Advertisement

ಸಾರಿಗೆ ಸಮಸ್ಯೆ; ದಶಕಗಳಿಂದ ಬಸವಳಿದ ಜನತೆ

03:36 PM Oct 18, 2021 | Team Udayavani |

ಹುಬ್ಬಳ್ಳಿ: ಇವು ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಅವರು ಪ್ರತಿನಿಧಿಸಿದ್ದ ಕ್ಷೇತ್ರ ವ್ಯಾಪ್ತಿಯ ಅವಳಿ ಗ್ರಾಮಗಳು. ಆದರೆ ತಾಲೂಕು ಕೇಂದ್ರ ಹಾಗೂ ಗ್ರಾಪಂ ಕಚೇರಿಗೆ ತೆರಳಲು ಸಮರ್ಪಕ ರಸ್ತೆಯಿಲ್ಲ. ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೂ ಅಲ್ಲಿಗೆ ತೆರಳಲು ಬಸ್ಸಿನ ಸೌಲಭ್ಯವೇ ಇಲ್ಲ. ಇದೀಗ ಅವರ ತಾಲೂಕಿನ ಕುವರ ಎಸ್‌.ಆರ್‌. ಬೊಮ್ಮಾಯಿ ಅವರ ಪುತ್ರ ಮುಖ್ಯಮಂತ್ರಿಯಾಗಿದ್ದು, ಆರೇಳು ದಶಕಗಳ ಸಮಸ್ಯೆಗಳಿಗೆ ಪರಿಹಾರದ ನಿರೀಕ್ಷೆ ಗರಿಗೆದರಿದೆ.

Advertisement

ಇದು ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಅವರು ಪ್ರತಿನಿಧಿಸಿದ್ದ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಂತ ತಾಲೂಕು ಹಾಗೂ ಕೇಂದ್ರ ಸಂಸದೀಯ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ಅವರ ತವರು ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪುರ ಹಾಗೂ ಕಡಪಟ್ಟಿ ಗ್ರಾಮದ ದುಸ್ಥಿತಿ. ಅಲ್ಲಾಪುರ-1200, ಕಡಪಟ್ಟಿ-1600 ಜನಸಂಖ್ಯೆ ಹೊಂದಿದ್ದು, ಸ್ವಾತಂತ್ರ್ಯ ಬಂದಾಗಿನಿಂದ ಎರಡು ಗ್ರಾಮದ ಜನರು ತಾಲೂಕು ಕೇಂದ್ರಕ್ಕೆ ತೆರಳಲು ಹಾಗೂ ಗ್ರಾಪಂಗೆ ತೆರಳಲು ಬಸ್‌ ಸೌಲಭ್ಯ ಕಂಡಿಲ್ಲ. ನಿತ್ಯ ಹತ್ತಾರು ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಬಸ್‌ಗಳ ಓಡಾಟಕ್ಕೆ ಸಮರ್ಪಕ ರಸ್ತೆಯಿಲ್ಲದೆ ತಾಲೂಕು ಕೇಂದ್ರ ಕುಂದಗೋಳ ಹಾಗೂ ಗ್ರಾಮ ಪಂಚಾಯ್ತಿ ಗುಡೇನಕಟ್ಟಿ ಬಲು ದೂರವಾಗಿದೆ.

ತಪ್ಪುತ್ತಿಲ್ಲ ಸುತ್ತಾಟ
ಅಲ್ಲಾಪುರ ಹಾಗೂ ಕಡಪಟ್ಟಿಯಿಂದ ಕುಂದಗೋಳ ಕೇವಲ 6 ಕಿಮೀ ಮಾತ್ರ. ಇನ್ನೂ ಗ್ರಾಪಂ ಕಚೇರಿ ಗುಡೇನಕಟ್ಟಿ 5 ಕಿಮೀ ಮಾತ್ರ. ಆದರೆ ಸಮರ್ಪಕ ರಸ್ತೆಯಿಲ್ಲದ ಪರಿಣಾಮ ತಾಲೂಕು ಕೇಂದ್ರಕ್ಕೆ ಹೋಗಲು ಹುಬ್ಬಳ್ಳಿಗೆ (12 ಕಿಮೀ) ಬಂದು ಇಲ್ಲಿಂದ ಕುಂದಗೋಳಕ್ಕೆ (22 ಕಿಮೀ) ಹೋಗಬೇಕು. ಇನ್ನೂ ಪಂಚಾಯ್ತಿಗೆ ಹೋಗಬೇಕಾದರೆ ಕುಂದಗೋಳದಿಂದ ಗುಡೇನಕಟ್ಟಿಗೆ (5 ಕಿಮೀ) ಸುತ್ತಾಕಿ ಹೋಗಬೇಕು. ಅಲ್ಲಾಪುರದಿಂದ ಗುಡೇನಕಟ್ಟಿಗೆ 5-6 ಕಿಮೀ ಬದಲು 40 ಕಿಮೀ ಕ್ರಮಿಸಬೇಕಾಗಿದೆ.

ಇನ್ನೂ ನಿತ್ಯದ ದುಡಿಮೆ ಬಿಟ್ಟು ಇಡೀ ದಿನ ಬೇಕಾಗುವುದರಿಂದ ಈ ಗ್ರಾಮಗಳ ಅದೆಷ್ಟೋ ಜನರು ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಕಚೇರಿಗಳನ್ನೇ ನೋಡಿಲ್ಲ. ಎರಡು ಕಡೆ ಓಡಾಡುವುದಕ್ಕಾಗಿಯೇ ಸಾಲಸೋಲ ಮಾಡಿ ಇಲ್ಲಿನವರು ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದಾರೆ. ಆದರೆ ವಯೋವೃದ್ಧರು, ಮಹಿಳೆಯರು ಅನಿವಾರ್ಯವಾಗಿ ಹುಬ್ಬಳ್ಳಿಗೆ ಬಂದು 34-40 ಕಿಮೀ ಸುತ್ತಾಕುವುದು ತಪ್ಪಿಲ್ಲ.

ಒಮ್ಮೆ ನಡೆದಿತ್ತು ಪ್ರಯೋಗ!
ಕುಂದಗೋಳಕ್ಕೆ ತೆರಳುವ ರಸ್ತೆಯಿದೆ ಎನ್ನುವ ಕಾರಣದಿಂದ ನಾಲ್ಕೈದು ವರ್ಷಗಳ ಹಿಂದೆ ಮೊದಲ ಬಾರಿಗೆ ಹುಬ್ಬಳ್ಳಿ-ಹಳ್ಯಾಳ-ಅಲ್ಲಾಪುರ-ಕುಂದಗೋಳಕ್ಕೆ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು. ಬಸ್‌ ಓಡಾಟಕ್ಕೆ ರಸ್ತೆ ಯೋಗ್ಯವಲ್ಲದ ಕಾರಣ 15 ದಿನಗಳಲ್ಲೇ ಸಂಚಾರ ಸ್ಥಗಿತಗೊಳಿಸಲಾಯಿತು. ಇದೀಗ ಈ ಮಾರ್ಗದ 4 ಕಿಮೀ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ ಎನ್ನಲಾಗಿದ್ದು, ಯಾವ ಕಡೆಯಿಂದ ರಸ್ತೆ ನಿರ್ಮಾಣ ಮಾಡಿದರೂ 2-2.5 ಕಿಮೀ ರಸ್ತೆ ಬಾಕಿ ಉಳಿಯುತ್ತದೆ. ಹೀಗಾಗಿ ಪೂರ್ಣ ರಸ್ತೆಯಾದರೆ ಮಾತ್ರ ಮೂರು ಗ್ರಾಮಗಳಿಗೆ ಅನುಕೂಲವಾಗಿದೆ. ಇನ್ನೂ ಹುಬ್ಬಳ್ಳಿ ಕೆಲ ಭಾಗದವರು ಕೂಡ ಇದೇ ಮಾರ್ಗದಿಂದ ಕುಂದಗೋಳಕ್ಕೆ ಓಡಾಡಲು ಅನುಕೂಲವಾಗುತ್ತದೆ.

Advertisement

ತವರಿನತ್ತ ಬೇಕು ಚಿತ್ತ
ಕುಂದಗೋಳ ಕ್ಷೇತ್ರ ಪ್ರತಿನಿಧಿಸಿ ಎಸ್‌.ಆರ್‌. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದವರು. ಮೇಲಾಗಿ ಇದೇ ತಾಲೂಕಿನ ನಿವಾಸಿಗಳು. ಇದೀಗ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು, ತವರು ತಾಲೂಕಿನ ಗ್ರಾಮಗಳ ಸಮಸ್ಯೆಗೆ ಸ್ಪಂದನೆ ನೀಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.

ಒಳ ರಸ್ತೆಯಾದರೆ ಹಳ್ಯಾಳ-ಕಡಪಟ್ಟಿ- ಅಲ್ಲಾಪುರ ಗ್ರಾಮಸ್ಥರಿಗೆ ಕುಂದಗೋಳ ಸಾಕಷ್ಟು ಹತ್ತಿರವಾಗಲಿದೆ. ಸಂಸದರ ಅನುದಾನದಲ್ಲಿ ಒಂದಿಷ್ಟು ರಸ್ತೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರು ತಿಳಿಸಿರುವ ಅನುದಾನದಲ್ಲಿ ಇಡೀ ರಸ್ತೆ ನಿರ್ಮಾಣವಾಗುವುದಿಲ್ಲ. ಅರ್ಧ ಮಾಡಿದರೂ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಕಾಳಜಿ ವಹಿಸಬೇಕು.
ಮಂಜುನಾಥ ತಟ್ಟಿತಲಿ,
ಗ್ರಾಪಂ ಸದಸ್ಯ, ಕಡಪಟ್ಟಿ ಗ್ರಾಮ

ಎರಡು ಗ್ರಾಮಗಳು ದ್ವೀಪದಂತಿದ್ದು, ಜಿಲ್ಲೆ, ತಾಲೂಕಿನಲ್ಲಿ ಭೇಟಿಯಾಗದ ಜನಪ್ರತಿನಿಧಿಗಳಿಲ್ಲ. ಗ್ರಾಪಂ ಸದಸ್ಯರು, ಹಿರಿಯರು ಕೂಡಿ ಭೇಟಿಯಾಗಿ ರಸ್ತೆಗಾಗಿ ಮನವಿ ಸಲ್ಲಿಸಿ ಸೋತು ಹೋಗಿದ್ದೇವೆ. ಕೇವಲ ಭರವಸೆಗಳು ಸಿಗುತ್ತಿವೆಯೋ ಹೊರತು ರಸ್ತೆಯಾಗುತ್ತಿಲ್ಲ. ಇದೀಗ ನಮ್ಮ ತಾಲೂಕಿನ ಪುತ್ರ ಮುಖ್ಯಮಂತ್ರಿಯಾಗಿದ್ದಾರೆ. ಇವರ ಮೂಲಕವಾದರೂ ರಸ್ತೆ ಕಾಣಬಹುದಾ ಎನ್ನುವ ನಿರೀಕ್ಷೆಯಲ್ಲಿದ್ದೇವೆ.
ಮಂಜುನಾಥ ಎಸ್‌.ಮಸನಾಳ,
ಗ್ರಾಮದ ಹಿರಿಯರು

ತಾಲೂಕು ಕೇಂದ್ರ, ಪಂಚಾಯ್ತಿ ಕಚೇರಿಗೆ ತೆರಳುವ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಮನವಿ, ಹೋರಾಟಗಳು ನಡೆದಿವೆ. ಆದರೆ ಈ ಸಮಸ್ಯೆಗೆ ಸ್ಪಂದಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲದಂತಾಗಿದೆ. ಇದೀಗ ನಮ್ಮ ತಾಲೂಕಿನವರೇ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎನ್ನುವ ಭರವಸೆ ಜನರಲ್ಲಿದೆ.
ಮಲ್ಲಿಕಾರ್ಜುನ ರಡ್ಡೇರ,
ಗ್ರಾಪಂ ಸದಸ್ಯ, ಅಲ್ಲಾಪುರ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next