Advertisement

ಮೆಟ್ರೋ ನಿಲ್ದಾಣಗಳಾಚೆ ಕಸದ ರಾಶಿ, ದುರ್ವಾಸನೆ

11:40 AM Jun 28, 2017 | Team Udayavani |

ಬೆಂಗಳೂರು: ಮೆಟ್ರೋ ಹಸಿರು ಮಾರ್ಗದ ದಕ್ಷಿಣದಲ್ಲಿ ಬರುವ ಕೆಲವು ನಿಲ್ದಾಣಗಳಿಂದ ಹೊರಬರುವ ಮೆಟ್ರೋ ಪ್ರಯಾಣಿಕರು ಸದ್ಯ ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಮೆಟ್ರೋ ನಿಲ್ದಾಣಗಳು ಒಳಗಿನಿಂದ ಝಗಮಗಿಸುತ್ತವೆ.

Advertisement

ಆದರೆ, ಹೊರಗಡೆ ಬರುತ್ತಿದ್ದಂತೆ ಕಸತುಂಬಿದ ಲಾರಿ, ಅಕ್ಕಪಕ್ಕದಲ್ಲಿ ಕಸದ ಗುಡ್ಡೆಗಳೇ ಕಾಣಿಸುತ್ತವೆ. ಇದರಿಂದ ಹೊರಹೊಮ್ಮುವ ದುರ್ನಾತವು ಪ್ರಯಾಣಿಕರ ಮೂಗಿಗೆ ಬಡಿಯುತ್ತದೆ. ಕೆ.ಆರ್‌. ಮಾರುಕಟ್ಟೆ ನಂತರ ನ್ಯಾಷನಲ್‌ ಕಾಲೇಜು ನಿಲ್ದಾಣ ಸಿಗುತ್ತದೆ. ಅಲ್ಲಿಂದಾಚೆಗೆ ಎರಡು-ಮೂರು ನಿಲ್ದಾಣಗಳ ಹೊರಗಡೆ ಕಸದ ರಾಶಿಯದ್ದೇ ದರ್ಶನ.

ಆ ಕಸದ ರಾಶಿಯನ್ನು ನಾಯಿಗಳು ಚೆಲ್ಲಾಪಿಲ್ಲಿ ಮಾಡಿ ಮತ್ತಷ್ಟು ಸಮಸ್ಯೆ ತಂದೊಡ್ಡಿವೆ. ಸೊಳ್ಳೆ ಉತ್ಪತ್ತಿಗೂ ಕಾರಣವಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೂ ಕಿರಿಕಿರಿಯಾಗಿದೆ. ಈ ಮಧ್ಯೆ ಮಳೆಯಾದರೆ ದುರ್ವಾಸನೆ, ಅನೈರ್ಮಲ್ಯ ಹೆಚ್ಚಾಗುತ್ತಿದೆ. ಇನ್ನು ಫ‌ುಟ್‌ಪಾತ್‌ಗಳಲ್ಲೆಲ್ಲಾ ಕಸ ಹರಡಿದ್ದರಿಂದ ಪಾದಚಾರಿಗಳ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ. 

ಈ ಬಗ್ಗೆ ಅಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿರುವ ಬಿಎಂಆರ್‌ಸಿ ಸಿಬ್ಬಂದಿ ಗಮನಸೆಳೆದಾಗ, ಬಿಬಿಎಂಪಿಯತ್ತ ಬೊಟ್ಟುಮಾಡಿದರು. ಪ್ರಯಾಣಿಕರಿಗೆ ಕಸ ಕಿರಿಕಿರಿಯಾಗುತ್ತಿರುವುದು ಕಂಡುಬಂದಿದೆ. ನಿತ್ಯ ಜನ ಮೂಗುಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಆದರೆ, ಕಸ ವಿಲೇವಾರಿ ಬಿಬಿಎಂಪಿ ಕೆಲಸ. ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಅಧಿಕಾರಿಯೊಬ್ಬರು ಹೇಳಿದರು.   

Advertisement

Udayavani is now on Telegram. Click here to join our channel and stay updated with the latest news.

Next