ದಾವಣಗೆರೆ: ಮಹಾಮಾರಿ ಕೋವಿಡ್ ಹಾವಳಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಕಾಲ ಮನೆ ವಾಸ ಅನುಭವಿಸಿದ್ದ ಜನರು ಸೋಮವಾರ ಮುಕ್ತ ಸಂಚಾರ ನಡೆಸಿದರು.
ಕೋವಿಡ್ ಪಾಸಿಟಿವಿಟಿ 6.37% ನಡುವೆಯೂ ಜಿಲ್ಲಾಡಳಿತ ಪ್ರತಿ ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರ ವರೆಗೆ ಅಂಗಡಿ ಮುಂಗಟ್ಟು ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಿದೆ. ಬಹು ದಿನಗಳ ನಂತರ ವಾಣಿಜ್ಯ ಚಟುವಟಿಕೆ ಗರಿಗೆದರಿತ್ತು. ಪ್ರತಿ ರಸ್ತೆಯಲ್ಲಿ ಜನಸಂದಣಿ, ವಾಹನ ಸಂಚಾರ ಹೆಚ್ಚಾಗಿತ್ತು. ಕೆಲ ಪ್ರಮುಖ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡು ಬಂದಿತು.
ಇದನ್ನೂ ಓದಿ:ನಿಯಂತ್ರಣ ತಪ್ಪಿ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ:ಓರ್ವ ಸಾವು
ಕೋವಿಡ್ ಮಾರ್ಗಸೂಚಿ ಷರತ್ತಿಗೆ ಒಳಪಟ್ಟು ಬಹಳ ದಿನಗಳ ನಂತರ ಸಾರಿಗೆ ಸಂಸ್ಥೆಯ ಬಸ್ ಸಂಚರಿಸಿದವು. ನಗರ ಸಾರಿಗೆ ಬಸ್ ಸಹ ರಸ್ತೆಗೆ ಇಳಿದವು. ಆದರೆ, ಖಾಸಗಿ ಬಸ್ ಸಂಚಾರ ಕಂಡು ಬರಲಿಲ್ಲ. ಜನರು ಸ್ವಾತಂತ್ರ್ಯ ಸಿಕ್ಕವರಂತೆ ಓಡಾಡಿದರು. ರಸ್ತೆಯಲ್ಲಿ ಬ್ಯಾರಿಕೇಡ್ ಇರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಾಹನ ಸವಾರರು ಪರದಾಡಬೇಕಾಯಿತು.
ಕೆಲ ಅಂಗಡಿಗಳಿಗೆ ಅನುಮತಿ ಇರದಿದ್ದರೂ ತೆರೆದಿದ್ದವು. ಬಟ್ಟೆ, ಬಂಗಾರದ ಅಂಗಡಿಗಳಿಗೆ ಅನುಮತಿ ಇಲ್ಲದ ಕಾರಣ ಮಂಡಿಪೇಟೆ ಇತರೆ ಭಾಗದಲ್ಲಿ ಕೆಲ ಅಂಗಡಿ ಮಾತ್ರ ತೆರೆದಿದ್ದವು. ಕೃಷಿ ಪರಿಕರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಎರಡರ ನಂತರ ಎಲ್ಲ ಚಟುವಟಿಕೆ ಬಂದ್ ಆದವು.