Advertisement

ಸಾರಿಗೆ ನೌಕರರ ಮುಷ್ಕರ: ಯುಗಾದಿ ಬಳಿಕ ಸಂಧಾನ?

12:22 AM Apr 13, 2021 | Team Udayavani |

ಬೆಂಗಳೂರು: ರಾಜ್ಯ ಸರಕಾರ ಮತ್ತು ಸಾರಿಗೆ ನೌಕರರ ನಡುವೆ ವಾರದಿಂದ ನಡೆಯುತ್ತಿರುವ ಮುಷ್ಕರ ಜಟಾಪಟಿಗೆ ಯುಗಾದಿ ಬಳಿಕ ತಾರ್ಕಿಕ ಅಂತ್ಯ ಬೀಳುವ ಸಾಧ್ಯತೆ ಇದೆ. ಪ್ರಸ್ತುತ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಕೂಟ ಮತ್ತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಬಿಟ್ಟು ಉಳಿದ ನೌಕರರ ಸಂಘಟನೆಗಳೊಂದಿಗೆ ವೇತನ ಪರಿಷ್ಕರಣೆ ಬಗ್ಗೆ ಮಾತುಕತೆ ನಡೆಸಲು ಸರಕಾರ ಉದ್ದೇಶಿಸಿದೆ.

Advertisement

ಸೋಮವಾರವಷ್ಟೇ “ಉದಯವಾಣಿ’ ಮೆಗಾ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಸಂಧಾನವೊಂದೇ ಪರಿಹಾರ ಎಂಬ ಅಭಿಪ್ರಾಯ  ವ್ಯಕ್ತವಾಗಿತ್ತು.

ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ ಫೆಡರೇಶನ್‌ ಅಸೋಸಿ ಯೇಶನ್‌ (ಎಐಟಿಯುಸಿ), ಭಾರತೀಯ ಮಜ್ದೂರ್‌ ಸಂಘ ಒಕ್ಕೂಟ, ಐಎನ್‌ಟಿಯುಸಿ, ಕೆಬಿಎನ್‌ಎನ್‌ ವರ್ಕರ್ಸ್‌ ಫೆಡರೇಶನ್‌ಗೆ ಮಾತುಕತೆಗೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಹಬ್ಬದ ಬಳಿಕ ಮೊದಲ ಹಂತದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳ ಸಭೆ ನಡೆಯಲಿದೆ. ಅನಂತರ ಮುಖ್ಯಮಂತ್ರಿ ಗಳ ಅಧ್ಯಕ್ಷತೆಯಲ್ಲೂ ಮತ್ತೂಂದು ಸುತ್ತಿನ ಮಾತುಕತೆ ಆಗಲಿದೆ. ಆಯಾ ಸಂಘಟನೆಗಳ ಬೆಂಬಲಿಗರು ಪರಿಷ್ಕರಣೆಗೆ ಒಪ್ಪಿಕೊಂಡು ವಾಪಸಾಗಬಹುದು ಎಂಬ ಲೆಕ್ಕಾಚಾರ ಸರಕಾರದ್ದಾಗಿದೆ. ಇದು ಪರೋಕ್ಷವಾಗಿ ಮುಷ್ಕರವನ್ನು ದುರ್ಬಲಗೊಳಿಸುವ ತಂತ್ರವೂ ಆಗಿದೆ ಎನ್ನಲಾಗಿದೆ.

ಕೂಟಕ್ಕೆ ಹಿನ್ನಡೆ ಸಾಧ್ಯತೆ
ಒಂದು ವೇಳೆ ಸಭೆಯಲ್ಲಿ ವೇತನ ಪರಿಷ್ಕರಣೆಯು ಶೇ. 10-12ಕ್ಕೆ ಸೀಮಿತಗೊಂಡರೆ ಹಾಗೂ ಅನಂತರದಲ್ಲಿ ಅದನ್ನು ಒಪ್ಪಿಕೊಂಡು ಅರ್ಧಕ್ಕರ್ಧ ನೌಕರರು ಕರ್ತವ್ಯಕ್ಕೆ ಹಾಜರಾದರೆ, ಮುಷ್ಕರಕ್ಕೆ ಕರೆ ನೀಡಿರುವ ಕೂಟಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಆದರೆ, ಇದೆಲ್ಲವೂ ವೇತನ ಪರಿಷ್ಕರಣೆ ಪ್ರಮಾಣ ಮತ್ತು ನೌಕರರ ಸ್ಪಂದನೆಯನ್ನು ಅವಲಂಬಿಸಿದೆ.

ಸಾರಿಗೆ ಇಲಾಖೆ ಮತ್ತೂಂದು ಮೂಲಗಳ ಪ್ರಕಾರ, ಸಾರಿಗೆ ನೌಕರರ ಕೂಟವನ್ನೂ ಮಾತುಕತೆಗೆ ಆಹ್ವಾನಿಸುವ ಚಿಂತನೆ ಇದೆ. ಈಗಾಗಲೇ ಸರಕಾರದ ಒತ್ತಡಗಳಿಂದ ಸಾಕಷ್ಟು ಬಳಲಿದಂತೆ ಕಂಡ ಮುಖಂಡರು ಆ ಸಭೆಗೆ ಹಾಜರಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Advertisement

ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ವೇತನ ನೀಡುವುದಿಲ್ಲ, ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ತನ್ನ ನಿರ್ಣಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
– ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಸರಕಾರದೊಂದಿಗೆ ಮಾತುಕತೆಗೆ ನಾವು ಸಿದ್ಧ. ಆದರೆ, ಮಾತುಕತೆಯ ಪ್ರಶ್ನೆಯೇ ಇಲ್ಲ ಅಂದರೆ ಹೇಗೆ? ಸರಕಾರ ಮಾಧ್ಯಮಗಳ ಮುಂದೆ ಮಾತುಕತೆಗೆ ತಾನು ಸಿದ್ಧ ಎನ್ನುತ್ತದೆ. ಆದರೆ, ಇದುವರೆಗೆ ನಮಗೆ ಅಧಿಕೃತ ಆಹ್ವಾನ ಬಂದಿಲ್ಲ. ಸಂಧಾನಕ್ಕೆ ವೇದಿಕೆ ಸಿದ್ಧಮಾಡುವ ನಿಟ್ಟಿನಲ್ಲಿ ಸರಕಾರ ಯಾವ ಪ್ರಯತ್ನ ಮಾಡಿದೆ?
– ಆರ್‌. ಚಂದ್ರಶೇಖರ್‌, ಸಾರಿಗೆ ನೌಕರರ ಕೂಟದ ಅಧ್ಯಕ್ಷ

ಸರಕಾರವೂ ಮಾತುಕತೆಗೆ ಸಿದ್ಧವಾಗಿದೆ. ಆದರೆ, ಯಾವುದರ ಬಗ್ಗೆ ಮಾತುಕತೆ ನಡೆಸಬೇಕು ಎನ್ನುವುದನ್ನು ನೌಕರರು ತೀರ್ಮಾನಿಸ ಬೇಕು. 6ನೇ ವೇತನ ಆಯೋಗದ ಶಿಫಾರಸುಗಳ ಜಾರಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಇನ್ನು ಅದಕ್ಕೆ ಜೋತುಬೀಳುವುದರಲ್ಲಿ ಅರ್ಥವಿಲ್ಲ.
– ಅಂಜುಂ ಪರ್ವೇಜ್‌, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ

ಪ್ರತಿಷ್ಠೆಗಳಿಗೆ ಅಂಟಿಕೊಂಡರೆ ಯಾವ ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಮುಷ್ಕರಗಳಷ್ಟೇ ಸಂಧಾನ ಕೂಡ ತುಂಬಾ ಮುಖ್ಯ. ಹಠಮಾರಿತನ ಅಥವಾ ಹುಂಬತನದಿಂದ ಪರಿಹಾರ ಆಗುವಂತಹ ಸಮಸ್ಯೆ ಇದಲ್ಲ.
– ಅನಂತ ಸುಬ್ಬರಾವ್‌, ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ ಫೆಡರೇಷನ್‌ ಅಸೋಸಿಯೇಶನ್‌ ಅಧ್ಯಕ್ಷ

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next