Advertisement
ಇದು ಯಾರೋ ಜ್ಯೋತಿಷಿಯೊಬ್ಬರು ಹೇಳಿದ ಭವಿಷ್ಯವಾಣಿ ಎಂಬುದು ನಿಮ್ಮ ಊಹೆಯಾಗಿದ್ದರೆ ಅದು ತಪ್ಪು. ಏಕೆಂದರೆ ಇದು ರೈಲ್ವೆ ಇಲಾಖೆ ಘೋಷಿಸಿರುವ ಹೊಸ ಯೋಜನೆ. ಹೌದು, ರೈಲುಗಳು ಹಳಿ ತಪ್ಪುವುದು, ನದಿಗೆ ಬೀಳುವುದು, ಬೋಗಿಗಳಿಗೆ ಬೆಂಕಿ ಹೊತ್ತಿಕೊಳ್ಳುವುದು ಸೇರಿದಂತೆ ದೇಶದಾದ್ಯಂತ ನಡೆಯುವ ರೈಲ್ವೆ ವಿಪತ್ತುಗಳನ್ನು ನಿರ್ವಹಿಸಲು ನೆರವಾಗುವಂತೆ ಬೆಂಗಳೂರಿನ ಹೊರವಲಯದ ಹೆಜ್ಜಾಲದಲ್ಲಿ “ವಿಪತ್ತು ನಿರ್ವಹಣಾ ಸಂಸ್ಥೆ ಮತ್ತು ಸುರಕ್ಷತಾ ಗ್ರಾಮ’ವನ್ನು ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದೆ. ವಿಪತ್ತು ನಿರ್ವಹಣೆ ಸಿಬ್ಬಂದಿಗೆ ಪರಿಹಾರ ಕಾರ್ಯಗಳ ಕುರಿತು ತರಬೇತಿ ನೀಡುವುದು ಸೇರಿದಂತೆ ಜಾಗೃತಿ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಹಲವು ಕಾರ್ಯಾಗಾರಗಳಿಗೆ ಈ ಕೃತಕ ಗ್ರಾಮ ವೇದಿಕೆಯಾಗಲಿದೆ.
“ಸುಮಾರು 3,483 ಜನಸಂಖ್ಯೆ ಹೊಂದಿರುವ ಹೆಜ್ಜಾಲ ಗ್ರಾಮದ 3.32 ಚದರ ಕಿ.ಮೀ ವ್ಯಾಪ್ತಿಯಲ್ಲಿ ಉದ್ದೇಶಿತ “ವಿಪತ್ತು ನಿರ್ವಹಣಾ ಸಂಸ್ಥೆ ಮತ್ತು ಸುರಕ್ಷತಾ ಗ್ರಾಮ’ ಅಭಿವೃದ್ಧಿಪರಿಸಲು 44.42 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪುಗೊಂಡಿದೆ. ಇಲ್ಲಿ ಕೃತಕ ರೈಲ್ವೆ ದುರಂತಗಳನ್ನು ಸೃಷ್ಟಿಸಿ, ಆ ಸಂದರ್ಭದಲ್ಲಿ ಕೈಗೊಳ್ಳುವ ಪರಿಹಾರ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಯಲಿದೆ. ಭವಿಷ್ಯದಲ್ಲಿ ಈ ರೀತಿಯ ಪರಿಹಾರ ಕಾರ್ಯಗಳ ವೇಗ ಹೆಚ್ಚಿಸುವುದು ಮತ್ತು ಸುಧಾರಣೆ ತರುವ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದು, ಅಣಕು ಪ್ರದರ್ಶನಕ್ಕೆ ಪ್ರಸ್ತುತ ಬಳಕೆಯಲ್ಲಿಲ್ಲದ ಹಳೆಯ ಬೋಗಿಗಳನ್ನು ಬಳಸಲಾಗುತ್ತದೆ,’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ತರಗತಿಗಳಲ್ಲಿ ಪಠ್ಯ ಬೋಧನೆ ಜೊತೆಗೆ ರೈಲು ಅವಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಸೃಷ್ಟಿಯಾಗುವಂತಹ ನೈಜ ವಾತಾವರಣವನ್ನು ಸೃಷ್ಟಿಸಿ, ವಿವಿಧ ಪರಿಸ್ಥಿತಿ, ಸಂದರ್ಭ ಹಾಗೂ ಹಲವು ಹಂತಗಳಲ್ಲಿ ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ನೀಡುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ವಿಪತ್ತು ನಿರ್ವಹಣೆ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುತ್ತದೆ. ವಿಪತ್ತು ಸಂದರ್ಭಗಳ್ಲಲಿ ತಕ್ಷಣದ ರಕ್ಷಣಾ ಕಾರ್ಯಾಚರಣೆ, ವೈದ್ಯಕೀಯ ಪರಿಹಾರ ಮತ್ತು ಬೋಗಿಗಳ ಮರುನಿರ್ಮಾಣ ತಂತ್ರಗಳನ್ನು ಹೇಳಿಕೊಡಲು ಕೃತಕ ಬೋಧನಾ ವಿಧಾನಗಳನ್ನು ಅನುಸರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Related Articles
ಸುರಂಗ, ತಡೆಗೋಡೆಗಳು, ಕಂಬಿ ಕತ್ತರಿಸುವಿಕೆ ಸೇರಿದಂತೆ ಇತರ ಸನ್ನಿವೇಶಗಳು, ರಕ್ಷಣಾ ಕಾರ್ಯಾಚರಣೆಗೆ ನೆರವಾಗುವಂತೆ ರೈಲ್ವೆ ಪ್ಲಾಟ್‌ಫಾರಂಗಳನ್ನು ಸೃಷ್ಟಿಸಲಾಗುತ್ತದೆ. ಒಂದೊಮ್ಮೆ ರೈಲು ನದಿಗೆ ಅಥವಾ ನೀರಿಗೆ ಬಿದ್ದಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಯ ಅಣಕು ಪ್ರದರ್ಶನ ನೀಡಲು ಅನುಕೂಲವಾಗುವಂಥೆ ನೀರಿನ ಕೊಳ ನಿರ್ಮಿಸಲಾಗುತ್ತದೆ. ಹಾಗೇ ರೈಲು ಅಪಘಾತಗಳ ವಿಶ್ಲೇಷಣೆಗೆ ವರ್ಚುವಲ್ ರಿಯಾಲಿಟಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
Advertisement