ಬೆಂಗಳೂರು: “ಶಕ್ತಿ’ ಯೋಜನೆಯಿಂದಾಗುತ್ತಿರುವ ನಷ್ಟ ಭರಿಸಿಕೊಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 27ರಂದು ಕರೆ ನೀಡಿದ್ದ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸೇವೆಗಳ ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದಿರುವ ಖಾಸಗಿ ವಾಹನ ಚಾಲಕರು ಮತ್ತು ಮಾಲಿಕರು, ಸರ್ಕಾರಕ್ಕೆ ಆಗಸ್ಟ್ 10ರ ಗಡುವು ನೀಡಿದ್ದಾರೆ.
20ಕ್ಕೂ ಅಧಿಕ ಸಂಘಟನೆಗಳು ಅಂದು (ಜು. 27) ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸೋಮವಾರ ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆಯಲ್ಲಿ ಇಡೀ ದಿನ ಸರಣಿ ಸಭೆಗಳು ನಡೆದವು. ರಾಜ್ಯ ಖಾಸಗಿ ಸಾರಿಗೆ ಒಕ್ಕೂಟಗಳ ಫೆಡರೇಷನ್, ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರ ಸಂಘಗಳ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಹಲವು ರೀತಿಯ ಮನವೊಲಿಕೆ ಯತ್ನಗಳು ನಡೆದವು. ಅಂತಿಮವಾಗಿ ಆ.10ರವರೆಗೆ ಕಾಲಾವಕಾಶ ನೀಡುವಂತೆ ಸಚಿವರು ಸೂಚಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಚಾಲಕರು ಮತ್ತು ಮಾಲಿಕರು, ನಿಗದಿತ ಗಡುವಿನೊಳಗೆ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಇದರೊಂದಿಗೆ 27ರಂದು ನಡೆಯಬೇಕಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಮಹಿಳೆಯರಿಗೆ “ಶಕ್ತಿ’ ಯೋಜನೆ ಅಡಿ ಉಚಿತ ಬಸ್ ಪ್ರಯಾಣ ಘೋಷಿಸಿದ ಬಳಿಕ ಖಾಸಗಿ ಬಸ್ ಮಾಲಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಅವಲಂಬಿಸಿದ ಚಾಲಕರು ಮತ್ತು ನಿರ್ವಾಹಕರ ಹಾಗೂ ಅವಲಂಬಿತ ಕುಟುಂಬಗಳ ಜೀವನ ನಿರ್ವಹಣೆ ಕೂಡ ಕಷ್ಟ ಆಗುತ್ತಿದೆ. ಆದ್ದರಿಂದ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು. ಇದು ಸಾಧ್ಯವಿಲ್ಲ ಎಂದಾದರೆ ಮೋಟಾರು ವಾಹನ ತೆರಿಗೆ ಸೇರಿದಂತೆ ಎಲ್ಲ ರೀತಿಯ ತೆರಿಗೆಗಳಿಂದ ಮುಕ್ತಗೊಳಿಸಬೇಕು ಎಂದು ಖಾಸಗಿ ಸಾರಿಗೆ ಒಕ್ಕೂಟಗಳ ಪದಾಧಿಕಾರಿಗಳು ಒತ್ತಾಯಿಸಿದರು.
ಅದೇ ರೀತಿ, ನಗರದಲ್ಲಿ ಇ-ಟ್ಯಾಕ್ಸಿ, ರ್ಯಾಪಿಡೊ ಬೈಕ್ ಸೇರಿದಂತೆ ವಿವಿಧ ಪ್ರಕಾರದ ಸೇವೆಗಳಿಂದ ಆಟೋ ಚಾಲಕರ ಬದುಕು ಬೀದಿಗೆ ಬಂದಿದೆ. ಈ ಮಧ್ಯೆ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ನೀಡುತ್ತಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ರೂಪದಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳನ್ನು ಸುದೀರ್ಘವಾಗಿ ಆಲಿಸಿದ ಸಚಿವ ರಾಮಲಿಂಗಾರೆಡ್ಡಿ, “ಖಾಸಗಿ ಬಸ್, ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರ ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಲಿದೆ. ಈ ಸಂಬಂಧ ಆಗಸ್ಟ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಹಾಗಾಗಿ, ಮುಷ್ಕರದ ನಿರ್ಧಾರದಿಂದ ಹಿಂದೆಸರಿಯುವಂತೆ’ ಮನವಿ ಮಾಡಿದರು. ಆಗ ಪದಾಧಿಕಾರಿಗಳು ಆಗಸ್ಟ್ 10ರವರೆಗೆ ಗಡುವು ನೀಡಿ ಹಿಂಪಡೆದರು.
ಸಾರಿಗೆ ಇಲಾಖೆ ಆಯುಕ್ತ ಯೋಗೇಶ್, ಹೆಚ್ಚುವರಿ ಆಯುಕ್ತರಾದ ಜ್ಞಾನೇಂದ್ರ ಕುಮಾರ್, ಸಿ. ಮಲ್ಲಿಕಾರ್ಜುನ, ಉಮಾಶಂಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.