Advertisement

ಕಾಲ ಮತ್ತು ದೇಶಗಳನ್ನು ಮೀರುವುದು

02:45 AM Jul 05, 2021 | Team Udayavani |

ಝೆನ್‌ ಕಥೆಯೊಂದಿದೆ. ತಾಂಗ್‌ ವಂಶದ ಅರಸರು ಚೀನವನ್ನು ಆಳುತ್ತಿದ್ದ ಕಾಲದಲ್ಲಿ ಅಲ್ಲೊಬ್ಬ ಝೆನ್‌ ಗುರು ಇದ್ದರು. ಅಧ್ಯಯನ ಅಂದರೆ ಅವರಿಗೆ ಅಮಿತಾಸಕ್ತಿ. ಹತ್ತು ಸಾವಿರ ಗ್ರಂಥಗಳನ್ನು ಓದಿ ಜೀರ್ಣಿಸಿಕೊಂಡಿದ್ದರು. ಲಿ ಬೊ ಎಂದವರ ಹೆಸರು. ಹತ್ತು ಸಹಸ್ರ ಗ್ರಂಥಗಳನ್ನು ಅಧ್ಯಯನ ಮಾಡಿದ್ದರಿಂದ “ದಶ ಸಹಸ್ರ ಗ್ರಂಥಗಳ ಲಿ’ ಎಂಬ ಉಪಾಧಿ ಅವರಿಗೆ ಅಂಟಿಕೊಂಡಿತ್ತು.

Advertisement

ಒಂದು ದಿನ ಅವರು ಇನ್ನೊಬ್ಬ ಝೆನ್‌ ಗುರು ಝಿಝಾಂಕ್‌ ಎಂಬವರ ಬಳಿ ಒಂದು ಪ್ರಶ್ನೆ ಕೇಳಿದರು. “ಒಂದು ಗ್ರಂಥದಲ್ಲಿ, ಸಾಸಿವೆ ಕಾಳಿನೊಳಗೆ ಸುಮೇರು ಪರ್ವತವನ್ನು ಅಡಗಿಸ ಬಹುದು ಎಂಬ ಸಾಲು ಬರುತ್ತದೆ, ಇದರ ಅರ್ಥವೇನು? ಪುಟ್ಟ ಸಾಸಿವೆ ಕಾಳಿನೊಳಗೆ ಬೃಹದಾಕಾರದ ಸಾಸಿವೆ ಕಾಳು ಕುಳಿತುಕೊಳ್ಳುವ ಬಗೆ ಹೇಗೆ’ ಎಂಬುದೇ ಅವರ ಪ್ರಶ್ನೆ.

ಝಿಝಾಂಕ್‌ ಉತ್ತರಿಸಿದರು, “ನಿಮ್ಮನ್ನು ದಶ ಸಹಸ್ರ ಗ್ರಂಥಗಳ ಲಿ ಎಂಬುದಾಗಿ ಕರೆಯುತ್ತಾರಲ್ಲವೆ? ಹತ್ತು ಸಾವಿರ ಗ್ರಂಥಗಳು ನಿನ್ನ ಈ ತೆಂಗಿನ ಕಾಯಿಯಷ್ಟು ದೊಡ್ಡ ತಲೆಬುರುಡೆ ಯೊಳಗೆ ಹೇಗೆ ಹಿಡಿದವು? ಸುಮೇರು ಪರ್ವತ ಸಾಸಿವೆ ಕಾಳಿನೊಳಗೆ ಅಡಗುವುದು ಕೂಡ ಹಾಗೆಯೇ…’

ಸಾಸಿವೆ ಕಾಳಿನ ಈ ಉದಾಹರಣೆ ಯೋಗಸೂತ್ರದಲ್ಲಿಯೂ ಬರುತ್ತದೆ. ಕೃಷ್ಣನ ಕಥಾನಕದಲ್ಲಿ ತಾಯಿ ಯಶೋದೆಗೆ ಪುಟ್ಟ ಕೃಷ್ಣನ ಬಾಯಿಯೊಳಗೆ ವಿಶ್ವವೇ ಕಾಣಿಸುವುದು ಕೂಡ ಇದಕ್ಕೆ ಸಂವಾದಿಯಾದುದು. ಆನೆಯನ್ನು ಸೂಜಿಯ ರಂಧ್ರದೊಳಗೆ ತೂರಿಸಿ ತೆಗೆಯುವ ಇನ್ನೊಂದು ನಿದರ್ಶನವೂ ಇದೆ. ಯೋಗ ಸೂತ್ರಗಳಲ್ಲಿ ವಿಶ್ವವನ್ನು ಸಾಸಿವೆ ಕಾಳಿನೊಳಗೆ ಹಿಡಿದಿರಿಸಬಹುದು ಎಂಬುದಾಗಿ ಬರುತ್ತದೆ. ಸಾಸಿವೆ ಕಾಳು ನಾವು ದಿನನಿತ್ಯವೂ ಅಡುಗೆಯಲ್ಲಿ ಉಪಯೋಗಿಸುವಂಥದ್ದು. ಅದು ಎಷ್ಟು ಚಿಕಣಿ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸಣ್ಣಾತಿಸಣ್ಣ ವಸ್ತುಗಳಲ್ಲಿ ಅದು ಒಂದು. ಕಾಲ ಮತ್ತು ಆಕಾಶ ಅಂದರೆ ಸಮಯ ಮತ್ತು ದೂರ ಎಂಬುದು ಕೇವಲ ಮನಸ್ಸು ಸೃಷ್ಟಿಸಿಕೊಂಡ ಪರಿಕಲ್ಪನೆಗಳು ಎಂಬುದರಿಂದಾಗಿಯೇ ವಿಶ್ವವನ್ನು ಸಾಸಿವೆ ಕಾಳಿನೊಳಗೆ ಹೊಗ್ಗಿಸಬಹುದು ಎಂಬ ಮಾತು. ಎಲ್ಲವನ್ನೂ ತಾರ್ಕಿಕವಾಗಿ, ಕಾರ್ಯ – ಕಾರಣಗಳ ಹಿನ್ನೆಲೆಯಲ್ಲಿ ಆಲೋಚಿಸುವ ನಮ್ಮ ಮನಸ್ಸಿಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ವಾಗಬಹುದು. ಅಲ್ಲದೆ, ಸಮಯ ಮತ್ತು ದೂರ ಗಳು ಯಾವ ಮನಸ್ಸಿನ ಸೃಷ್ಟಿಯೋ ಅದೇ ಮನಸ್ಸು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿರುವುದರಿಂದಲೂ ಇದು ಜಟಿಲ ಎನ್ನಿಸಬಹುದು. ಆದರೆ ಆಧುನಿಕ ವಿಜ್ಞಾನವೂ ಕಾಲ ಮತ್ತು ದೂರಗಳನ್ನು ಹಿಗ್ಗಿಸಬಹುದು, ಕುಗ್ಗಿಸಬಹುದು ಎಂದು ಹೇಳುತ್ತದೆ.

ಅನುಭವದ ಮಟ್ಟದಲ್ಲಿಯೂ ಇದನ್ನು ಗಮನಿಸಬಹುದು. ನಮಗೆ ಬಹಳ ಆನಂದವಾಗಿದ್ದಾಗ ದಿನಗಳು ಬಹಳ ಬೇಗನೆ ಸರಿದುಹೋದಂತೆ ಭಾಸವಾಗುತ್ತದೆ. ದುಃಖ, ಬೇಸರ, ಕಷ್ಟದ ದಿನಗಳು ವರ್ಷಗಳಂತೆ ಅನುಭವಕ್ಕೆ ಬರುತ್ತವೆ. ಬಹಳ ಖುಷಿಯಾಗಿದ್ದಾಗ 24 ತಾಸುಗಳು ಕೆಲವೇ ಕ್ಷಣಗಳಂತೆ ಅನ್ನಿಸುತ್ತವೆ, ಕಷ್ಟ ಇದ್ದಾಗ ಅವೇ 24 ತಾಸುಗಳು ವರ್ಷಗಳಂತೆ ಭಾಸವಾಗುತ್ತವೆ. ದೇಶ ಅಥವಾ ದೂರವೂ ಹೀಗೆಯೇ. ಹಿಂದೆ ಋಷಿಮುನಿಗಳು ಮನೋವೇಗದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿದ್ದರಂತೆ. ಕೆಲವೊಮ್ಮೆ ನಾವು ಎಲ್ಲದರೂ ಹೋಗುವಾಗ ದಾರಿ ಬಹಳ ದೀರ್ಘ‌ವಾಗಿರುವಂತೆ ಅನ್ನಿಸುತ್ತದೆ. ಆದರೆ ಅದೇ ದಾರಿ ಹಿಂದಿರುಗುವಾಗ ಹತ್ತಿರ ಎಂದು ಭಾಸವಾಗುತ್ತದೆ.

Advertisement

ಕಾಲ ಮತ್ತು ದೇಶ ಅಥವಾ ಸಮಯ ಮತ್ತು ದೂರ – ಎರಡೂ ಅವರವರ ಮನಸ್ಸಿನ ಸ್ಥಿತಿಗೆ ತಕ್ಕಂತೆ ಅನುಭವಕ್ಕೆ ಬರುವಂಥವು. ಆಳವಾದ ಧ್ಯಾನದಿಂದ ಕಾಲ ಮತ್ತು ದೇಶಗಳನ್ನು ಮೀರಬಹುದು.
( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next