿ ಹೋಗಿದ್ದ ಒಂದು ಗ್ರಾಮೀಣ ಆಟದ ನೆನಪನ್ನು ಮರುಕಳಿಸುವ ಒಂದು ಪುಟ್ಟ ಪ್ರಯತ್ನ ಇದಾಗಿದೆ.
-ಬಿ. ಶಶಾಂಕ ಪೈ
ಕಾರ್ಕಳ