Advertisement

ಸಾರಿಗೆ ನೌಕರರಿಗೆ ಜುಲೈ ವೇತನ ಇನ್ನೂ ಬಂದಿಲ್ಲ 

12:25 AM Aug 23, 2021 | Team Udayavani |

ಮಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲೂ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ಆಗಸ್ಟ್‌ ತಿಂಗಳು ಮುಗಿಯುತ್ತ ಬಂದರೂ ಜುಲೈ ಸಂಬಳ ಕೈ ಸೇರಿಲ್ಲ. ನೌಕರರು ಸಂಕಷ್ಟದ ದಿನಗಳನ್ನು ಎದುರಿಸುವಂತಾಗಿದೆ.

Advertisement

ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿ ನಾಲ್ಕೂ ರಸ್ತೆ ಸಾರಿಗೆ ನಿಗಮದಲ್ಲಿ ಸುಮಾರು 1.20 ಲಕ್ಷ ನೌಕರರಿದ್ದಾರೆ. ಕೊರೊನಾ ಪೂರ್ವದಲ್ಲಿ ಸಾಮಾನ್ಯವಾಗಿ ತಿಂಗಳ ಮೊದಲ ವಾರ ಸಂಬಳ ಆಗುತ್ತಿತ್ತು. ಬಳಿಕ ನಿಗಮ ಸಂಕಷ್ಟಕ್ಕೆ ಸಿಲುಕಿದ್ದು ತಿಂಗಳು ಕಳೆದಂತೆ ಸಂಬಳ ವಿಳಂಬವಾಗಲಾರಂಭಿಸಿತು. ಜುಲೈಯ ವೇತನವೇ ಬಂದಿಲ್ಲ!

ಕೊರೊನಾ ಕಾರಣದಿಂದಾಗಿ ನೂರಾರು ಬಸ್‌ ಟ್ರಿಪ್‌ಗ್ಳು ಕಡಿತಗೊಂಡಿವೆ. ಕೆಲವು ರೂಟ್‌ಗಳಿಗೆ ಇನ್ನೂ ಸಂಚಾರ ಆರಂಭಗೊಂಡಿಲ್ಲ. ಶೇ. 50ರಷ್ಟು ವೋಲ್ವೋ ಸೇರಿದಂತೆ ಹವಾನಿಯಂತ್ರಿತ ಬಸ್‌ಗಳು ಕಾರ್ಯಾರಂಭಿಸಲಿಲ್ಲ. ಆದ್ದರಿಂದ ನೌಕರರಿಗೆ ಸಮರ್ಪಕ ಡ್ನೂಟಿ ಕೂಡ ಇಲ್ಲದಂತಾಗಿದೆ. ಕೆಲವು ವಿಭಾಗಗಳಲ್ಲಿ ತಿಂಗಳಲ್ಲಿ ಶೇ. 50ರಷ್ಟು ಡ್ನೂಟಿ ಮಾತ್ರ ಸಿಗುತ್ತಿದೆ. ನೌಕರರ ರಜೆಗಳು ಈಗಾಗಲೇ ಮುಗಿದಿರುವ ಕಾರಣ ಸಂಬಳ ರಹಿತ ರಜಾ ಆಗುತ್ತಿದ್ದು, ದಿನ ಕಳೆಯಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಅವರು.

ಕರಾವಳಿಯ 5,000ಕ್ಕೂ ಅಧಿಕ ನೌಕರರು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕೆಎಸ್ಸಾರ್ಟಿಸಿ ವಿಭಾಗಗಳಿವೆ. ಮಂಗಳೂರು ವಿಭಾಗದಲ್ಲಿ ಕುಂದಾಪುರ, ಉಡುಪಿ ಮತ್ತು ಮಂಗಳೂರಿನ 3 ಡಿಪೋ ಇವೆ. ಪುತ್ತೂರು ವಿಭಾಗದಲ್ಲಿ ಪುತ್ತೂರು, ಬಿ.ಸಿ.ರೋಡು, ಧರ್ಮಸ್ಥಳ, ಮಡಿಕೇರಿ, ಸುಳ್ಯ ಡಿಪೋಗಳಿವೆ. ಎರಡೂ ಕಡೆ ಸೇರಿ 5000ಕ್ಕೂ ಹೆಚ್ಚಿನ ನೌಕರರಿದ್ದಾರೆ. ಕೆಲವರು ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಇದೊಂದೇ ಆದಾಯ ಮೂಲ ದಿಂದ ಜೀವನ ಸಾಗಿಸುವ ಅನೇಕ ಕುಟುಂಬಗಳಿದ್ದು ಹಲವರ ಜೀವನ ನಿರ್ವಹಣೆ ಕಷ್ಟವಾಗಿದೆ.

Advertisement

ವಿಳಂಬಕ್ಕೆ ಕಾರಣ:

ಕೊರೊನಾ ಬಂದ ಬಳಿಕ ಸಾವಿರಾರು ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ನೌಕರರ ಸಂಬಳಕ್ಕೆ ಮಾಸಿಕ 350 ಕೋಟಿ ರೂ. ಬೇಕು. ಇದೀಗ ಅನ್‌ಲಾಕ್‌ ಆಗಿದ್ದರೂ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಸದ್ಯದ ಆದಾಯ ಡೀಸೆಲ್‌ ವೆಚ್ಚ ಸೇರಿದಂತೆ ನಿರ್ವಹಣೆಗೇ ಸಾಲುತ್ತಿಲ್ಲ. ಆದ್ದರಿಂದ ವೇತನ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಕೂಡಲೇ ಪಾವತಿಸಲಿ :

ನಿಗಮದಲ್ಲಿ 1.20 ಲಕ್ಷ ನೌಕರರಿದ್ದು, ವೇತನ ಸಿಗದೆ ಕುಟುಂಬ ನಿರ್ವಹಣೆಗೆ ಸಂಕಷ್ಟಪಡುತ್ತಿದ್ದಾರೆ. ಈ ಮೊದಲು ಬರುತ್ತಿದ್ದ ವೇತನವಾಗಲಿ, ಭತ್ತೆಯಾಗಲಿ ಕೊರೊನಾ ಆರಂಭವಾದ ಬಳಿಕ ಬರುತ್ತಿಲ್ಲ. ನೌಕರರ ಪರಿಸ್ಥಿತಿಯನ್ನು ಗಮನಿಸಿ ಸರಕಾರ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ.– ಎಚ್‌.ವಿ. ಅನಂತಸುಬ್ಬ ರಾವ್‌,  ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್‌ ವರ್ಕರ್ ಫೆಡರೇಶನ್‌ ಅಧ್ಯಕ್ಷ

 ಪಾವತಿಗೆ ಕ್ರಮ :

ಸಾರಿಗೆ ನೌಕರರಿಗೆ ಕಳೆದ ತಿಂಗಳ ಸಂಬಳ ಆಗದಿರುವ ವಿಚಾರ ಗಮನಕ್ಕೆ ಬಂದಿದೆ. ಹಣಕಾಸು ವಿಭಾಗದ ಅಧಿಕಾರಿಗಳ ಜತೆ ಮಾತನಾಡಲಾಗಿದ್ದು, ಕೂಡಲೇ ಪಾವತಿಗೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುತ್ತೇವೆ.– ಶ್ರೀರಾಮುಲು, ಸಾರಿಗೆ ಸಚಿವರು

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next