ಮಹಾನಗರ: ಮಂಗಳೂರು ನಗರದ ಫ್ಲೈಓವರ್ ಸಂಪರ್ಕಿತ ಸರ್ವಿಸ್ ರಸ್ತೆ ಅಭಿವೃದ್ಧಿಯ ಬಗ್ಗೆ ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವೆ ಪರಸ್ಪರ ಹೊಂದಾಣಿಕೆ ಇರದ ಕಾರಣ ಸಾರ್ವಜನಿಕರು ಇದೀಗ ತೊಂದರೆ ಪಡುವಂತಾಗಿದೆ.
ಮನಪಾ ವ್ಯಾಪ್ತಿಯ ಸರ್ವಿಸ್ ರಸ್ತೆಗಳು ಗುಂಡಿ ಬಿದ್ದರೆ ಅಥವಾ ಸರ್ವಿಸ್ ರಸ್ತೆಗಳಲ್ಲಿ ಯಾವುದೇ ಕಾಮಗಾರಿ ನಡೆಯಬೇಕಾಗಿದ್ದರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಯ ಅನುಮತಿ ಅಗತ್ಯ. ಹೀಗೆ ಮನಪಾ ಅನುಮತಿ ಪಡೆಯಲು ಕೆಲವು ದಿನಗಳವರೆಗೆ ಕಾಯಬೇಕಾದ ಅನಿವಾರ್ಯ ಎದುರಾಗಿದೆ.
ಇತ್ತೀಚೆಗಷ್ಟೇ ಕುಂಟಿಕಾನ ಬಳಿಯ ಫ್ಲೈಓವರ್ ಬಳಿಯ ಸರ್ವಿಸ್ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ಒಡೆದು ಹೋಗಿತ್ತು. ಪೈಪ್‌ಲೈನ್ ಕಾಮಗಾರಿಗೆ ಮನಪಾದಿಂದ ರಸ್ತೆ ಅಗೆಯುತ್ತಿದ್ದಾಗ ಅನುಮತಿ ಪಡೆದಿಲ್ಲ ಎಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ನಡೆಸಲು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಮನಪಾದಿಂದ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆಯುವಷ್ಟರಲ್ಲಿ ಮೂರ್‍ನಾಲ್ಕು ದಿನ ಕಳೆದಿತ್ತು. ಅಷ್ಟೇಅಲ್ಲ ರಸ್ತೆ ಕಾಮಗಾರಿ ಕೂಡ ಅರ್ಧದಲ್ಲಿಯೇ ನಿಂತು ರಸ್ತೆ ತುಂಬಾ ನೀರು ಹರಿಯುತ್ತಿತ್ತು.
ಕುಂಟಿಕಾನ ಫ್ಲೈಓವರ್‌ನಿಂದ ಲೋಹಿತ್‌ನಗರಕ್ಕೆ ಸಂಪರ್ಕ ಕಲ್ಪಿಸುವ ಕಾರು ಶೋರೂಂ ಎದುರಿನ ಸರ್ವಿಸ್ ರಸ್ತೆ ಮಧ್ಯೆ ದೊಡ್ಡ ದೊಡ್ಡ ಗುಂಡಿಯಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ರಸ್ತೆಯಲ್ಲಿ ಕೆಲವು ಸಮಯಗಳ ಹಿಂದೆ ಪಾಲಿಕೆಯು ಒಳಚರಂಡಿ ಕಾಮಗಾರಿ ನಡೆಸಿದ್ದು, ರಸ್ತೆ ಅಗೆದು ಅರ್ಧಂಬರ್ಧ ಬಿಡಲಾಗಿದೆ. ಡಾಮರು ಕಾಮಗಾರಿ ಮನಪಾ ನಡೆಸಬೇಕು ಎಂಬ ಪಟ್ಟು ಎನ್‌ಎಚ್‌ಎಐ ಹಿಡಿದಿತ್ತು. ಮನಪಾ ಈಗಾಗಲೇ ಟೆಂಡರ್ ಕರೆದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ಹಲವಾರು ಬಾರಿ ಡಾಮರು ತೇಪೆ ಕಾಮಗಾರಿ ನಡೆಸಲಾದ ಪಂಪ್‌ವೆಲ್ ಸರ್ವಿಸ್ ರಸ್ತೆ ಇದೀಗ ಮತ್ತೆ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಪಂಪ್‌ವೆಲ್ ಮೇಲ್ಸೇತುವೆ ಆರಂಭದಿಂದ ಅಂತ್ಯದವರೆಗೆ ಎರಡೂ ಕಡೆ ಇರುವ ಸರ್ವಿಸ್ ರಸ್ತೆಯ ಅಲ್ಲಲ್ಲಿ ಗುಂಡಿಬಿದ್ದಿದ್ದು, ಮಳೆಗಾಲದಲ್ಲಂತೂ ರಸ್ತೆ ಪೂರ್ತಿ ನೀರು ತುಂಬಿಕೊಂಡಿರುತ್ತದೆ. ಸದ್ಯ ಸರ್ವಿಸ್ ರಸ್ತೆ ಇಕ್ಕೆಲದಲ್ಲಿರುವ ನೀರು ಹರಿಯುವ ಚರಂಡಿ ನಿರ್ವಹಣೆ ಕೊರತೆಯೂ ಎದ್ದು ಕಾಣುತ್ತದೆ.
50 ಲಕ್ಷ ರೂ. ಅನುದಾನಕ್ಕೆ ಆಗ್ರಹ:
ಪ್ರದೇಶಾಭಿವೃದ್ಧಿ ನಿಧಿಯ ಮೊದಲನೇ ಹಂತದದಲ್ಲಿ ಸಾಮಾನ್ಯವಾಗಿ ಪ್ರತೀ ವಾರ್ಡ್ ಗೆ ಸುಮಾರು 50 ಲಕ್ಷ ರೂ. ಬಿಡುಗಡೆಯಾಗುತ್ತಿತ್ತು. ಆದರೆ, ಈ ಬಾರಿ ಕೇವಲ 25 ಲಕ್ಷ ರೂ. ಹಣ ಮಾತ್ರ ಮಂಜೂರು ಮಾಡಲಾಗಿದೆ. ಇದಕ್ಕೆ ವಿಪಕ್ಷದ ಸದಸ್ಯರು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು, 50 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಕೊರೊನಾ ನೆಪವೊಡ್ಡಿ ಉಳಿದ ಹಣ ಮಂಜೂರಾಗುವುದು ಅನುಮಾನ ಎನ್ನಲಾಗಿದೆ. ಅನುದಾನದ ಕೊರತೆಯಿಂದಾಗಿ ಈ ಬಾರಿ ಬಹುತೇಕ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ. ಈಗಾಗಲೇ ಆರಂಭಿಸಿದ ಕಾಮಗಾರಿ ನಡೆಯುತ್ತಿದೆಯೇ ವಿನಾ ಹೊಸ ಕಾಮಗಾರಿಗಳು ಆರಂಭವಾಗಿಲ್ಲ. ಇನ್ನು, ಪಾಲಿಕೆ ಬಜೆಟ್‌ನಲ್ಲಿ ಘೋಷಣೆ ಮಾಡಿದಂತ ಹಲವಾರು ಯೋಜನೆಗಳು ಕೂಡ ಇನ್ನೂ ಟೇಕಾಫ್ ಆಗಿಲ್ಲ.
ಹಣ ಸಂಗ್ರಹವಾಗಿಲ್ಲ; ಬಿಡುಗಡೆಯಾಗಿಲ್ಲ :
ಕೊರೊನಾ ಕಾರಣದಿಂದಾಗಿ ಈ ಬಾರಿ ಪಾಲಿಕೆ ಆದಾಯ ಕುಸಿದಿದೆ. ಆಸ್ತಿ ತೆರಿಗೆ, ಘನತ್ಯಾಜ್ಯ ನಿರ್ವಹಣೆ ಶುಲ್ಕ, ಉದ್ದಿಮೆ ಪರವಾನಿಗೆ ಸಹಿತ ಪಾಲಿಕೆಯ ವಿವಿಧ ಶುಲ್ಕಗಳು ಸಮರ್ಪಕವಾಗಿ ಸಂಗ್ರಹವಾಗಿಲ್ಲ. ಇದರಿಂದಾಗಿ ಪಾಲಿಕೆಯ ಆದಾಯಕ್ಕೆ ಕೊರತೆಯಾಗಿದೆ. ಬಹುತೇಕ ಕಾಮಗಾರಿಗಳಿಗೆ ಹೊಸದಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಇನ್ನು, 2021-22ನೇ ಸಾಲಿನ ಪ್ರದೇಶಾಭಿವೃದ್ಧಿ ನಿಧಿಯ ಮೊದಲನೇ ಹಂತದ ಅನುದಾನದಲ್ಲಿಯೂ ಶೇ. 50ರಷ್ಟು ಕಡಿತ ಮಾಡಲಾಗಿದೆ.
-ನವೀನ್ ಭಟ್ ಇಳಂತಿಲ