Advertisement

ದಾರ್ಶನಿಕರ ಸಂದೇಶ-ಚಿಂತನೆ ಪಾಲಿಸಿ

01:09 PM May 13, 2017 | |

ದಾವಣಗೆರೆ: ಮಹಾನ್‌ ದಾರ್ಶನಿಕರು, ನಾಯಕರ ಸಂದೇಶ, ಆಶಯ, ಚಿಂತನೆಯನ್ನು ಅಕ್ಷರಶಃ ಪಾಲಿಸಿದಾಗ ಮಾತ್ರ ಅವರ ಜಯಂತಿ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ)ಯಿಂದ ಶುಕ್ರವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್‌ರವರ 126ನೇ ಜಯಂತಿ, ಬುದ್ಧ ಬಸವ ಜಯಂತಿ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

Advertisement

ಅಂಬೇಡ್ಕರ್‌, ಬುದ್ಧ, ಬಸವಣ್ಣ ಒಳಗೊಂಡಂತೆ ಯಾವುದೇ ನಾಯಕರು, ದಾರ್ಶನಿಕರ ಜಯಂತಿಯನ್ನ ಕೇವಲ ಆಚರಣೆ, ವೇದಿಕೆ ಕಾರ್ಯಕ್ರಮಕ್ಕೆ ಸೀಮಿತ ಗೊಳಿಸದೆ ಅವರು ನೀಡಿರುವ ಸಂದೇಶದಲ್ಲಿ ಒಂದಷ್ಟು ಅಂಶವನ್ನಾದರೂ ಪಾಲಿಸುವಂತಾಗಬೇಕು ಎಂದು ತಿಳಿಸಿದರು. ಪ್ರತಿಯೊಬ್ಬರ ಆಲೋಚನಾ ಲಹರಿ, ಚಿಂತನೆ ಉತ್ತಮವಾಗಿದ್ದರೆ ಒಳ್ಳೆಯ ಸಾಮಾಜಿಕ ವಾತಾವರಣ ನಿರ್ಮಾಣ ಮಾಡಲಿಕ್ಕೆ ಸಾಧ್ಯ.

ಸಮಾಜ ಕಂಡಂತಹ ಮಹಾನ್‌ ನಾಯಕರು ಅಂತಹ ಆಲೋಚನೆಯ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದರು. ಇಂದಿನ ವಾತಾವರಣದಲ್ಲಿ ಪೋಷಕರು ಸಹ ತಮ್ಮ ಮಕ್ಕಳಲ್ಲಿ ಸದ್ವಿಚಾರ, ಸಾಮಾಜಿಕ ಚಿಂತನೆ, ಕಳಕಳಿಯ ಆಲೋಚನೆ ಬೆಳೆಸಬೇಕು. ತಮ್ಮದೇ ಹಾದಿಯಲ್ಲಿ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು. 

ಇಂದಿನ ವಾತಾವರಣದಲ್ಲಿ ನಾವೆಲ್ಲರೂ ಭೋಗ, ಐಷಾರಾಮಿ ವಸ್ತುಗಳ ಹಿಂದೆಯೇ ಬೆನ್ನತ್ತಿ ಹೋಗುತ್ತಿರುವುದರಿಂದ ಶಾಂತಿ, ನೆಮ್ಮದಿ, ಸಂತೋಷವೇ ಕಾಣೆಯಾಗುತ್ತಿದೆ. ಆಸೆ, ಆಮಿಷ ಹೆಚ್ಚಾಗುತ್ತಿರುವುದು ಅನೇಕ ಅಹಿತಕರ ಘಟನೆಗೆ ಕಾರಣವಾಗುತ್ತಿದೆ. ಅವೆಲ್ಲವನ್ನೂ ಹಿಂದಕ್ಕೆ ಸರಿಸಿ ಒಳ್ಳೆಯ ವಿಚಾರ ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರ, ಜ್ಞಾನದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಕನ್ನಡ ಪ್ರಾಧ್ಯಾಪಕ ಡಾ| ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಇಡೀ ಶೋಷಿತರು, ದಮನಿತರು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಶಕ್ತಿಯಾಗಿ, ಬೆಳಕಾಗಿರುವ ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಜಯಂತಿ ಭಾರತೀಯರ ಸ್ವಾಭಿಮಾನದ ಜಯಂತಿ. ಅಂಬೇಡ್ಕರ್‌ ಸ್ವತಃ ಅಸ್ಪೃಶ್ಯತೆಯ ನೋವುಂಡಿದ್ದರಿಂದ ಆ ಸಮಾಜಕ್ಕೆ ಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಸೌಲಭ್ಯ ಒದಗಿಸಿದರು.

Advertisement

ಅಂಬೇಡ್ಕರ್‌ ಬಯಸಿದ್ದು ಒಂದು ಸಮುದಾಯದ ಅಭಿವೃದ್ಧಿಯನ್ನಲ್ಲ ಸಮಗ್ರ ಭಾರತದ ಅಭಿವೃದ್ಧಿಯನ್ನ. ಅದರಂತೆ ಸಾಕಷ್ಟು ಯೋಜನೆ, ಕಾರ್ಯಕ್ರಮ ರೂಪಿಸಿದ್ದರು ಎಂದು ತಿಳಿಸಿದರು. ಅಂಬೇಡ್ಕರ್‌ ದೇಶದ ಸ್ವಾತಂತ್ರಕ್ಕಾಗಿ ಹೋರಾಡಲಿಲ್ಲ ಎಂಬುದಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹೇಳಿಕೊಳ್ಳುತ್ತವೆ. ಅಂಬೇಡ್ಕರ್‌ರವರು ಮೊದಲ ದುಂಡುಮೇಜಿನ ಪರಿಷತ್‌ ಸಭೆಯಲ್ಲಿ ಭಾರತದ ಸ್ವಾತಂತ್ರದ ಬಗ್ಗೆ ಧ್ವನಿ ಎತ್ತಿದ್ದರು ಎಂದು ತಿಳಿಸಿದರು. 

ಜಿಲ್ಲಾ ಪ್ರಧಾನ ಸಂಚಾಲಕ ಎಚ್‌. ನಿಂಗಪ್ಪ, ಸಂಘಟನಾ ಸಂಚಾಲಕ ಎ.ಡಿ. ಯಶವಂತಪ್ಪ ಇತರರು ಇದ್ದರು. ನಿವೃತ್ತ  ಪ್ರಾಚಾರ್ಯ ರಾಚಪ್ಪ ಬುದ್ಧನ ಜೀವನ, ದೇಶದ ಬಗ್ಗೆ ಉಪನ್ಯಾಸ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next