ವಿಜಯಪುರ: ಕೋವಿಡ್ ಹಿನ್ನೆಲೆಯಲ್ಲಿ ಮೊದಲ ಅಲೆಯಿಂದಲೇ ಒಂದೂವರೆ ವರ್ಷದಿಂದ ಬಹುತೇಕ ಬಾಗಿಲು ಹಾಕಿದ್ದ ಬಸವ ನಾಡಿನ ಶಾಲೆಗಳು ಶ್ರಾವಣದ ಮೂರನೇ ಸೋಮವಾರ ಬಾಗಿಲು ತೆರೆದಿವೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಶಾಲೆಗಳು ಮಕ್ಕಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಭೌತಿಕ ತರಗತಿ ಸ್ವಾಗತಿಸಿವೆ.
ಸರ್ಕಾರದ ಆದೇಶದಂತೆ ಶಾಲಾ ಮಕ್ಕಳು ಸೋಮವಾರ ಭೌತಿಕ ತರಗತಿಗೆ ಹಾಜರಾಗಲು ಆಗಮಿಸಿದರು. ಮಕ್ಕಳ ಸ್ವಾಗತಕ್ಕೆ ಶಾಲೆಗಳಿಗೆ ನಸುಕಿನಲ್ಲೇ ಆಗಮಿಸಿದ ಸಿಬ್ಬಂದಿ, ಶಿಕ್ಷಕರು ವರ್ಷದಿಂದ ಧೂಳು ಹಿಡಿದಿದ್ದ ಶಾಲೆಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಅಲ್ಲದೇ ಶಾಲೆಯ ಆವರಣಕ್ಕೆಲ್ಲ ನೀರು ಸಿಂಪಡಣೆ ಮಾಡಿ, ರಂಗೋಲಿ ಬಿಡಿಸಿ, ಬಲೂನು, ತಳಿತು, ತೋರಣದಿಂದ ಶ್ರಿಂಗರಿಸಿದ್ದರು. ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಾಂಪ್ರದಾಯಿಕ ಆರತಿ ಬೆಳಗಿ, ತಿಲಕ ಇರಿಸು, ಸಿಹಿ ತಿನ್ನಿಸಿ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಮಕ್ಕಳು ಕೂಡ ತರಗತಿ, ಪರೀಕ್ಷೆ ಇಲ್ಲದೇ 8-12 ತರಗತಿಗೆ ಬಡ್ತಿ ಪಡೆದ ಮಕ್ಕಳು, ಬಡ್ತಿ ಹೊಂದಿದ ತರಗತಿ ಕೋಣೆಗೆ ಸಂಭ್ರಮದಿಂದ ಪ್ರವೇಶಿಸಿ, ಸಂತಸಗೊಂಡರು. ಹಲವು ಶಾಲೆಗಳಲ್ಲಿ ಶಿಕ್ಷಕರ ಕಾಲಿಗೆ ಎರಗಿ ಆಶೀರ್ವಾದ ಪಡೆದ ಮಕ್ಕಳು, ವರ್ಷದಿಂದ ಭೌಗೋಳಿಕವಾಗಿ ದೂರವಾಗಿದ್ದ ಸ್ನೇಹಿತರ ಕೈ ಕುಲುಕಿ, ಕುಶಲೋಪರಿ ವಿಚಾರಿಸಿದರು.
ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅ.23 ರಿಂದ ತರಗತಿಯ ಮಕ್ಕಳ ಸಂಖ್ಯೆಯ ಶೇ.50 ರಷ್ಟು ಮಕ್ಕಳನ್ನು ವಾರದ ಶಾಲಾ ದಿನಗಳಿಗೆ ಭೌತಿಕ ಅಂತರ ಕಾಯ್ದುಕೊಂಡು ಶಾಲೆ ಆರಂಭಕ್ಕೆ ನಿರ್ಧರಿಸಿದೆ.