Advertisement

ಲಸಿಕೆಯೊಂದಿಗೆ ಹಳ್ಳಿ ಗೆ ಸಾರಿಗೆ ಬಸ್‌

04:28 PM Jun 16, 2021 | Team Udayavani |

ಕಲಬುರಗಿ: ಜಿಲ್ಲೆಯ ಗ್ರಾಮೀಣ ಭಾಗಕ್ಕೆ ತೆರಳಿ ಕೊರೊನಾ ಲಸಿಕೆ ಹಾಕಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳು ಸಿದ್ಧವಾಗಿವೆ. ಜಿಲ್ಲಾಡಳಿತ ಸಹಯೋಗದೊಂದಿಗೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳನ್ನು ವೈದ್ಯಕೀಯ ಸೌಲಭ್ಯಗಳೊಂದಿಗೆ ಸುಸಜ್ಜಿತ ವಾಗಿ ಸಿದ್ದಪಡಿಸಲಾಗಿದ್ದು, ಬುಧವಾರ (ಜೂ. 16) ಚಾಲನೆ ನೀಡಲಾಗುತ್ತಿದೆ.

Advertisement

ವ್ಯಾಕ್ಸಿನ್‌ ಹೊತ್ತ ಬಸ್‌ಗಳು ಇಲ್ಲಿಯ ವರೆಗೆ ವ್ಯಾಕ್ಸಿನ್‌ ಹಾಕಿಸಿಕೊಳ್ಳದ ಅದರಲ್ಲೂ ಸಮುದಾಯ ಆರೋಗ್ಯದಿಂದ ದೂರ ಇರುವ ಹಳ್ಳಿಗೆ ತಲುಪಿ ಜನರಿಗೆ ಲಸಿಕೆ ಹಾಕಲಿವೆ. ಇದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಇರಲಿದ್ದು ಲಸಿಕೆ ನೀಡುತ್ತಾರೆ. ಬಸ್‌ ಚಾಲಕ ಹಾಗೂ ಡೀಸೆಲ್‌ನ್ನು ಸಾರಿಗೆ ಸಂಸ್ಥೆ ನೀಡಲಿದೆ. ಎನ್‌ಇಕೆಆರ್‌ಟಿಸಿ ಸಂಸ್ಥೆ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ವರ್ಕ್‌ ಶಾಪ್‌ನಲ್ಲಿ ಮಂಗಳವಾರ ಈ ಬಸ್‌ಗಳನ್ನು ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಕೊರೊನಾ ನಿಯಂತ್ರಣದ ಲಸಿಕೆಯನ್ನು ಜನರಿಗೆ ವ್ಯಾಪಕವಾಗಿ ತಲುಪಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ರೈತರು, ಕಾರ್ಮಿಕರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದ ಅವರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲದೇ ಇತರ ಜಿಲ್ಲೆಗಳಿಂದಲೂ ಬೇಡಿಕೆ ಬಂದಲ್ಲಿ ಈ ರೀತಿಯ ಬಸ್‌ಗಳನ್ನು ಸಿದ್ಧಪಡಿಸಿ ಕೊಡಲಾಗುವುದು.

ಒಟ್ಟಾರೆ ಕೊರೊನಾ ವ್ಯಾಕ್ಸಿನ್‌ ಎಲ್ಲರಿಗೂ ತಲುಪಿಸಿ ಕೊರೊನಾ ಹೊಡೆದೋಡಿಸಬೇಕಿದೆ ಎಂದು ಹೇಳಿದರು. ಈಗಾಗಲೇ ಆರು ಬಸ್‌ಗಳನ್ನು ಆಕ್ಸಿಜನ್‌ ಸೌಲಭ್ಯ ಒದಗಿಸಲು ನೀಡಲಾಗಿದೆ. 46 ಚಾಲಕರನ್ನು ಸೇವೆಗೆ ಬಿಡಲಾಗಿದೆ ಎಂದರಲ್ಲದೇ ಬಸ್‌ನ್ನು ಸಜ್ಜುಗೊಳಿಸಿದ ಸಂಸ್ಥೆಯ ಸಿಬ್ಬಂದಿಗೆ ಅಭಿನಂದಿಸಿದರು. ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್‌ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next