Advertisement

Bus Stand: ತಂಗುದಾಣ, ಸಮೂಹ ಸಾರಿಗೆ ಜಾಗೃತಿಗೆ ಮೊಬಿಲಿಟಿ ಬಸ್‌ ಸ್ಟಾಪ್‌

02:54 PM Oct 19, 2023 | Team Udayavani |

ಬೆಂಗಳೂರು: ನಗರದಲ್ಲಿ ಬೇಕಾದಷ್ಟು ಬಸ್‌ ತಂಗುದಾಣಗಳಿಲ್ಲ, ಎಲ್ಲಿ ಇರಬೇಕಿತ್ತು ಅಲ್ಲಿ ಇಲ್ಲ, ಬಸ್‌ಗಳು ಬಾರದ ಕಡೆ ತಂಗುದಾಣ ನಿರ್ಮಿಸಲಾಗಿದೆ ಎಂಬ ಮಾತುಗಳು ಬೆಂಗಳೂರಿನ ಬಸ್‌ ಪ್ರಯಾಣಿಕರಿಂದ ಆಗಾಗ ಕೇಳಿ ಬರುತ್ತಿರುತ್ತದೆ. ಇದಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಗರದ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಮುಂದಾಗಿದ್ದು. ಸಂಚಾರ ಬಸ್‌ ತಂಗುದಾಣದ ಹೊಸ ಕಲ್ಪನೆಯನ್ನು ಜಾರಿಗೆ ತಂದಿವೆ.

Advertisement

ಹೆಸರು ಸಂಚಾರ ಬಸ್‌ ತಂಗುದಾಣ ಆದರೆ, ಇಲ್ಲಿ ಬಸ್‌ ಬರುವುದಿಲ್ಲ, ಬಸ್‌ಗಾಗಿ ಪ್ರಯಾಣಿಕರು ಇಲ್ಲಿ ಕಾಯವುದೂ ಇಲ್ಲ. ಆದರೆ, ಇದೊಂದು ಬಸ್‌ ತಂಗುದಾಣದ ಮಾಡಲ್‌ ಆಗಿದ್ದು, ಒಂದು ಬಸ್‌ ತಂಗುಗಾಣದಲ್ಲಿ ಇರಬೇಕಾದ ವ್ಯವಸ್ಥೆ ತಾತ್ಕಾಲಿಕವಾಗಿ ಇದರಲ್ಲಿ ಸೃಷ್ಟಿಸಲಾಗಿರುತ್ತದೆ. ಮುಖ್ಯವಾಗಿ ಈ ಸಂಚಾರ ಬಸ್‌ ತಂಗುದಾಣದ ಮೂಲಕ ಬಸ್‌ ನಿಲ್ದಾಣದ ಬೇಡಿಕೆ ಬಗ್ಗೆ ಇಲ್ಲಿ ವೋಟಿಂಗ್‌ ಮಾಡಿಸಲಾಗುತ್ತದೆ. ಸಾರ್ವಜನಿಕ ಸಾರಿಗೆ ಹೆಚ್ಚೆಚ್ಚು ಬಳಸಲು ಜಾಗೃತಿ ಮೂಡಿಸಲಾಗುತ್ತದೆ. ಫೀಡರ್‌ ಬಸ್‌ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ.

ಸುಮಾರು 300ರಿಂದ 400 ಜನ ಮಹಿಳೆಯರನ್ನು ಹೊಂದಿರುವ “ಅಲ್ಲಿ ಸೇರೋಣ’ ಎಂಬ ಮಹಿಳಾ ಸಂಸ್ಥೆ, ಕಮ್ಯುನಿಟಿ ಮಹಿಳಾ ಸಂಸ್ಥೆ ಹಾಗೂ ಸ್ಟುಡಿಯೋ ಟಾಪ್‌ ಎಂಬ ಸ್ವಯಂಸೇವಾ ಸಂಸ್ಥೆಗಳು ಈ ಸಂಚಾರ ಬಸ್‌ ತಂಗುದಾಣ (ಮೊಬಿಲಿಟಿ ಬಸ್‌ ಸ್ಟಾಪ್‌) ಪರಿಕಲ್ಪನೆ ಸಿದ್ಧಪಡಿಸಿದ್ದು, ಈಗಾಗಲೇ ನಗರದ ಕೆಲ ಕಡೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ.

ಈ ಮೊಬೈಲ್‌ ಬಸ್‌ ನಿಲ್ದಾಣವು ಅಕ್ಟೋಬರ್‌ನಲ್ಲಿ ಬೆಂಗಳೂರಿನ ಹೊಸ ನಗರ, ಸೀಗೆಹಳ್ಳಿ ಮತ್ತು ಬೈರಸಂದ್ರದಲ್ಲಿ ಸಂಚರಿಸಲಿದೆ. ಸಾಮಾನ್ಯವಾಗಿ ಬಹುತೇಕ ಐಟಿ-ಬಿಟಿಯವರು ಸ್ವಂತ ವಾಹನ, ಕ್ಯಾಬ್‌ಗಳನ್ನು ಬಳಸುತ್ತಾರೆ. ಇದರಿಂದಾಗಿ ಪರಿಸರ ಮಾಲಿನ್ಯ ಹಾಗೂ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜನರಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಬಗ್ಗೆ ಜಾಗೃತಿ ಮತ್ತು ಅಗತ್ಯ ಪ್ರದೇಶಗಳಲ್ಲಿ ಬಸ್‌ನಿಲ್ದಾಣದ ಸೌಲಭ್ಯ ಹಾಗೂ ಫೀಡರ್‌ ಬಸ್‌ ವ್ಯವಸ್ಥೆ ಒದಗಿಸುವ ಕುರಿತು ಸರ್ಕಾರದ ಗಮನ ಸೆಳೆಯಲಾಗುತ್ತಿದೆ.

ಸಂಚಾರ ತಂಗುದಾಣದ ವಿಶೇಷತೆ: ಸಾಮಾನ್ಯ ಬಸ್‌ ನಿಲ್ದಾಣದಂತೆಯೇ ಇರುವ ಈ  ಮೊಬಿಲಿಟಿ ಬಸ್‌ ಸ್ಟಾಪ್‌ನಲ್ಲಿ ಟಿಕೆಟ್‌ ಕೌಂಟರ್‌, ಆಸನ, ಕಾಯುವ ಸ್ಥಳಗಳ ಮಾಡಲ್‌ ರಚಿಸಲಾಗಿದೆ. ಇದರ ಮೂಲಕ ಬಸ್‌ನಲ್ಲಿ ಪ್ರಯಾಣಿಸಲು ಟಿಕೆಟ್‌ ಪಡೆಯುವುದು ಹೇಗೆ, ಕಾಯುವ ಸ್ಥಳಗಳು ಹೇಗಿರುತ್ತವೆ ಎಂಬುದನ್ನು ತೋರಿಸಲಾ ಗುತ್ತದೆ. ಜತೆಗೆ  ಮಹಿಳೆಯರೇ ರಚಿಸಿದ ಆರ್ಟ್‌ ಆ್ಯಂಡ್‌ ಕ್ರಾಫ್ಟ್ ಪ್ರದರ್ಶನ ಮತ್ತು ನ್ಯೂಸ್‌ ಸ್ಟಾಂಡ್‌ ಇರುತ್ತದೆ. ಇದನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸ್ಥಳಾಂತರಿಸಬಹುದು.

Advertisement

ಬಸ್‌ ಸ್ಟಾಪ್‌ ಬೇಕೆಂದರೆ ಓಟ್‌ ಮಾಡಬೇಕು: ಈ ಮೊಬಿಲಿಟಿ ಬಸ್‌ ಸ್ಟಾಪ್‌ನಲ್ಲಿ ವೋಟಿಂಗ್‌ ಪೋಲ್‌ ಇರಲಿದೆ. ಸುಸಜ್ಜಿತ ಬಸ್‌ನಿಲ್ದಾಣದ ವ್ಯವಸ್ಥೆ ಬೇಕು ಎಂಬುವವರು ವೋಟಿಂಗ್‌ ಪೋಲ್‌ ಬಳಿ ಇರಿಸಿರುವ ಕೆಂಪು ಖುರ್ಚಿಯ ಮೇಲೆ ಕೂತರೆ, ಅವರು ವೋಟ್‌ ಮಾಡಿದಂತೆ. ಈಗಾಗಲೇ ಸ್ಥಾಪಿಸಲಾಗಿದ್ದ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ ಹಿಂಬದಿಯ ಹೊಸನಗರ, ಸೀಗೆಹಳ್ಳಿ ಮತ್ತು ಪ್ರಿಯಾಂಕ ನಗರದಲ್ಲಿ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಹೊಸನಗರ ಸಮುದಾಯದಲ್ಲಿ 411 ಮಹಿಳೆಯರು ಹಾಗೂ ಸೀಗೆಹಳ್ಳಿ ಮತ್ತು ಪ್ರಿಯಾಂಕ ನಗರದ ಸಮುದಾಯದಲ್ಲಿ 1,113 ಮಹಿಳೆಯರು ವೋಟ್‌ ಮಾಡಿದ್ದಾರೆ.

ಮುಂದೆ ಎಲ್ಲೆಲ್ಲಿ: ಇದೇ ತಿಂಗಳ 16ರಿಂದ 18ರ ಗುರುವಾರ ಮಹದೇವಪುರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅ.20, 21ರಂದು ಈ ಮೊಬಿಲಿಟಿ ಬಸ್‌ ನಿಲ್ದಾಣ ಸಂಚರಿಸಲಿದೆ ಎಂದು ಕಮ್ಯುನಿಟಿ ಎನ್‌ಜಿಒ ಸದಸ್ಯೆ ಮಂಜುಳಾ ತಿಳಿಸುತ್ತಾರೆ.

ಒಂದು ಕುಟುಂಬದಲ್ಲಿ ಎಷ್ಟು ಜನ ಇರುತ್ತಾರೋ ಅಷ್ಟು ವಾಹನಗಳು ಇದ್ದೇ ಇರುತ್ತವೆ. ಎಲ್ಲರೂ, ಸ್ವಂತ ವಾಹನ ಬಳಸುವುದರಿಂದ ವಾಹನ ದಟ್ಟಣೆ ಜತೆಗೆ ಪರಿಸರ ಮಾಲಿನ್ಯವೂ ಆಗುತ್ತದೆ. ಇದನ್ನು ತಪ್ಪಿಸುವ ಒಂದೇ ಮಾರ್ಗವೆಂದರೆ ಸಾರ್ವಜನಿಕ ಸಾರಿಗೆ ಬಳಸುವುದು. -ಸುಜಾತ, ವೈಟ್‌ಫೀಲ್ಡ್‌ ನಿವಾಸಿ.

ಪರಿಸರ ಸಂರಕ್ಷಣೆಯಲ್ಲಿ ಜನರ ಪಾತ್ರದ ಕುರಿತು ಜಾಗೃತಿ ಮೂಡಿಸುವುದು. ವೋಟಿಂಗ್‌ ಮೂಲಕ ನಗರಾದ್ಯಂತ ಬಸ್‌ನಿಲ್ದಾಣಗಳ ಜತೆಗೆ ಫೀಡರ್‌ ಬಸ್‌ಗಳ ಅವಶ್ಯಕತೆ ಕುರಿತು ಸಾರಿಗೆ ಸಂಸ್ಥೆಯ ಗಮನಕ್ಕೆ ತರುವುದು ಮುಖ್ಯ ಉದ್ದೇಶವಾಗಿದೆ.-ಐಶ್ವರ್ಯ, ಸ್ಟುಡಿಯೋ ಪ್ರೋಗ್ರಾಮ್‌ ಮ್ಯಾನೇಜರ್‌ 

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next