ಹೊಸದಿಲ್ಲಿ: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಸೇರಿದಂತೆ ಭಾರತದ 7 ಮಂದಿ ವೇಟ್‌ಲಿಫ್ಟರ್‌ಗಳು ಮೂರೂವರೆ ವಾರಗಳ “ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್’ ತರಬೇತಿಗಾಗಿ (ಎಸ್ ಆ್ಯಂಡ್ ಸಿ) ಮಂಗಳವಾರ ಅಮೆರಿಕಕ್ಕೆ ಪ್ರಯಾಣಿಸುವರು. ಸೇಂಟ್ ಲೂಯಿಸ್‌ನಲ್ಲಿ ಈ ಶಿಬಿರ ಏರ್ಪಡಲಿದೆ.
ತರಬೇತಿಗೆ ತೆರಳಿರುವ ಇತರ ವೇಟ್‌ಲಿಫ್ಟರ್‌ಗಳೆಂದರೆ ಜೆರೆಮಿ , ಅಚಿಂತ ಶೆಯುಲಿ, ಸಂಕೇತ್ ಸರ್ಗರ್, ಬಿಂದ್ಯಾರಾಣಿ ದೇವಿ, ಗುರುದೀಪ್ ಸಿಂಗ್, ಆರ್.ವಿ. ರಾಹುಲ್ ಮತ್ತು ಜಿಲ್ಲಿ ದಲಬೆಹ್ರಾ.
“ಎಸ್ ಆ್ಯಂಡ್ ಸಿ’ಯಿಂದಾಗಿ ಈ 7 ಮಂದಿ ವೇಟ್‌ಲಿಫ್ಟರ್ ಏಷ್ಯನ್ ಚಾಂಪಿಯನ್‌ಶಿಪ್ ಕೂಟದಿಂದ ಹೊರಗುಳಿಯಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಕೂಟವಾದ “ವರ್ಲ್ಡ್ ಮೀಟ್’ನತ್ತ ಗಮನ ಕೊಡುವುದು ಇವರೆಲ್ಲರ ಉದ್ದೇಶ.
ಏಷ್ಯನ್ ಚಾಂಪಿಯನ್‌ಶಿಪ್ ಅ. 6ರಿಂದ 16ರ ತನಕ ಮನಾಮಾದಲ್ಲಿ ಆರಂಭವಾಗಲಿದೆ. ಇದರಲ್ಲಿ ಭಾರತದ “ಬಿ’ ತಂಡ ಪಾಲ್ಗೊಳ್ಳಲಿದೆ.
ವಿಶ್ವ ಚಾಂಪಿಯನ್‌ಶಿಪ್ ಡಿ. 5ರಿಂದ 15ರ ವರೆಗೆ ಕೊಲಂಬಿಯಾದ ಬಗೋಟದಲ್ಲಿ ನಡೆಯಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಇದು ಮೊದಲ ಅರ್ಹತಾ ಪಂದ್ಯಾವಳಿಯಾಗಿದೆ.