ಯಾವುದೇ ಒಂದು ಸಿನಿಮಾದ ಬಗ್ಗೆ ಆಸಕ್ತಿ ಹುಟ್ಟುವಲ್ಲಿ ಹಾಗೂ ಸಿನಿಮಾದ ಬಗ್ಗೆ ವಿಶ್ವಾಸ ಮೂಡುವಲ್ಲಿ ಟ್ರೇಲರ್ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದ ಟೇಲರ್ ಎಷ್ಟು ಆಕರ್ಷಕ ಹಾಗೂ ಆಸಕ್ತಿದಾಯಕವಾಗಿದೆ ಅನ್ನೋದರ ಮೇಲೆ ಸಿನಿಮಾದ ಕ್ರೇಜ್ ಆರಂಭವಾಗುತ್ತದೆ. ಆ ತರಹದ ಟ್ರೇಲರ್ ಕಟ್ ಮಾಡೋದು ಕೂಡಾ ಒಂದು ಕಲೆ.
ಟ್ರೇಲರ್ ಎಲ್ಲಾ ಎಡಿಟರ್‌ಗಳು ಕಟ್ ಮಾಡಬಹುದು. ಆದರೆ, ಟ್ರೆಂಡಿ ಟ್ರೇಲರ್ ಹಾಗೂ ಮಾಸ್ ಫೀಲ್ ಇರುವಂತಹ ಟ್ರೇಲರ್ ಮಾಡೋ ಸ್ಪೆಷಲಿಸ್ಟ್ ಇದ್ದಾರೆ. ಅವರೇ ವೆಂಕಟೇಶ್. ಯಾವ ವೆಂಕಟೇಶ್ ಎಂದರೆ ಈಗಷ್ಟೇ ಗಾಂಧಿನಗರದಲ್ಲಿ ಬಿಝಿಯಾಗುತ್ತಿರುವ ಸಂಕಲನಕಾರ ಎನ್ನಬೇಕು. “ಬಹದ್ದೂರ್’, “ರನ್ನ’, “ಲೀಡರ್’ ಸೇರಿದಂತೆ ಅನೇಕ ಸಿನಿಮಾಗಳ ಟ್ರೇಲರ್ ಕಟ್ ಮಾಡಿರುವುದು ಇದೇ ವೆಂಕಟೇಶ್.
ಜೊತೆಗೆ ಡಿಬಿಟ್ಸ್ ಆಡಿಯೋ ಸಂಸ್ಥೆಗೂ ಕೆಲಸ ಮಾಡುತ್ತಿರುವ ವೆಂಕಟೇಶ್, “ರಾಮಾಚಾರಿ’, “ರನ್ನ’, “ದೊಡ್ಮನೆ ಹುಡುಗ’, “ರಾಜಕುಮಾರ’, “ಶಿವಲಿಂಗ’, “ಜಗ್ಗುದಾದ’ ಸೇರಿದಂತೆ ಅನೇಕ ಚಿತ್ರಗಳ ಲಿರಿಕಲ್ ವಿಡಿಯೋ ಕೂಡಾ ಕಟ್ ಮಾಡಿದ್ದಾರೆ. ಹಾಗಂತ ವೆಂಕಟೇಶ್ ಕೇವಲ ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋಗಷ್ಟೇ ಸೀಮಿತವಾಗಿಲ್ಲ.
“ಟೈಸನ್’ ಚಿತ್ರದ ಮೂಲಕ ಪೂರ್ಣಪ್ರಮಾಣದ ಸಂಕಲನಕಾರ ಕೂಡಾ ಆಗಿದ್ದಾರೆ. “ಟೈಸನ್’, “ಕರ್ವ’ “5ಜಿ’, “ಕ್ರ್ಯಾಕ್’, “ರಾಜಹಂಸ’, “ರಂಕಲ್ ರಾಟೆ’, “ಜಾಸ್ತಿ ಪ್ರೀತಿ’, “ಓಳ್ ಮುನಿಸ್ವಾಮಿ’, “3.0′, “ಜನ ಗಣ ಮನ’, “ಸ್ಟ್ರೈಕರ್’, “ಪಾನಿಪುರಿ’ ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಎಡಿಟರ್ ಆಗಿ ಕೆಲಸ ಮಾಡಿರುವ ವೆಂಕಟೇಶ್ ಕೈಯಲ್ಲಿ ಈಗ “ಬಕಾಸುರ’ ಸಿನಿಮಾನೂ ಇದೆ.
ಚಿತ್ರಕಲೆ ಸೇರಿದಂತೆ ಕ್ರಿಯೇಟಿವ್ ಕೆಲಸಗಳಲ್ಲಿ ಆಸಕ್ತಿ ಮೂಡಿದ ವೆಂಕಟೇಶ್ ಸಂಕಲನಕಾರ ಕೆ.ಎಂ. ಪ್ರಕಾಶ್ ಜೊತೆ ಸಹಾಯಕರಾಗಿ ನೂರಾರು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅಲ್ಲಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವದೊಂದಿಗೆ ಈಗ ಸ್ವತಂತ್ರವಾಗಿ ಸಂಕಲನ ಮಾಡುತ್ತಿದ್ದಾರೆ.
* ರವಿ ರೈ