Advertisement

ಪ್ರವಾಸಿಗರಿಗೆ ಮುಳುವಾದ ತುಂಗೆಯ ಸುಳಿ!

11:50 AM Jun 25, 2018 | |

„ರಮೇಶ ಕರುವಾನೆ
ಶೃಂಗೇರಿ
: ಜಗತ್ಟ್ರ ಸಿದ್ಧ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವಂತೆ ತುಂಗಾನದಿಯಲ್ಲಿ
ಸ್ನಾನಕ್ಕೆಂದು ತೆರಳಿದ ವೇಳೆ ಸಾವನ್ನಪ್ಪುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ.

Advertisement

ಗಂಗಾಮೂಲದಲ್ಲಿ ಹುಟ್ಟಿ ಹರಿದು ಬರುವ ತುಂಗಾ ನದಿ ಸಣ್ಣ ಪುಟ್ಟ ಹಳ್ಳ,ಉಪ ನದಿ ಸೇರಿಕೊಂಡು ಶೃಂಗೇರಿ ಮೂಲಕವಾಗಿ ಹರಿದುಹೋಗುತ್ತದೆ. ಬೇಸಿಗೆಯಲ್ಲೂ ಸಾಕಷ್ಟು ನೀರು ಹರಿಯುವ ತುಂಗಾ ನದಿ ಶಾಂತವಾಗಿ ಹರಿಯುವುದರಿಂದ ಇದರ ಆಳ,ಅಪಾಯ ಅರಿವಾಗದೇ ಪ್ರವಾಸಿಗರು ಪ್ರತಿ ವರ್ಷ ಜೀವ ಕಳೆದುಕೊಳ್ಳುತ್ತಿದ್ದಾರೆ.

ಶ್ರೀಮಠಕ್ಕೆ ಬರುವ ಪ್ರವಾಸಿಗರೇ ಜೀವ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಬೆಂಗಳೂರು, ಮೈಸೂರು, ತಮಿಳುನಾಡು,ಆಂದ್ರ, ತೆಲಂಗಾಣ ಸೇರಿದಂತೆ ದಕ್ಷಿಣ ರಾಜ್ಯದ ಲಕ್ಷಾಂತರ ಭಕ್ತರು ಪ್ರತಿ ವರ್ಷ ಪೀಠಕ್ಕೆ ಆಗಮಿಸುತ್ತಾರೆ.  ಬಯಲು ಪ್ರದೇಶದಿಂದ ಆಗಮಿಸುವ ಪ್ರವಾಸಿಗರು, ಸ್ವಚ್ಚ, ಸುಂದರವಾಗಿ ಹರಿಯುವ ನೀರನ್ನು ಕಂಡೊಡನೆ ಖುಷಿಯಿಂದ ಒಮ್ಮೆಲೆ ನದಿಗೆ ಇಳಿದು ನದಿಯ ಆಳದ ಅರಿವಿಲ್ಲದೇ ಮುಂದೆ ಸಾಗುತ್ತಾರೆ. ನದಿಯು ನಿಧಾನವಾಗಿ ಹರಿಯುತ್ತಿದ್ದರೂ, ನದಿಯಲ್ಲಿರುವ ಸುಳಿ, ಗುಂಡಿ ಒಮ್ಮೆಲೆ ಗುಂಡಿಗೆ ಎಳೆಯುತ್ತದೆ. ಒಮ್ಮೆ ಮುಳಗತೊಡಗಿದ ವ್ಯಕ್ತಿ ಸಹಾಯಕ್ಕಾಗಿ ಕೂಗತೊಡಗಿದರೂ, ರಕ್ಷಿಸಲು ಸಾಧ್ಯವಾಗದೇ ವ್ಯಕ್ತಿ ಮುಳುಗಿ ಸಾಯುತ್ತಾರೆ. ಶ್ರೀ ಮಠದ ಸಮೀಪ ಎಚ್ಚರಿಕೆಯ ಫಲಕ ಮತ್ತು ಕಾವಲುಗಾರರನನ್ನು ಇದಕ್ಕಾಗಿಯೇ ನಿಯುಕ್ತಿಗೊಳಿಸಲಾಗಿದೆ. 

ನದಿ ಅಪಾಯವಿರುವ ಜಾಗದಲ್ಲಿ ಹಗ್ಗವನ್ನು ಕಟ್ಟಿ ಮುಂದೆ ಸಾಗದಂತೆ ನಿರ್ಬಂಧಿಸಲಾಗಿದೆ. ಆದರೆ ಪ್ರವಾಸಿಗರು ನೀರನ್ನು ಕಂಡೊಡನೇ ಯಾರ ಎಚ್ಚರಿಕೆಯ ಮಾತನ್ನು ಕೇಳುವ ವ್ಯವಧಾನ ಇರುವುದಿಲ್ಲ. ಶ್ರೀ ಮಠದ ಸಮೀಪವಿರುವ ಮೀನುಗಳು ಪ್ರವಾಸಿಗರಿಗೆ ಆಕರ್ಷಕ ಕೇಂದ್ರವಾಗಿದ್ದು, ಮೀನಿನ ಹಿಂದೆ ತೆರಳುವ ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಾರೆ.

ತಾಲೂಕಿನ ಉಳುವೆಬೈಲಿನ ಸಮೀಪ ತುಂಗಾ ನದಿಯಲ್ಲಿ ಸಂಗೀತ ನಿರ್ದೇಶಕ, ಗಾಯಕ ಜಿ.ವಿ.ಅತ್ರಿ ಸಹಿತ ಕುಟುಂಬದ ಐವರು ಸದಸ್ಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು ದೊಡ್ಡ ದುರಂತವಾಗಿದೆ. ಪ್ರತಿ ವರ್ಷ ಶ್ರೀ ಶಾರದಾ ಪೀಠಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು ತುಂಗಾ ನದಿಯಲ್ಲಿ ಸಾಯುತ್ತಿರುವುದು ವರದಿಯಾಗುತ್ತಲೇ ಇದೆ.

Advertisement

ಶ್ರೀಮಠದ ಬಳಿ ಎಚ್ಚರಿಕೆಯ ಫಲಕ ಮತ್ತು ರಕ್ಷಕರ ಮಾತನ್ನು ಕೇಳದೆ ನದಿಗೆ ಇಳಿದು ಅಪಾಯಕ್ಕೆ ಸಿಲುಕುತ್ತಾರೆ. ಗಾಂಧಿ ಮೈದಾನದಲ್ಲಿ ಪ.ಪಂ.ನ ಸ್ನಾನ ಘಟ್ಟ ನಿರ್ಮಿಸಿದ್ದು, ಇದು ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಪ್ರವಾಸೋದ್ಯಮ ಇಲಾಖೆ ಪ್ರಕಾರ ಕಳೆದ ಸಾಲಿನಲ್ಲಿ ಇಲ್ಲಿಗೆ ಆಗಮಿಸಿದ್ಧ ಭಕ್ತರ ಸಂಖ್ಯೆ 50ಲಕ್ಷ ತಲುಪಿದೆ.

ಶ್ರೀ ಮಠದ ಆವರಣದಲ್ಲಿರುವ ತುಂಗಾನದಿ ಸ್ನಾನ ಘಟ್ಟದಲ್ಲಿ ಅಪಾಯದ ಮುನ್ಸೂಚನೆ ನೀಡಿ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಈಜುವುದು, ಮೀನು ಹಿಡಿಯುವುದು, ಬಟ್ಟೆ ಒಗೆಯುವುದು ಇನ್ನಿತರೆ ಕಾರ್ಯಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸೂಚನಾಫಲಕ ಹಾಕಲಾಗಿದೆ.

ಆದರೆ ಬೇಸಿಗೆಯಲ್ಲಿ ಬಿಸಿಲ ಧಗೆಯಲ್ಲಿ ಹೊಳೆಯುವ ನೀರು ನೋಡಿದ ತಕ್ಷಣ ಸ್ನಾನ ಮಾಡಲು ಇಚ್ಛಿಸುವ ಆಕಾಂಕ್ಷಿಗಳು ಪಪಂ ವಾಹನ ನಿಲುಗಡೆಯ ಗಾಂಧಿ ಮೈದಾನದ ಬಳಿ ಸ್ನಾನಕ್ಕೆ ತೆರಳಿ ಅಪಾಯದ ಅರಿವಿಲ್ಲದೆ ತುಂಗಾನದಿ ಪಾಲಾಗುತ್ತಿದ್ದಾರೆ. ದುರ್ಘ‌ಟಣೆ ನಡೆದಾಗ ಸ್ಥಳೀಯರು ಸೇರಿದಂತೆ ಭಕ್ತರು ಪ.ಪಂ ಹಾಗೂ ಶ್ರೀ ಮಠವನ್ನು ದೂರುತ್ತಾರೆ.

ಲಕ್ಷಾಂತರ ಪ್ರವಾಸಿಗರು ಆಗಮಿಸುವ ಶ್ರೀ ಶಾರದಾ ಪೀಠದಲ್ಲಿ ಪ್ರತಿ ವರ್ಷ ಪ್ರವಾಸಿಗರು ನದಿಯಲ್ಲಿ ಮುಳುಗಿ ಸಾಯುತ್ತಿದ್ದು, ಇದರಲ್ಲಿ ಬಹುತೇಕ ಯುವಕರೇ ಆಗಿರುತ್ತಾರೆ. ಶಾಂತವಾಗಿ ಹರಿಯುವ ನದಿ ಕಂಡು ರೋಮಾಂಚನಗೊಳ್ಳುವ ಪ್ರವಾಸಿಗರು, ಒಮ್ಮೆಲೆ ನದಿಗೆ ದುಮುಕಿ,ಈಜುವ ದುಸ್ಸಾಹಸಕ್ಕೆ ಇಳಿಯುತ್ತಾರೆ.ನದಿಯಲ್ಲಿ ಆಗುತ್ತಿರುವ ಅವಘಡ ತಪ್ಪಿಸಲು ಗಾಂಧಿ ಮೈದಾನದ ಬಳಿ ಮತ್ತು ಶ್ರೀಮಠದ ಬಳಿ ನದಿಯಲ್ಲಿ ರಕ್ಷಣಾ ಬೇಲಿ ಶಾಶ್ವತವಾಗಿರುವಂತೆ ಅಳವಡಿಸಬೇಕು.
ಸುರೇಂದ್ರ ಭಟ್‌, ಶೃಂಗೇರಿ.

ಪ್ರವಾಸಿಗರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗುತ್ತಿದೆ. ಪ್ರವಾಸಿಗರಿಗೆ ಸಾಕಷ್ಟು ನದಿಯ ಅಪಾಯದ ಬಗ್ಗೆ ಎಚ್ಚರಿಕೆಯನ್ನು ಸಂಬಂಧಿಸಿದ ಕಾವಲುಗಾರ, ಸ್ಥಳೀಯರು, ಆರಕ್ಷಕ ಸಿಬ್ಬಂದಿ ನೀಡಿದರೂ ಸಹ ಅವರು ನದಿಯ ಆಳದ ಗಂಭಿರತೆ ತಿಳಿಯದೆ. ಅಪಾಯಕ್ಕೆ ಸಿಲುಕುತ್ತಾರೆ. ಸ್ಥಳದಲ್ಲಿ ಪ.ಪಂ. ಶ್ರೀಮಠದವರು ಎಚ್ಚರಿಕೆ ಫಲಕ ಅಳವಡಿಸಿದ್ದರೂ,ಇದನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದದ ಸಂಗತಿಯಾಗಿದೆ.-
 ಬಿ.ಎನ್‌. ಕೃಷ್ಣ, ಪ.ಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next