ಅಮ್ರೇಲಿ: ಗುಜರಾತ್‌ನ ಗಿರ್ ಅರಣ್ಯ ವಾಪ್ತಿಯ ಬೊರಾಲಾ ಗ್ರಾಮದಲ್ಲಿ ರೈಲಿಗೆ ಸಿಲುಕಿ ಮೂರು ಸಿಂಹಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಜುನಾಗಢ ಅರಣ್ಯದ ಮಖ್ಯ ಸಂರಕ್ಷಣಾಧಿಕಾರಿ ದುಶ್ಯಂತ್ ವಸವಾಡಾ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ಸಿಂಹಗಳು ಸಣ್ಣವಯಸ್ಸಿನವಾಗಿದ್ದು 1.5 ರಿಂದ 2 ವರ್ಷದ ಒಳಗಿನವಾಗಿವೆ. ಆರು ಸಿಂಹಗಳು ಮಧ್ಯ ರಾತ್ರಿ ಹಳಿ ದಾಡುತ್ತಿದ್ದಾಗ ಬೊಟಾಡ್ ಮತ್ತು ಪಿಪಾವಾವ್ ನಡುವೆ ಸಂಚರಿಸುತ್ತಿದ್ದ ಗೂಡ್ಸ್ ರೈಲು ಢಿಕ್ಕಿಯಾಗಿ ಮೂರು ಸಿಂಹಗಳು ಸ್ಥಳದಲ್ಲೇ ಸಾವನ್ನಪ್ಪಿವೆ.ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಿದ್ದು,ಯಾರೆ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ವಸವಾಡಾ ತಿಳಿಸಿದ್ದಾರೆ.
ಭಾವನಗರದ ರೈಲ್ವೇ ವಿಭಾಗೀಯ ಪ್ರಬಂಧಕ ರಾಗಿರುವ ರೂಪಾ ಶ್ರೀನಿವಾಸನ್ ಅವರು ಮಾತನಾಡಿ ರೈಲು ಚಾಲಕ ಮೂರು ಸಿಂಹಗಳನ್ನು ರಕ್ಷಿಸಲು ಯತ್ನಿಸಿ, ತುರ್ತಾಗಿ ಬ್ರೇಕ್ ಹಾಕಿದರೂ ಸಿಂಹಗಳ ಮೇಲೆ ಹರಿಯುವುದನ್ನು ತಡೆಯಲು ಸಾಧ್ಯವಾಗಿಲ್ಲ ಎಂದರು.
ರಾಜುಲಾ ಮತ್ತು ಸರ್ವಕುಲಾ ವ್ಯಾಪ್ತಿಯ ಅರಣ್ಯ ವ್ಯಾಪ್ತಿಯಲ್ಲಿ 2014 ಮತ್ತು 15 ರಲ್ಲಿ 6 ಸಿಂಹಗಳು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದವು.ಅ ಬಳಿಕ ಅರಣ್ಯ ವ್ಯಾಪ್ತಿಯಲ್ಲಿ ಹಳಿಗೆ ಅಡ್ಡಲಾಗಿ ಬೇಲಿಯನ್ನೂ ಹಾಕಲಾಗಿತ್ತು.