ಪಿರಿಯಾಪಟ್ಟಣ: ಹಲವಾರು ವರ್ಷಗಳಿಂದ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಪಡಿಸಲು ನಿರ್ಲಕ್ಷ್ಯವಹಿಸಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ತಾಲೂಕಿನ ಆಲನಹಳ್ಳಿ ಮೂಡಲ ಕೊಪ್ಪಲು ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳಿದ್ದು, 150ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ.
30 ವರ್ಷಗಳಿಂದ ಇಲ್ಲಿಯೇ ವಾಸವಿರುವ ಇವರು ಸಂಚಾರಕ್ಕಾಗಿ ಸ್ವಂತ ಜಮೀನಿನ ಜಾಗವನ್ನು ರಸ್ತೆ ನಿರ್ಮಿಸಲು ಬಿಟ್ಟುಕೊಟ್ಟಿದ್ದಾರೆ. ಆದರೆ, ಇದುವರೆಗೂ ರಸ್ತೆ ನಿರ್ಮಿಸಿಲ್ಲ, ಜೊತೆಗೆ ಗ್ರಾಮಕ್ಕೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.
ಈ ರಸ್ತೆ ಗುಂಡಿಗಳಿಂದ ಕೂಡಿದ್ದು, ಕೆಸರು ಗದ್ದೆಯಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಿನ ಆಲನಹಳ್ಳಿಯಿಂದ ಆಲನಹಳ್ಳಿ ಮೂಡಲಕೊಪ್ಪಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಪಕ್ಕದಲ್ಲಿಯೇ ದೊಡ್ಡಕೆರೆ ಇದೆ.
ಸಮೀಪವಿರುವ ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ 3 ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಈ ಮಣ್ಣಿನ ರಸ್ತೆ ಮಾರ್ಗವಾಗಿಯೇ ದೇವಸ್ಥಾನಕ್ಕೆ ತೆರಳಬೇಕಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ.
ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳುವಾಗ ಪುಸ್ತಕ ಹಾಗೂ ಸಮವಸ್ತ್ರಗಳಿಗೆ ಕೆಸರು ಮಣ್ಣು ರಾಚುತ್ತದೆ. ಈ ಭಾಗದ ಜನರು ಪ್ರತಿದಿನ ಹಿಂಸೆಯಲ್ಲೇ ಸಂಚರಿಸುವಂತಾಗಿದೆ. ಕೂಡಲೇ ಈ ರಸ್ತೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು.
ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸ್ವಾಮಿ, ಮಂಜುಳಾ, ಕೃಷ್ಣ, ರಾಜು, ಯಶ್ವಂತ್, ಶಂಕರ್, ನಿಂಗಮ್ಮ, ರತ್ನಮ್ಮ, ಲಕ್ಷ್ಮೀ, ಜಯ, ಲೋಕೇಶ್ ಇತರರಿದ್ದರು.