Advertisement

ಸರಕು ವಾಹನಗಳಲ್ಲಿ ಜನರ ಸಾಗಣೆ ಶಿಕ್ಷಾರ್ಹ ಅಪರಾಧ

09:05 PM Jun 03, 2019 | Lakshmi GovindaRaj |

ಹೊಸಕೋಟೆ: ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಣೆ ಮಾಡುವುದರಿಂದ ದುಷ್ಪರಿಣಾಮಗಳು ಉಂಟಾಗುತ್ತಿದ್ದು ಕಾನೂನಿನಡಿ ಶಿಕ್ಷಾರ್ಹ ಅಪರಾಧ ಎಂದು ನಗರದ ಜೆಎಂಎಫ್ ನ್ಯಾಯಾಲಯದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಆರ್‌.ಬಿ.ಗಿರೀಶ್‌ ಹೇಳಿದರು.

Advertisement

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗ್ರಾಮಾಂತರ ಜಿಲ್ಲಾಡಳಿತ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ, ಪೊಲೀಸ್‌, ಸಾರಿಗೆ, ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು, ಶಾಲಾ/ಕಾಲೇಜು ಮಕ್ಕಳನ್ನು ಹಾಗೂ ಪ್ರಯಾಣಿಕರ ಸಾಗಾಣಿಕೆಯ ನಿಷೇಧ ಕುರಿತು ಕಾನೂನು ಅರಿವು ಮತ್ತು ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಿಳಿವಳಿಕೆ ನೀಡುವ ಉದ್ದೇಶವಿದೆ: ಜೀವನದ ಪ್ರತಿ ಹಂತದಲ್ಲೂ ಕಾನೂನಿನ ಅಂಶಗಳು ಅನ್ವಯಿಸುವಂತಹುದಾಗಿವೆ. ಜನಸಾಮಾನ್ಯರಿಗೆ ರೂಪಿಸಿರುವ ಕಾನೂನುಗಳ ಬಗ್ಗೆ ತಿಳಿವಳಿಕೆ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ. ಕಾನೂನನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾದ್ದು ಸಾರ್ವಜನಿಕರಷ್ಟೇ ಅಲ್ಲದೆ ಪ್ರತಿ ಇಲಾಖೆಗಳ ಜವಾಬ್ದಾರಿಯಾಗಿದೆ. ಪಡೆದ ಮಾಹಿತಿಯನ್ನು ಸಮಾಜಕ್ಕೆ ತಲುಪಿಸಿ ಒಳಿತನ್ನು ಬಯಸಬೇಕು ಎಂದರು.

ದೃಢವಾದ ನಿರ್ಧಾರ ಕೈಗೊಳ್ಳಿ: ವಕೀಲರ ಸಂಘದ ಅಧ್ಯಕ್ಷ ಸಿ.ಎನ್‌.ನಾರಾಯಣ್‌ ಮಾತನಾಡಿ, ವಾಹನಗಳನ್ನು ಸುಸ್ಥಿತಿಯಲ್ಲಿಡುವುದರೊಂದಿಗೆ ವಿಮೆ ನೋಂದಣಿ, ಚಾಲನಾ ಪರವಾನಗಿ ಹೊಂದಿರುವ ಚಾಲಕರನ್ನು ನೇಮಿಸಿಕೊಳ್ಳಲು ಮಾಲೀಕರು ಗಮನಹರಿಸಬೇಕು. ಇಂದು ಬಹಳಷ್ಟು ಪ್ರಕರಣಗಳಲ್ಲಿ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ವಾಹನಗಳ ವಿಮೆ ಚಾಲ್ತಿಯಲ್ಲಿಲ್ಲದ ಕಾರಣ ತೊಂದರೆಗೊಳಗಾದವರು ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆಯಾಗುತ್ತಿದ್ದು ಜನರು ಸಹ ಸರಕು ಸಾಗಣೆ ವಾಹನಗಳಲ್ಲಿ ಸಂಚರಿಸದಿರಲು ದೃಢವಾದ ನಿರ್ಧಾರ ಕೈಗೊಳ್ಳಬೇಕು ಎಂದರು. ಪೊಲೀಸ್‌ ಉಪಅಧೀಕ್ಷಕ ಎನ್‌.ಬಿ.ಸಕ್ರಿ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ, ಪ್ರಾದೇಶಿಕ ಸಾರಿಗೆ ಅಧಿಕಾರಿ ಬೀರೇಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಕನ್ನಯ್ಯ, ಗ್ರೇಡ್‌-2 ತಹಶೀಲ್ದಾರ್‌ ಚಂದ್ರಶೇಖರ್‌, ಸಹಾಯಕ ಸರಕಾರಿ ಅಭಿಯೋಜಕ ಎಂ.ಎಲ್‌.ಚಂದ್ರಾರೆಡ್ಡಿ, ಕಾರ್ಮಿಕ ನಿರೀಕ್ಷಕ ಜೆ.ಸಿ.ಸುರೇಶ್‌ ಮುಂತಾದವರು ಉಪಸ್ಥಿತರಿದ್ದರು.

Advertisement

ಸರಕು ಸಾಗಣೆ ವಾಹನಗಳಲ್ಲಿ ಸಂಚರಿಸುವುದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆ ಮಾಡಲಾಯಿತು ಹಾಗೂ ಈ ಬಗ್ಗೆ ಪ್ರತಿಜ್ಞಾ ವಿಧಿ ಸಹ ಬೋಧಿಸಲಾಯಿತು. ನಗರದ ಶಾಲಾ ವಿದ್ಯಾರ್ಥಿಗಳು, ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಕಾರ್ಮಿಕರಿಂದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಸಹ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next