“ಮರ್ಯಾದೆ ಪ್ರಶ್ನೆ’ ಹೀಗೊಂದು ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್‌ನ್ನು ನಟ ಸುದೀಪ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
“ಟ್ರೇಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿಯೂ ಕೂಡ ಟ್ರೇಲರ್ ಕುತೂಹಲ ಹುಟ್ಟಿಸುತ್ತದೆ. ಇದೊಂದು ವಿಭಿನ್ನ ಸಿನಿಮಾ, ಎಲ್ಲ ವಿಭಾಗದ ಕೆಲಸ ಅದ್ಭುತವಾಗಿದೆ. ಸದ್ಯ ಕನ್ನಡ ಚಿತ್ರರಂಗ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದರು ಕಿಚ್ಚ ಸುದೀಪ್.
ನವೆಂಬರ್ 22ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೇಲರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ಮಾತನಾಡುತ್ತ, “ನಮ್ಮ ಸುತ್ತಮುತ್ತಲಿನ ಕಥೆಗಳನ್ನೇ ಜನರು ಇಷ್ಟಪಡುತ್ತಾರೆ. ಅದನ್ನೇ ಸಿನಿಮಾ ಮಾಡಿ, ನೈಜವಾಗಿ ಮೂಡಿ ಬಂದರೆ, ನೋಡುವವರಿಗೂ ಆಪ್ತವೆನಿಸುತ್ತದೆ. ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಕಲಾವಿದರೂ ಕೂಡ ನಟನೆ ದೃಷ್ಟಿಯಿಂದ ಕಥೆಯ ಪಾತ್ರಕ್ಕೆ ತಕ್ಕಂತೆ ಜೀವಿಸುವುದನ್ನು ಅರ್ಥ ಮಾಡಿಕೊಂಡಾಗ, ಅವರೇ ನಮ್ಮನ್ನು ದಡ ಮುಟ್ಟಿಸುತ್ತಾರೆ’ ಎಂದರು.
ಮರ್ಯಾದಾ ಪ್ರಶ್ನೆ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ ಆರ್‌ಜೆ ಪ್ರದೀಪ್. “ಸಕ್ಕತ್ ಸ್ಟುಡಿಯೋ ಹೊಸತನದ ನೈಜ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಕನಸು ಹೊತ್ತಿದೆ. ಈ ನಿಟ್ಟಿನಲ್ಲಿ “ಮರ್ಯಾದೆ ಪ್ರಶ್ನೆ’ ನಮ್ಮ ಮೊದಲ ಹೆಜ್ಜೆ. ಪ್ರತಿ ವರ್ಷ ಇಂತಹ ಸಿನಿಮಾಗಳನ್ನು ಮಾಡುವ ಆಶಯವಿದೆ. ಇವು ಜನರಿಗೆ ತಲುಪುವುದಲ್ಲದೇ, ಚರ್ಚೆಗಳನ್ನು ಹುಟ್ಟು ಹಾಕಲಿವೆ ಎಂದರು.
ತೇಜು ಬೆಳವಾಡಿ, ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರ್ ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಎರಡು ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ಅರ್ಜುನ್ ರಾಮು ಸಂಗೀತ ಸಂಯೋಜನೆ, ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ, ಸಂದೀಪ್ ವೆಲ್ಲುರಿ ಛಾಯಾಗ್ರಹಣ ಚಿತ್ರಕ್ಕಿದೆ.