Advertisement

Ullal: ಹೊಂಡದಿಂದಾಗಿ ಸಂಚಾರವೇ ಸರ್ಕಸ್‌

01:59 PM Aug 07, 2024 | |

ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟುವಿನಿನ ಭಟ್ನಗರದಿಂದ ಚೆಂಬುಗುಡ್ಡೆ ಹಿಂದೂ ರುದ್ರಭೂಮಿ ಸಂಪರ್ಕಿಸುವ ರಸ್ತೆ ಹೊಂಡಮಯವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

Advertisement

ಈ ರಸ್ತೆ ಸುಸಜ್ಜಿತವಾಗಿ ನಿರ್ಮಾಣಗೊಂಡರೂ ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆ ಹೊಂಡಮಯವಾಗಿದೆ. ಪಾದಚಾರಿಗಳು, ವಾಹನ ಸವಾರರು ಈ ಹೊಂಡಕ್ಕೆ ಬಿದ್ದು, ಗಾಯಗೊಂಡರೂ ಮುಚ್ಚುವ ಕಾರ್ಯ ಇನ್ನೂ ನಡೆದಿಲ್ಲ. ಜೀವ ತಿನ್ನುವ ಈ ರಸ್ತೆ ಹೊಂಡದಿಂದ ಮುಕ್ತಿ ಕೊಡಿ ಎನ್ನುವುದು ವಾಹನ ಚಾಲಕರ, ಸಾರ್ವಜನಿಕರ ಆಗ್ರಹ.

ತೊಕ್ಕೊಟ್ಟು ಭಟ್ನಗರ ಕ್ರಾಸ್‌ನಿಂದ ಹಿಂದೂ ರುದ್ರಭೂಮಿಯಾಗಿ ಚೆಂಬುಗುಡ್ಡೆ, ಪಿಲಾರ್‌, ಮಂಗಳೂರು ವಿವಿ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ತೊಕ್ಕೊಟ್ಟು ಜಂಕ್ಷನ್‌ ಬಂದ್‌ ಆದರೆ ಕೇರಳ ಸೇರಿದಂತೆ, ಮಂಗಳೂರಿಗೆ ತಲುಪಲು ಇದು ಪರ್ಯಾಯ ರಸ್ತೆಯಾಗಿದೆ. ಆದರೆ ಹೆದ್ದಾರಿಯ ಸರ್ವೀಸ್‌ ರಸ್ತೆಯನ್ನು ಸಂಪರ್ಕಿಸುವ ತಿರುವಿನಲ್ಲಿ ಹೊಂಡ ಬಿದ್ದಿದ್ದು, ರಾತ್ರಿ ವೇಳೆ ವಾಹನಗಳ ಅಪಘಾತ ಇಲ್ಲಿ ಸರ್ವೇ ಸಾಮಾನ್ಯವಾಗಿದೆ.

ಈ ಹೊಂಡವನ್ನು ತಪ್ಪಿಸಲು ವಾಹನಗಳು ಒಂದೇ ಬದಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ತೊಕ್ಕೊಟ್ಟಿನಿಂದ ಭಟ್ನಗರ, ಕಾಪಿಕಾಡು ಕಡೆ ಸಂಚರಿಸುವ ವಾಹನಗಳಿಗೆ ಸಂಚಾರಕ್ಕೆ ತಡೆಯಾಗುತ್ತಿದ್ದು, ವಾಹನಗಳು ಇಲ್ಲಿ ಸಂಚರಿಸುವುದೇ ಕಷ್ಟವಾಗಿದೆ.

Advertisement

ಜನನಿಬಿಡ ಪ್ರದೇಶದಲ್ಲೇ ಅಪಾಯ

ತೊಕ್ಕೊಟ್ಟು ಭಟ್ನಗರ ಕ್ರಾಸ್‌ನಿಂದ ಚೆಂಬುಗುಡ್ಡೆ ಸಂಪರ್ಕಿಸುವ ರಸ್ತೆ ಜನನಿಬಿಡ ಪ್ರದೇಶ. ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಬ್ಯಾಂಕ್‌ ಸೇರಿದಂತೆ ಜನವಸತಿ ಹೊಂದಿದೆ. ದಿನವೊಂದಕ್ಕೆ ಸಾವಿರಾರು ಜನರು ವಾಹನಗಳಲ್ಲಿ ಸಾಗುತ್ತಾರೆ. ಇಲ್ಲಿ ಪಾದಚಾರಿಗಳು ಕೂಡಾ ನಡೆಯಲು ಹೆದರುವಂತಾಗಿದೆ. ಕ್ರಾಸ್‌ನಲ್ಲಿ ಒಂದು ಹೊಂಡ ಬಿದ್ದಿದ್ದರೆ, ಸ್ಪೂರ್ತಿ ಕ್ಲಿನಿಕ್‌ ಎದುರು ದೊಡ್ಡ ಹೊಂಡವಿದೆ.

ತುರ್ತು ಕಾಮಗಾರಿ ಬೇಕಾಗಿದೆ

ಎರಡು ತಿಂಗಳಿನಿಂದ ಇಲ್ಲಿ ಹೊಂಡ ಸಮಸ್ಯೆ ಇದ್ದರೂ ಸ್ಥಳಿಯ ನಗರಾಡಳಿತವಾಗಲಿ, ಜನಪ್ರತಿನಿಧಿಗಳಾಗಲೀ ಗಮನ ಹರಿಸಿಲ್ಲ. ಮಳೆ ಕಡಿಮೆಯಾದಾಗ ಸ್ಥಳೀಯರು ಮಣ್ಣು ತುಂಬಿಸಿದರೂ ಮಳೆ ನೀರಿಗೆ ಪುನ: ಹೊಂಡ ಬಿದ್ದಿದೆ. ಈ ಹೊಂಡಕ್ಕೆ ತುರ್ತು ಕಾಮಗಾರಿಯಾಗಿ ಕಾಂಕ್ರಿಟ್‌ ಹಾಕಿದರೆ ಸಮಸ್ಯೆ ಬಗೆಹರಿಯಬಹುದು ಎನ್ನುತ್ತಾರೆ ಸ್ಥಳೀಯರು. ಒಂದು ಕಿ. ಮೀ. ಉದ್ದವಿರುವ ಈ ರಸ್ತೆಗೆ ಚರಂಡಿ ನಿರ್ಮಾಣ ಅಗತ್ಯವಾಗಿದೆ.

ಹೆದರುತ್ತಾರೆ

ಭಟ್ನಗರ ಕ್ರಾಸ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಮಳೆ ಸಂದರ್ಭದಲ್ಲಿ ನೀರು ತುಂಬಿದ ಹೊಂಡದಲ್ಲಿ ಹೊಸದಾಗಿ ಬರುವವರು ಹೊಂಡದ ಆಳದ ಅರಿವಿಲ್ಲದೆ ಈ ಹೊಂಡದ ಮೇಲೆ ವಾಹನ ಸಂಚರಿಸಿ ಬಿದ್ದು ಗಾಯಗಳಾಗಿವೆ. ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಾರೆ.

– ವಿಶ್ವನಾಥ್‌ ಪಿಲಾರ್‌, ಪಿಲಾರ್‌ ನಿವಾಸಿ

ಮಾರ್ಗಕ್ಕಿಂತ ಎತ್ತರದಲ್ಲಿ ಚರಂಡಿ!

ತೊಕ್ಕೊಟ್ಟುವಿನ ಇಳಿಜಾರು ರಸ್ತೆಗಳಲ್ಲಿ ಮಾಡಿರುವ ಚರಂಡಿ ಮಾರ್ಗಕ್ಕಿಂತಲೂ ಎತ್ತರದಲ್ಲಿದೆ. ಹೀಗಾಗಿ ನೀರು ಚರಂಡಿಗೆ ಇಳಿಯದೆ ರಸ್ತೆಯಲ್ಲೇ ಹರಿಯುತ್ತದೆ. ಒಳರಸ್ತೆಗಳಿಗೆ ಇಲ್ಲಿ ಚರಂಡಿಯೇ ನಿರ್ಮಾಣವಾಗಿಲ್ಲ. ಕೋಟ್ಯಾಂತರ ರೂ. ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡಿದ್ದರೂ ಚರಂಡಿ ಸರಿ ಇಲ್ಲದೆ ನೀರು ರಸ್ತೆಯಲ್ಲೇ ಹರಿದು ರಭಸಕ್ಕೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ.

– ವಸಂತ್‌ ಎನ್‌.ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next