ವಿಜಯಪುರ: ಸಾರಿಗೆ ನೌಕರರಿಗೆ ಕೋಡಿಹಳ್ಳಿ ಚಂದ್ರಶೇಖರ ಏನೆಂದು ಈಗ ಸ್ಪಷ್ಟ ಅರಿವಾಗಿದೆ. ಹೀಗಾಗಿ ಅವರೊಂದಿಗೆ ನಮ್ಮ ಸಿಬ್ಬಂದಿ ಇನ್ನೆಂದೂ ಹೋರಾಟದ ಹೆಸರಿನಲ್ಲಿ ಕೈ ಜೋಡಿಸಲಾರರು ಎಂದು ಸಾರಿಗೆ ಖಾತೆ ಹೊಂದಿರುವ ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಹೆಚ್ಚು ಸಂಕಷ್ಟ ಅನುಭವಿಸಿದ್ದೇ ನಮ್ಮ ನಿಗಮಗಳು ಹಾಗೂ ನಮ್ಮ ಸಂಸ್ಥೆಗಳ ಸಿಬ್ಬಂದಿ. ಸಾರಿಗೆ ನೌಕರರ ಮುಷ್ಕರ ಹಾಗೂ ಕೋವಿಡ್ ಲಾಕ್ ಡೌನ್ ಕಾರಣದಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಕಾರಣ ಸಿಬ್ಬಂದಿಗೆ ಸಂಬಳ ಕೊಡಲೂ ನಮಗೆ ಆರ್ಥಿಕ ಶಕ್ತಿ ಇಲ್ಲವಾಗಿತ್ತು ಎಂದು ಪರಿಸ್ಥಿತಿ ವಿವರಿಸಿದರು. ಸಾರಿಗೆ ಸಂಸ್ಥೆ ಸಿಬ್ಬಂದಿ ಸಂಕಷ್ಟ ಅರಿತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲು 2480 ಕೋಟಿ ರೂ. ನೀಡಿದ್ದು, ಇದೀಗ ಮತ್ತೆ 165 ಕೋಟಿ ರೂ. ನೀಡಿದ್ದಾರೆ. ಈ ಹಣದಿಂದಲೇ ಸಂಬಳ ನೀಡಲಾಗುತ್ತದೆ ಎಂದು ಸಮಜಾಯಿಸಿ ನೀಡಿದ ಅವರು, ಸಾರಿಗೆ ನಿಗಮಗಳ ಎಲ್ಲ ನೌಕರರಿಗೆ ನಾಳೆಯಿಂದ ಎರಡು ಹಂತದಲ್ಲಿ ಸಂಬಳ ವಿತರಣೆ ನಡೆಯಲಿದೆ.
ಎಲ್ಲ ಸಿಬ್ಬಂದಿಗೆ ಸಂಬಳ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಕೋಡಿಹಳ್ಳಿ ಚಂದ್ರಶೇಖರ ಹೋರಾಟದ ಬಗ್ಗೆ ನಮ್ಮ ಸಾರಿಗೆ ಸಿಬ್ಬಂದಿಗೆ ಗೊತ್ತಾಗಿದೆ. ಕೋಡಿಹಳ್ಳಿಗೆ ಹೋರಾಟ ಮಾಡೋದು ಮಾತ್ರ ಗೊತ್ತು. ನಮಗೆ ನಮ್ಮ ಸಿಬ್ಬಂದಿ ನೋವಿಗೆ ಸ್ಪಂದಿಸುವುದು ಗೊತ್ತು. ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಲ್ಲಿದ್ದರೂ ನಮ್ಮ ಸಿಬ್ಬಂದಿಗೆ ಸರ್ಕಾರ ಸಹಾನುಭೂತಿ ತೋರಿದೆ. ಆದ್ದರಿಂದ ಸಿಬ್ಬಂದಿ ಸಂಬಳ ಪಡೆಯಲು ಸಾಧ್ಯವಾಗಿದೆ ಎಂದರು.