Advertisement

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ

01:28 AM Nov 06, 2024 | Team Udayavani |

ಬೆಂಗಳೂರು: ಕೆಎಸ್ಸಾರ್ಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಸೋಮವಾರ ಒಂದೇ ದಿನ 1.23 ಕೋಟಿ ಜನ ಪ್ರಯಾಣಿಸಿದ್ದು ಇದು ಸಾರಿಗೆ ನಿಗಮಗಳ ಇತಿಹಾಸದಲ್ಲೇ ದಾಖಲೆಯಾಗಿದೆ.

Advertisement

ಬೆಳಕಿನಹಬ್ಬ ದೀಪಾವಳಿ ಮತ್ತು ವಾರಾಂತ್ಯ ಜತೆಯಲ್ಲೇ ಬಂದಿದ್ದರಿಂದ ಸರಣಿ ರಜೆ ಇತ್ತು. ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಜನ ಊರುಗಳಿಗೆ ತೆರಳಿದ್ದರು. ಅವರೆಲ್ಲ ಸೋಮವಾರ ರಾಜಧಾನಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಇದರಲ್ಲಿ ಬಹುತೇಕರು ಕೆಎಸ್ಸಾರ್ಟಿಸಿ ಬಸ್‌ಗಳ ಮೂಲಕ ಬಂದಿಳಿದಿದ್ದು, ಒಂದೇ ದಿನ 1.23 ಕೋಟಿ ಜನ ಪ್ರಯಾಣಿಸಿದ್ದಾರೆ. ಇದು ಈವರೆಗಿನ ದಾಖಲೆಯಾಗಿದೆ.

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ಹೆಚ್ಚಾ ಕಡಿಮೆ ತಲಾ 39 ಲಕ್ಷ ಜನ ಪ್ರಯಾಣಿಸಿದ್ದರೆ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಕ್ರಮವಾಗಿ 27 ಲಕ್ಷ ಹಾಗೂ 18.65 ಲಕ್ಷ ಜನ ಪ್ರಯಾಣಿಸಿದ್ದಾರೆ. ಒಟ್ಟಾರೆ 1.23 ಕೋಟಿಯಲ್ಲಿ ಮಹಿಳೆಯರ ಸಂಖ್ಯೆಯೇ 72.35 ಲಕ್ಷ ಇದೆ. ಈ ಪ್ರಯಾಣದಿಂದ ಹರಿದುಬಂದ ಆದಾಯ 18.62 ಕೋಟಿ ಆಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಪೂರ್ವದಲ್ಲಿ ಸಾರಿಗೆ ನಿಗಮಗಳಲ್ಲಿ ನಿತ್ಯ ಸರಾಸರಿ 80-85 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಗ್ಯಾರಂಟಿ ಶಕ್ತಿ’ ಯೋಜನೆ ಸಾರಿಗೆ ನಿಗಮಗಳಿಗೆ ಅಕ್ಷರಶಃ ಶಕ್ತಿ’ ತುಂಬಿತು. ಈಗ ಕಳೆದ ಒಂದೂವರೆ ವರ್ಷದಿಂದ ಪ್ರಯಾಣಿಕರ ಸಂಖ್ಯೆ ನಿತ್ಯ 1 ಕೋಟಿ ಆಸುಪಾಸು ಇದೆ. ಹಬ್ಬದ ಸೀಜನ್‌ಗಳಲ್ಲಿ ಸಹಜವಾಗಿ ಇದು 1.08ರಿಂದ 1.10 ಕೋಟಿ ತಲುಪುತ್ತದೆ. ಸೋಮವಾರ (ನ. 4)ದ ಪ್ರಯಾಣಿಕರ ದಟ್ಟಣೆಯು ಈ ಎಲ್ಲ ಅಂಕಿ-ಅಂಶಗಳನ್ನು ಮೀರಿದೆ.

ಬುಕಿಂಗ್‌ನಲ್ಲೂ ದಾಖಲೆ
ಇನ್ನು ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ (ನ. 3) ಕೆಎಸ್‌ಆರ್‌ಟಿಸಿಯ ಅವತಾರ್‌’ ಆನ್‌ಲೈನ್‌ ಬುಕಿಂಗ್‌ ಕೂಡ ದಾಖಲೆ ಬರೆದಿದೆ. ಅಂದು ಒಂದೇ ದಿನ 85,462 ಆನ್‌ಲೈನ್‌ ಸೀಟ್‌ಗಳು ಬುಕಿಂಗ್‌ ಆಗಿದ್ದು, ಇದರಿಂದ 5.59 ಕೋಟಿ ಆದಾಯ ಹರಿದುಬಂದಿದೆ. ಇದೇ ಹಬ್ಬದ ಸೀಜನ್‌ನಲ್ಲಿ ಅಂದರೆ ಅ. 30ರಂದು 67,033 ಆಸನಗಳು ಅವತಾರ್‌’ ಮೂಲಕ ಬುಕಿಂಗ್‌ ಮಾಡಲಾಗಿತ್ತು. ಅದರಿಂದ 4.63 ಕೋಟಿ ರೂ. ಆದಾಯ ಹರಿದುಬಂದಿದೆ ಎಂದೂ ಕೆಎಸ್‌ಆರ್‌ಟಿಸಿ ಎಂಡಿ ವಿ. ಅನ್ಬುಕುಮಾರ್‌ ತಿಳಿಸಿದ್ದಾರೆ.

Advertisement

ಹಬ್ಬದ ಹಿನ್ನೆಲೆಯಲ್ಲಿ ಗರಿಷ್ಠ ಪ್ರಯಾಣಿಕರು ಮತ್ತು ಗರಿಷ್ಠ ಬುಕಿಂಗ್‌ ಆಗಿದೆ. ಈ ಅಂಕಿ-ಅಂಶಗಳು ನಿಗಮಗಳ ಸೇವೆಗೆ ಹಿಡಿದ ಕನ್ನಡಿಯಾಗಿದೆ. ಜನರ ವಿಶ್ವಾಸ ಗಳಿಸುವಲ್ಲಿ ಸಾರಿಗೆ ನಿಗಮಗಳು ಯಶಸ್ವಿಯಾಗಿವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಇದರಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಸಾರಿಗೆ ನೌಕರರು ಅದರಲ್ಲೂ ಚಾಲಕರು, ನಿರ್ವಾಹಕರ ಕೊಡುಗೆ ದೊಡ್ಡದಿದೆ.
– ವಿ. ಅನ್ಬುಕುಮಾರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ

Advertisement

Udayavani is now on Telegram. Click here to join our channel and stay updated with the latest news.

Next