Advertisement

ಜನಸ್ನೇಹಿಯಾಗಲು ಪೊಲೀಸರಿಗೆ ತರಬೇತಿ

12:05 PM Nov 20, 2018 | Team Udayavani |

ಬೆಂಗಳೂರು: ತಿಲಕನಗರ ಪೊಲೀಸ್‌ ಠಾಣೆ ಮತ್ತು ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿ ನವೀಕರಣ ಕಟ್ಟಡವನ್ನು ಸೋಮವಾರ ಗೃಹ ಸಚಿವ ಡಾ ಜಿ. ಪರಮೇಶ್ವರ ಉದ್ಘಾಟಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ ಅವರು, ರಾಜ್ಯದ ಪ್ರತಿ ಠಾಣೆಗಳಲ್ಲೂ ಜನಸ್ನೇಹಿ ಪೊಲೀಸ್‌ ಸೇವೆ ಒದಗಿಸಬೇಕೆಂಬುದು ಸರ್ಕಾರದ ಉದ್ದೇಶ. ಹೀಗಾಗಿ ಪೊಲೀಸ್‌ ಸಿಬ್ಬಂದಿಗೆ ತರಬೇತಿ ವೇಳೆ ಕೆಲ ಸಲಹೆ, ಸೂಚನೆಗಳನ್ನು ಕೊಡಲಾಗವುದು ಎಂದರು.

Advertisement

ಹಗಲು-ರಾತ್ರಿ ಎನ್ನದೇ ಶ್ರಮಿಸುವ ಪೊಲೀಸರನ್ನು ಸಮಾಜದಲ್ಲಿ ಬಿಂಬಿಸುವ ರೀತಿ ಸರಿಯಲ್ಲ. ಸಾರ್ವಜನಿಕ ವಲಯದಲ್ಲಿ ಪೊಲೀಸರೆಂದರೆ ಭಯ ಹೋಗಬೇಕು. ಅದಕ್ಕೆ ತಕ್ಕಂತೆ ಪೊಲೀಸ್‌ ಸಿಬ್ಬಂದಿ ಕೂಡ ಜನರ ಜತೆ ಒಳ್ಳೆಯ ರೀತಿ ನಡೆದುಕೊಳ್ಳಬೇಕು. ತರಬೇತಿ ವೇಳೆಯೇ ಪ್ರತಿ ಪೊಲೀಸ್‌ ಸಿಬ್ಬಂದಿ ಸಾರ್ವಜನಿಕ ಸ್ನೇಹಿಯಾಗಲು ತರಬೇತಿ ನೀಡಲಾಗುವುದು ಎಂದರು. 

ಒಂದು ಕೋಟಿ ರೂ. ವೆಚ್ಚದಲ್ಲಿ ತಿಲಕ್‌ನಗರ ಪೊಲೀಸ್‌ ಠಾಣೆ ನವೀಕರಣ ಮಾಡಿರುವ ಇನ್ಫೋಸಿಸ್‌ ಸಂಸ್ಥೆಗೆ ಅಭಿನಂದನೆಗಳು. ಅಲ್ಲದೆ, ಸೈಬರ್‌ ಕ್ರೈಂ ತರಬೇತಿ ಕಟ್ಟಡವನ್ನು 22 ಕೋಟಿ ರೂ. ವೆಚ್ಚದಲ್ಲಿ ಸಂಸ್ಥೆ ನಿರ್ಮಿಸಿಕೊಡುತ್ತಿರುವುದು ಸಂತಸದ ವಿಚಾರ. ಇದರೊಂದಿಗೆ ರಾಜ್ಯ ಪೊಲೀಸ್‌ ಇಲಾಖೆಯನ್ನು ಇನ್ನಷ್ಟು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸದ್ಯದಲ್ಲೇ ಔರಾದ್ಕರ್‌ ವರದಿ ಜಾರಿ: ಪೊಲೀಸ್‌ ಸಿಬ್ಬಂದಿ ವೇತನ ತಾರತಮ್ಮ ನಿವಾರಿಸಲು ಸದ್ಯದಲ್ಲೇ ಎಡಿಜಿಪಿ ರಾಘವೇಂದ್ರ ಔರಾದ್ಕರ್‌ ಅವರ ವರದಿಯನ್ನು ಶೀಘ್ರವೇ ಜಾರಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ಮುಖ್ಯಸ್ಥೆ ಸುಧಾಮೂರ್ತಿ, ನಗರ ಪೊಲೀಸ್‌ ಆಯುಕ್ತ ಟಿ. ಸುನಿಲ್‌ ಕುಮಾರ್‌, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ, ಮೇಯರ್‌ ಗಂಗಾಬಿಕೆ ಮಲ್ಲಿಕಾರ್ಜುನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next