ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿದ್ದು, ಎರಡು ದಿನ ವಿಲೇವಾರಿ ಸ್ಥಗಿತಗೊಂಡ ಕಾರಣ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ.
ಹಬ್ಬದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ರಾಶಿ ಸೃಷ್ಟಿಯಾಗಿದೆ. ಜತೆಗೆ ನಗರದಲ್ಲಿ ಎರಡು ದಿನಗಳಿಂದ ಆಗ್ಗಾಗ್ಗೆ ಮಳೆ ಸುರಿಯುತ್ತಿರುವುದರಿಂದ ತ್ಯಾಜ್ಯ ಕೊಳೆತು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಿಗಿಂತಲೂ ಶೇ.40ರಷ್ಟು ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದ್ದು, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಕೆ.ಆರ್.ಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ಟನ್‌ಗಟ್ಟಲೆ ತ್ಯಾಜ್ಯ ಸೃಷ್ಟಿಯಾಗಿದೆ. ಇದೀಗ ಶನಿವಾರ, ಭಾನುವಾರವೂ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳುವುದು ಅನುಮಾನ ಎನ್ನಲಾಗಿದ್ದು, ತ್ಯಾಜ್ಯ ವಿಲೇವಾರಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದು ಅನಿವಾರ್ಯತೆ ಎದುರಾಗಿದೆ.
ಹಸಿ ತ್ಯಾಜ್ಯ ಕೊಳೆಯುವ ಆತಂಕ: ಹಬ್ಬದ ಹಿನ್ನೆಲೆಯಲ್ಲಿ ರೈತರು ಹಾಗೂ ವ್ಯಾಪಾರಿಗಳು ತಂದಿರುವ ಬಾಳೆಕಂದು, ಮಾವಿನ ಎಲೆ, ಬೂದು ಕುಂಬಳಕಾಯಿಗಳನ್ನು ಅಲ್ಲಲ್ಲೇ ಬಿಟ್ಟು ಹೋಗುತ್ತಿದ್ದು, ಶನಿವಾರದ ವೇಳೆಗೆ ತ್ಯಾಜ್ಯ ಪ್ರಮಾಣ ಹೆಚ್ಚಾಗಲಿದೆ. ಇದರೊಂದಿಗೆ ವಾಹನಗಳಿಗೆ ಪೂಜೆ ಮಾಡಿದವರು ಬೂದು ಕುಂಬಳಕಾಯಿ, ಬಾಳೆಕಂದು ರಸ್ತೆಗಳಲ್ಲಿಯೇ ಬಿಟ್ಟಿದೆ.
ಎರಡು ದಿನ ವಿಲೇವಾರಿ ಸ್ಥಗಿತ: ಆಯುಧ ಪೂಜೆಯ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಮ್ಮ ಆಟೋ ಟಿಪ್ಪರ್‌ಗಳು ಹಾಗೂ ಕಾಂಪ್ಯಾಕ್ಟರ್‌ಗಳಿಗೆ ಪೂಜೆ ಸಲ್ಲಿಸಿದ್ದಾರೆ. ಪರಿಣಾಮ ನಗರದಲ್ಲಿ ಗುರುವಾರ ಹಾಗೂ ಶುಕ್ರವಾರ ವಾಹನಗಳು ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿಲ್ಲ. ಇದರೊಂದಿಗೆ ಪೌರಕಾರ್ಮಿಕರು ರಜೆ ತೆಗೆದುಕೊಂಡಿರುವುದರಿಂದ ರಸ್ತೆಗಳ ಸ್ವತ್ಛತಾ ಕಾರ್ಯ, ತ್ಯಾಜ್ಯ ವಿಲೇವಾರಿ ಕಾರ್ಯ ಬಹುತೇಕ ಸ್ಥಗಿತಗೊಂಡಿತ್ತು.
ಪಾಲನೆಯಾಗದ ಮೇಯರ್ ಆದೇಶ: ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಲಿದ್ದು, ಅದನ್ನು ಶೀಘ್ರ ವಿಲೇವಾರಿ ಮಾಡದಿದ್ದರೆ ಕಸದ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಆದಷ್ಟು ಬೆಂಗಳೂರಿನಲ್ಲಿಯೇ ಇರಬೇಕು.
ಒಂದೊಮ್ಮೆ ಹೊರಗೆ ಹೋದರೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಶೀಘ್ರ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ, ಕಳೆದ ಎರಡು ದಿನಗಳಿಂದ ನಗರದಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿದ್ದರೂ, ತ್ಯಾಜ್ಯ ವಿಲೇವಾರಿಯಾಗಿಲ್ಲ.