ನೇಸರ ಬೆಳ್ಳಿ ಪರದೆಯಿಂದ ಮೆಲ್ಲಮೆಲ್ಲನೆ ಜಾರುವ ಸಮಯ ಅದಾಗಲೇ ಶುರುವಾಗಿಬಿಟ್ಟಿತ್ತು. ಚಿಲಿಪಿಲಿ ಗಾನದ ನಡುವೆ ವೇಗವಾಗಿ ಮನೆಮುಟ್ಟುವ ಭರದಲ್ಲಿದ್ದವು ಹಕ್ಕಿಗಳು. ಆಗಸವು ನೇಸರನಿಗೆ ವಿದಾಯ ಹೇಳಲು ತವಕಿಸುತ್ತಿತ್ತು. ಮಧುರ ಮಾರುತದ ತಣ್ಣನೆ ಬೀಸುವ ತಂಗಾಳಿಯ ಆಲಿಂಗನಕ್ಕೆ ಮನವಾದರೂ ಜಾರದೇ ಇರದು. ಇಂತಹ ಸಮಯದಲ್ಲಿ ರೈಲು ಅಥವಾ ಬಸ್ ವಿಂಡೋ ಸೀಟ್ನಲ್ಲಿ ಕೂತು ಗವಾಕ್ಷಿಯಿಂದ ಹೊರನೋಟ ಬೀರಿದಾಗ ಕಣ್ಸೆಳೆಯುವ ಪ್ರಕೃತಿಯ ರಂಗೇರಿಸುವ ದೃಶ್ಯದ ಸೌಂದರ್ಯಕ್ಕೆ ಸಾಟಿಯಿಲ್ಲ.
ನನಗೂ ಮುಸ್ಸಂಜೆಯ ಪಯಣವೆಂದರೆ ಎಲ್ಲಿಲ್ಲದ ಖುಷಿ. ಕಣ್ಣಿಗೆ ಹಬ್ಬದ ವಾತಾವರಣವನ್ನು ಕಟ್ಟಿ ಕೊಡುವ ಬೇಸಗೆಯ ಮುಸ್ಸಂಜೆ ಸಮಯಕ್ಕೆ ಪುಳಕಿತನಾಗದೆ ಇರೆನು. ಕರಾವಳಿಯ ಕಾಲೇಜಿನಿಂದ ಮಲಬಾರ್ ಭಾಗಕ್ಕೆ ದಿನನಿತ್ಯದ ಓಡಾಟದಲ್ಲಿ ರೈಲು ಗಾಡಿಯು ನನಗೆ ಸಾಥ್ ಕೊಡುತ್ತಿತ್ತು. ಯಾವಾಗಲೂ ಮುಸ್ಸಂಜೆ ಪಯಣದ ಸವಿಯನ್ನು ನೆನೆಯುವ ಮನ ಪ್ರಕೃತಿಯನ್ನು ನೋಡದೇ ಇರದು. ಗೆಳೆಯರೊಂದಿಗೆ ಸಂವಾದ- ಸಂಧಾನ ಮಾಡಿಕೊಂಡು ವಿಂಡೋ ಸೀಟಿಗಾಗಿ ಕಾಡಿ ಬೇಡಿ ಪಡೆಯುತ್ತಿದ್ದಾರೆ.
ತಣ್ಣನೆ ಬೀಸುವ ಗಾಳಿಯು ಉಸಿರನ್ನು ಸೇರಿದಾಗ ದಮನಿಯು ತಂಪಾಗುತ್ತಿತ್ತು. ಅಕ್ಕಪಕ್ಕದಲ್ಲಿ ಕಾಣುವ ಹಸುರ ಗಿಡ ಮರ ಬಳ್ಳಿಗಳು ಹಸಿರೇ ಉಸಿರೆಂಬ ತತ್ವವ ಸಾರುವಂತಿದ್ದವು. ಇನ್ನು ನೇತ್ರಾವತಿಯ ಸೊಬಗನ್ನು ಕಣ್ತುಂಬಿಕೊಳ್ಳುವ ಸುಯೋಗವು ರೈಲ್ವೇ ಪಯಣಿಗನದ್ದು. ಉಳಿದ ನದಿಯಂತೆ ಅಲ್ಲದ ಈಕೆಗೆ ಉದ್ದವಾದ ಸೇತುವೆ. ಸೇತುವೆಯಿಂದಲೇ ಕರಾವಳಿಯಲ್ಲಿ ಜನಪ್ರಿಯ. ಆ ಸೇತುವೆಯ ಹಳಿಯ ಮೇಲೆ ರೈಲು ಗಾಡಿಯು ಮೆಲುವಾಗಿ ಹೋಗುವಾಗ ರೈಲು ಗಾಡಿಯ ಇಂಜಿನ್ ಸದ್ದು, ಬಂಡಿಯ ಹಾರ್ನ್ ಸದ್ದು ನೇತ್ರಾವತಿಯ ಅಂದವ ಬಾಯ್ತುಂಬ ಹೊಗಳುವಂತಿತ್ತು.
ರೈಲು ಗಾಡಿ ಸಂಖ್ಯೆ 16629 ಮಂಗಳೂರು ಸೆಂಟ್ರಲ್ ಬಿಟ್ಟ ಕೂಡಲೇ ಸುಂದರ ರಮಣೀಯ ಪ್ರಕೃತಿಯ ಸೊಬಗನ್ನು ಕಣ್ತುಂಬುವ ಗಳಿಗೆಗೆ ಮುನ್ನುಡಿ ಬರೆಯುತ್ತದೆ. ದೂರದಲ್ಲಿ ಕಾಣುವ ಸಾಗರ, ಹರಿಯುವ ಜುಳು ಜುಳು ನದಿ ಎಲ್ಲವೂ ಎಷ್ಟೊಂದು ಚಂದ. ರೈಲುಗಾಡಿಯ ವೇಗ ಹೆಚ್ಚಾದಂತೆ ಕತ್ತಲೆಯೂ ಮೆಲ್ಲಮೆಲ್ಲನೆ ಮನೆ ಮಾಡುತ್ತಿತ್ತು. ಮೂಡಣದಲ್ಲಿ ಮೂಡಿದ ರವಿ ಬಾನಾಚೆ ಜಾರುವ ಮುನ್ನ ಕಣ್ಣಂಚಿನಲ್ಲಿ ಕವಲೊಡೆದ ಆಕರ್ಷಣೆಗೆ ಸಾಕ್ಷಿ ಈ ಮುಸ್ಸಂಜೆ ಪಯಣ. ಉದಯನು ಅರೆ ಗಳಿಗೆ ಇದ್ದರೆ ಇನ್ನೂ ಸೊಬಗನ್ನು ಉಣಪಡಿಸುತ್ತಿದ್ದನೇನೋ ಅಲ್ಲವೇ!? ಆತ ಮರೆಯಾಗಿಯೇ ಬಿಟ್ಟ.
-ಗಿರೀಶ್ ಪಿ.ಎಂ.
ವಿ.ವಿ., ಮಂಗಳೂರು