ಕಲಬುರಗಿ: ಹಣದಾಸೆಗೆ ತಂದೆಗೆ ಇನ್ಸೂರೆನ್ಸ್ ಮಾಡಿಸಿ ಅಪಘಾತದಲ್ಲಿ ಕೊಲೆ ಮಾಡಿ ಆ ಬಳಿಕ ಇನ್ಸೂರೆನ್ಸ್ ಹಣ ಪಡೆದಿರುವುದನ್ನು ಸಿನಿಮಾದಲ್ಲಿ ನೋಡಿದ್ದೇವೆ. ಆದರೆ ಕಲಬುರಗಿಯಲ್ಲಿ ಇದೇ ಮಾದರಿಯ ಅಮಾನವೀಯ ಘಟನೆ ನಡೆದಿದೆ.
ಕಳೆದ ಜುಲೈ ತಿಂಗಳಲ್ಲಿ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಣ್ಣೂರು ಬಿ ಕ್ರಾಸ್ ನ ಕಮಾನ ಹತ್ತಿರ ನಡೆದಿದ್ದ ಅಪಘಾತದ ಪ್ರಕರಣವನ್ನು ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆಗೈದು ಸತ್ಯಾಂಶವನ್ನು ಬಯಲಿಗೆಳೆದಿದ್ದಾರೆ.
ಕಲಬುರಗಿ ನಗರದ ಆದರ್ಶ ನಗರದಲ್ಲಿ ವಾಸವಾಗಿದ್ದ ಸತೀಶ ( 30) ಎಂಬಾತ ತನ್ನ ತಂದೆಗೆ 30 ಲಕ್ಷ ರೂ ಮೊತ್ತದ ಇನ್ಸೂರೆನ್ಸ್ ಮಾಡಿಸಿ ಕೊಲೆ ಮಾಡಿಸಿದ್ದಾನೆ. ಅದನ್ನು ಅಪಘಾತ ಎಂಬುದಾಗಿ ಬಿಂಬಿಸಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.
ಹೀಗೆ ಇನ್ಸೂರೆನ್ಸ್ ಮಾಡಿಸುವಂತೆ ಸಲಹೆ ನೀಡಿ ಈತನ ಕಾರ್ಯಕ್ಕೆ ಜೋಡಿಸಿದ ಇತರ ಮೂವರನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಬಯಲಿಗೆ ಬಂದದ್ದು ಹೇಗೆ?: ಸತೀಶ ಕಲಬುರಗಿ ನಗರದ ಆದರ್ಶ ನಗರದಲ್ಲಿ ಸಣ್ಣದಾದ ಹೊಟೇಲ್ ನಡೆಸುತ್ತಿದ್ದ. ಮನೆ ಕಟ್ಟಲು ಸಾಲ ಮಾಡಲಾಗಿತ್ತು. ಇದನ್ನು ಹೇಗೆ ಕಟ್ಟಬೇಕೆನ್ನುವ ಚಿಂತೆಯಲ್ಲಿ ತೊಡಗಿದ್ದ ಸತೀಶಗೆ ಆಗಾಗ್ಗೆ ಹೊಟೇಲ್ ಗೆ ಬರುತ್ತಿದ್ದ ಅರುಣ ಕುಮಾರ ಇನ್ಸೂರೆನ್ಸ್ ಮಾಡಿಸಿ ಕೊಲೆ ಮಾಡಿಸುವ ಸಂಚನ್ನು ರೂಪಿಸಿಕೊಟ್ಟಿದ್ದ. ಅದರಂತೆ ಸತೀಶ ಇತರರೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿಸಿದ್ದಾನೆ.
ಸತೀಶ ತನ್ನ ತಂದೆ 60ರ ಕಾಳಿಂಗರಾಯನನ್ನು 2024ರ ಜುಲೈ 8 ರಂದು ಸಂಜೆ 7.30ಕ್ಕೆ ಸಾಲ ತರೋದು ಇದೆ ಎಂದು ಹೇಳಿ ಸ್ಕೂಟಿಯಲ್ಲಿ 20 ಕೀ ಮೀ ದೂರದ ಬೆಣ್ಣೂರ ಬಿ ಕ್ರಾಸ್ ಬಳಿ ಕರೆದುಕೊಂಡು ಹೋಗಿ ಬೈಕ್ ನಿಲ್ಲಿಸಿ ತಾನು ನೈಸರ್ಗಿಕ ಕರೆ ಬಂದಿದೆ ಎಂದು ಹೇಳಿ ಸ್ವಲ್ಪ ದೂರ ಹೋಗಿ ನಿಂತು ಟ್ರ್ಯಾಕ್ಟರ್ ಹಾಯಿಸಿ ತಂದೆಯನ್ನೇ ಕೊಲೆ ಮಾಡಿಸಿದ್ದಾನೆ. ಟ್ರ್ಯಾಕ್ಟರ್ ಹಾಯ್ದಿದ್ದರಿಂದ ಕಾಳಿಂಗರಾಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ನಂತರ ತನ್ನ ಕೊಲೆಗೆ ಸಂಚು ರೂಪಿಸಿದ ಗೆಳೆಯರಿಂದ ಸತೀಶ ಕಲ್ಲಿನಿಂದ ಹೊಡೆಸಿಕೊಂಡು ಅಪಘಾತ ಎಂದು ಬಿಂಬಿಸಿದ್ದಾನೆ. ಮಗ ಸತೀಶ ನೀಡಿದ ದೂರಿನ ಮೇರೆಗೆ ಮಾಡಬೂಳ ಪೊಲೀಸರು ಅಪಘಾತ ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಸತೀಶಗೆ ವಿಚಾರಣೆಗೆ ಬರಲು ಹೇಳಿದಾಗ ಸತೀಶ ವಿಚಾರಣೆ ಬರಲು ಹಿಂದೇಟು ಹಾಕಿದ್ದಾನೆ. ಇದನ್ನರಿತು ಸಂಶಯಗೊಂಡ ಶಹಾಬಾದ ಡಿಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಚೇತನ ಅವರು ವಿವಿಧ ಆಯಾಮಗಳ ಮೂಲಕ ಆಳವಾಗಿ ತನಿಖೆ ಮಾಡಿ ಪ್ರಕರಣದ ಸತ್ಯಾ ಸತ್ಯತೆ ಬಯಲಿಗೆಳೆದಿದ್ದಾರೆ.
ಇನ್ಸೂರೆನ್ಸ್ ನ 5 ಲಕ್ಷ ರೂ ಹಣ ಬಂದ ನಂತರ ಕೃತ್ಯದ ರೂವಾರಿ ಅರುಣಕುಮಾರನಿಗೆ ಸತೀಶ 3.50 ಲಕ್ಷ ರೂ ಪೋನ್ ಪೇ ಮಾಡಿದ್ದ. ಹೀಗಾಗಿ ಪೊಲೀಸರು ಇದನ್ನೆಲ್ಲ ಪತ್ತೆ ಮಾಡಿ ಪ್ರಕರಣ ಬಯಲಿಗೆಳೆದು ತಂದೆಯನ್ನು ಕೊಂದ ಸತೀಶ್ ಹಾಗೂ ಕೊಲೆಗೆ ಸಲಹೆ ನೀಡಿದ ಅರುಣಕುಮಾರ ಹಾಗೂ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿರುವ ತರಿ ತಾಂಡಾದ ನಿವಾಸಿಗಳಾದ ರಾಕೇಶ ಮತ್ತು ಯುವರಾಜನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀ ನಿವಾಸಲು ಘಟನೆ ವಿವರಣೆ ನೀಡಿದರಲ್ಲದೇ ಪ್ರಕರಣ ಬಯಲಿಗೆಳೆದ ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಿದ್ದಾರೆ.