Advertisement

ವರ್ತಕರು, ರೈತರಿಂದ ಹೆದ್ದಾರಿ ತಡೆದು ಧರಣಿ

11:14 AM Aug 19, 2017 | |

ಬೆಂಗಳೂರು: ಯಶವಂತಪುರ ಎಪಿಎಂಸಿ ಮಾರುಕಟ್ಟೆ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರು ಸೇರಿದಂತೆ ಇತರೆ ಎಲ್ಲ ವರ್ತಕರೂ ಕೂಡಲೇ ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಬೇಕು ಎಂಬ ಎಪಿಎಂಸಿ ನೋಟಿಸ್‌ ಖಂಡಿಸಿ ರೈತರು, ವರ್ತಕರು ಶುಕ್ರವಾರ ಮಧ್ಯಾಹ್ನ ಯಶವಂತಪುರ ಎಪಿಎಂಸಿ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. 

Advertisement

ದಾಸನಪುರ ಉಪ ಮಾರುಕಟ್ಟೆಯಲ್ಲಿ ಮೊದಲ ಹಂತದಲ್ಲಿ ಕೇವಲ 83 ವರ್ತಕರಿಗೆ ಮಳಿಗೆ ನೀಡಲಾಗಿದೆ. ಜತೆಗೆ ಹರಾಜು ಪ್ರಕ್ರಿಯೆಯಲ್ಲಿ ಕೆಲವು ಮಳಿಗೆಗಳನ್ನು ಹರಾಜು ಮಾಡಲಾಗಿದೆ. ಅದರಲ್ಲೂ ಕೂಡ ಪಾರದರ್ಶಕತೆ ಕಾಪಾಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಎಪಿಎಂಸಿ ಅಧಿಕಾರಿಗಳ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.

 83 ವರ್ತಕರಿಗೆ ಬುಧವಾರ ನೋಟಿಸ್‌ ಕೊಟ್ಟಿದ್ದು, ದಾಸನಪುರ ಉಪ ಮಾರುಕಟ್ಟೆಯಲ್ಲಿ ಆ.18ರಿಂದ ವಹಿವಾಟು ನಡೆಸುವಂತೆ ಸೂಚಿಸಿದ್ದರು.ನಂತರ ಯಶವಂತಪುರ ಮುಖ್ಯಮಾರುಕಟ್ಟೆಯಲ್ಲಿ ಮೊದಲ ಮಹಡಿಯಲ್ಲಿ ವಹಿವಾಟು ನಡೆಸಲು ಪರವಾನಗಿ ಪಡೆದ ಇತರ ಉತ್ಪನ್ನಗಳ ವರ್ತಕರಿಗೂ ಕೂಡ ದಾಸನಪುರ ಮಾರುಕಟ್ಟೆಗೆ ಹೋಗುವಂತೆ ನೋಟಿಸ್‌ ನೀಡಿದ್ದಾರೆ.

ಮೊದಲ ಮಹಡಿ ವರ್ತಕರ ಪರವಾನಗಿ ಅವಧಿ 2018ರ ಮಾರ್ಚ್‌ 31ರವರೆಗೆ ಇದೆ.  ಎಪಿಎಂಸಿಯ ಫ‌ುಟ್‌ಪಾತ್‌ನಲ್ಲಿ ಬಂದು ವ್ಯಾಪಾರ ನಡೆಸುತ್ತಿದ್ದು, ಸಂಚಾರ ದಟ್ಟಣೆ ಆಗುತ್ತದೆ  ಎಂಬ ಒಂದೇ ಕಾರಣ ಇಟ್ಟುಕೊಂಡು ಸ್ಥಳಾಂತರಕ್ಕೆ ಎಪಿಎಂಸಿ ಮುಂದಾಗಿದೆ. ಇದಕ್ಕೂ ಮೊದಲು ಯಾವುದೇ ನೋಟಿಸ್‌ ನೀಡದೆ ಕಾನೂನು ಬಾಹಿರವಾಗಿ ವರ್ತಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮೂಲಸೌಕರ್ಯವಿಲ್ಲ
ಯಾವುದೇ ವರ್ತಕನು ದಾಸನಪುರ ಉಪಮಾರುಕಟ್ಟೆಗೆ ಹೋಗಲು ವಿರೋಧ ವ್ಯಕ್ತಪಡಿಸುತ್ತಿಲ್ಲ. ಅವರೇ ಇಚ್ಛೆಪಟ್ಟು ಅಲ್ಲಿ ಮಳಿಗೆ ಪಡೆದಿದ್ದಾರೆ. ಆದರೆ, ಉಪ ಮಾರುಕಟ್ಟೆಯಲ್ಲಿ ಪೊಲೀಸ್‌ ಠಾಣೆ, ಆಸ್ಪತ್ರೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌ದೀಪಗಳು, ರೈತರು, ವರ್ತಕರು ಮತ್ತು ಕೂಲಿಕಾರ್ಮಿಕರು ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ ಹೀಗೆ ಯಾವುದೇ ಮೂಲಸೌಕರ್ಯವಿಲ್ಲ ಎಂದು ವರ್ತಕರು ದೂರಿದ್ದಾರೆ.

Advertisement

ಪ್ರತಿಭಟನೆಯಲ್ಲಿ ಶಾಸಕ ಗೋಪಾಲಯ್ಯ, ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಲೋಕೇಶ್‌, ಉಪಾಧ್ಯಕ್ಷ ಬಿ.ಎಂ.ಎಲ್‌.ನಾಗರಾಜ್‌, ಕಾರ್ಯದರ್ಶಿ ಉದಯಶಂಕರ್‌, ಜಂಟಿ ಕಾರ್ಯದರ್ಶಿ ಎಚ್‌.ಆರ್‌.ಅಶೋಕ್‌, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಬಿಬಿಎಂಪಿ ಸದಸ್ಯ ಮಹದೇವ ಸೇರಿದಂತೆ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರು, ರೈತರು ಪಾಲ್ಗೊಂಡಿದ್ದರು. 

ಬಂದ್‌ ನಿರ್ಧಾರ ವಾಪಸ್‌
ಪ್ರತಿಭಟನಾಕಾರರ ಬೇಡಿಕೆಗೆ ಎಪಿಎಂಸಿ ಅಧ್ಯಕ್ಷರು ಸ್ಪಂದಿಸಲಿಲ್ಲ. ಇದರಿಂದ ಆಕ್ರೋಶಗೊಂಡ ವರ್ತಕರು, ಆ.19ರಂದು ಮಾರುಕಟ್ಟೆ ಬಂದ್‌ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಕೈಗೊಂಡರು. ಆದರೆ, ಶುಕ್ರವಾರ ಸಂಜೆ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು, ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಮುಖಂಡರೊಂದಿಗೆ ಮಾತನಾಡಿದ್ದು, ವಾರದೊಳಗೆ ಸಮಸ್ಯೆ ಕುರಿತು ಚರ್ಚಿಸಿ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಂದ್‌ ನಿರ್ಧಾರವನ್ನು ಸಂಘ ವಾಪಸ್‌ ಪಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next