Advertisement

ಕೆಪಿಟಿಸಿಎಲ್‌ ವಿದ್ಯುತ್‌ಲೈನ್‌ ತುಂಡು: ರೈಲು ಸಂಚಾರದಲ್ಲಿ ವ್ಯತ್ಯಯ

09:35 PM Apr 24, 2022 | Team Udayavani |

ಬೆಂಗಳೂರು: ಯಶವಂತಪುರ- ಲೊಟ್ಟೆಗೊಲ್ಲಹಳ್ಳಿ ನಡುವೆ ಹಾದುಹೋಗಿರುವ ಕರ್ನಾಟಕ ವಿದ್ಯುತ್‌ ಸರಬರಾಜು ಕಂಪೆನಿ (ಕೆಪಿಟಿಸಿಎಲ್‌) ವಿದ್ಯುತ್‌ ಲೈನ್‌ ಭಾನುವಾರ ಬೆಳಿಗ್ಗೆ ತುಂಡಾಗಿ ರೈಲ್ವೆ ವಿದ್ಯುತ್‌ ಲೈನ್‌ ಮೇಲೆ ಬಿದ್ದಿದ್ದರಿಂದ ಸುಮಾರು ನಾಲ್ಕು ತಾಸು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

Advertisement

ಬೆಳಿಗ್ಗೆ 8.45ರ ಸುಮಾರಿಗೆ ಆಕಸ್ಮಿಕವಾಗಿ ಕೆಪಿಟಿಸಿಎಲ್‌ನ ವಿದ್ಯುತ್‌ ಲೈನ್‌, ರೈಲ್ವೆ ವಿದ್ಯುತ್‌ ಲೈನ್‌ ಮೇಲೆ ತುಂಡಾಗಿ ಬಿದ್ದಿದೆ. ಇದರಿಂದ ಯಶವಂತಪುರ- ಲೊಟ್ಟೆಗೊಲ್ಲಹಳ್ಳಿ ಮಾರ್ಗದುದ್ದಕ್ಕೂ ಕಾರ್ಯಾಚರಣೆ ಮಾಡುತ್ತಿದ್ದ ರೈಲುಗಳು ಅಲ್ಲಲ್ಲೇ ನಿಂತವು. ಇದಲ್ಲದೆ, ಬೆಂಗಳೂರಿನಿಂದ ಬೇರೆ ಕಡೆಗೆ ತೆರಳುವ ರೈಲುಗಳ ಸೇವೆಯಲ್ಲೂ ವಿಳಂಬವಾಯಿತು. ಮೂಲಗಳ ಪ್ರಕಾರ ಹತ್ತಕ್ಕೂ ಹೆಚ್ಚು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಪ್ರಮುಖವಾಗಿ ಯಶವಂತಪುರ-ಯಲಹಂಕ ಮತ್ತು ಯಶವಂತಪುರ-ತುಮಕೂರು ಮಾರ್ಗದಲ್ಲಿನ 7ರಿಂದ 8 ರೈಲುಗಳ ಆಗಮನ ಮತ್ತು ನಿರ್ಗಮನದಲ್ಲಿ ತಡವಾಯಿತು. ದೂರದ ಊರಿಗೆ ತೆರಳುವವರು ಮತ್ತು ಆಗಮಿಸುವವರು ಅದೇ ರೀತಿ, ಕಾರ್ಯನಿಮಿತ್ತ ನಗರಕ್ಕೆ ಬರುವವರಿಗೆ ಇದರಿಂದ ಕಿರಿಕಿರಿ ಆಯಿತು. ಅಲ್ಪಾವಧಿಯಲ್ಲೇ ಮೂರನೇ ಬಾರಿ ಈ ರೀತಿ ತಾಂತ್ರಿಕ ಕಾರಣಗಳಿಂದ ತೊಂದರೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ರಜೆ ದಿನವಾಗಿದ್ದರಿಂದ ಹೆಚ್ಚು ಪ್ರಯಾಣಿಕರಿಗೆ ಇದರ ಬಿಸಿ ತಟ್ಟಲಿಲ್ಲ.

ಈ ಮಧ್ಯೆ 9.20ರ ವೇಳೆಗೆ ಬೆಂಗಳೂರು ರೈಲ್ವೆ ವಿಭಾಗದಿಂದ ಡೀಸೆಲ್‌ ಆಧಾರಿತ ಲೋಕೋಮೋಟಿವ್‌ ವ್ಯವಸ್ಥೆ ಮಾಡಿ, ರೈಲುಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಯಿತು. ಈ ಮೂಲಕ ಸಾಧ್ಯವಾದಷ್ಟು ವಿಳಂಬವಾಗುವುದನ್ನು ತಗ್ಗಿಸಲಾಯಿತು ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾವ್ಯಾವ ರೈಲುಗಳು ಎಷ್ಟು ವಿಳಂಬ?  ರೈಲು ಸಂಖ್ಯೆ ಎಷ್ಟು ತಡ?
06266 (ಹಿಂದುಪುರ-ಕೆಎಸ್‌ಆರ್‌ ಬೆಂಗಳೂರು) 87 ನಿಮಿಷ (ಯಶವಂತಪುರ ಬಳಿ)
16574 (ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌) 176 ನಿಮಿಷ (ಯಶವಂತಪುರ ಬಳಿ)
06546 (ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೇಷಲ್‌) 98 ನಿಮಿಷ (ಚಿಕ್ಕಬಾಣಾವರ ಬಳಿ)
20652 (ತಾಳಗುಪ್ಪಾ- ಕೆಎಸ್‌ಆರ್‌ ಬೆಂಗಳೂರು, ಇಂಟರ್‌ಸಿಟಿ ಎಕ್ಸ್‌ಪ್ರೆಸ್‌) 60 ನಿಮಿಷ (ಗೊಲ್ಲಹಳ್ಳಿ ಬಳಿ)
17308 ( ಬಸವ ಎಕ್ಸ್‌ಪ್ರೆಸ್‌) 177 ನಿಮಿಷ (ಯಲಹಂಕ)
17310 ( ಯಶವಂತಪುರ -ವಾಸ್ಕೋಡಗಾಮ ಎಕ್ಸ್‌ಪ್ರೆಸ್‌) 38 ನಿಮಿಷ (ದೊಡ್ಡಬೆಲೆ ಬಳಿ)

Advertisement

ಒಂದೂವರೆ ತಿಂಗಳಲ್ಲಿ 3ನೇ ಘಟನೆ!
– ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯ ಆಗುತ್ತಿರುವ ಮೂರನೇ ಘಟನೆ ಇದಾಗಿದೆ.
– ಮಾರ್ಚ್‌ 9ರಂದು ಚನ್ನಸಂದ್ರ ಕಾರಿಡಾರ್‌ನಲ್ಲಿ ರೈಲ್ವೆ ವಿದ್ಯುತ್‌ ಲೈನ್‌ ತಗುಲಿ ಹದ್ದು ಸಿಲುಕಿದ ಪರಿಣಾಮ ಸುಮಾರು 30ಕ್ಕೂ ಅಧಿಕ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

– ವಿದ್ಯುತ್‌ ಲೈನ್‌ನಲ್ಲಿ ಏನಾಗಿದೆ ಎಂಬುದನ್ನು ಪತ್ತೆಹಚ್ಚಲಿಕ್ಕಾಗಿಯೇ ಗಂಟೆಗಟ್ಟಲೆ ಸಮಯ ಹಿಡಿದಿತ್ತು.

– ಇದಾದ ಬಳಿಕ ಹತ್ತು ದಿನಗಳಲ್ಲಿ ಅಂದರೆ ಮಾರ್ಚ್‌ 21ರಂದು ಬೆಂಗಳೂರು- ಮೈಸೂರು ನಡುವಿನ ರೈಲು ಮಾರ್ಗದಲ್ಲಿ ವಿದ್ಯುತ್‌ ಕೇಬಲ್‌ ತುಂಡಾದ ಪರಿಣಾಮ ರೈಲುಗಳ ಸೇವೆಯಲ್ಲಿ ವ್ಯತ್ಯಯ ಆಗಿತ್ತು. ಮೆಮು ರೈಲು ಮತ್ತು ಚಾಮುಂಡಿ ಎಕ್ಸ್‌ಪ್ರೆಸ್‌ ರೈಲುಗಳು ಸಂಚಾರದಲ್ಲಿ ಸುಮಾರು ಒಂದು ತಾಸು ತಡವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next