Advertisement
ಸಹಸ್ರ ಮೋದಕ ಗಣಪತಿ ಹೋಮದೊಂದಿಗೆ ಮಾ. 30ರಂದು ಶತಮಾನೋತ್ಸವ ಸಪ್ತಾಹ ವಿಧ್ಯುಕ್ತ ಚಾಲನೆ ಪಡೆಯಲಿದೆ. ಅಂದು ಬೆಳಗ್ಗೆ ಮಠದ ಆವರಣದಲ್ಲಿ ನೂರಾರು ಋತ್ವಿಜರು, ಪಂಡಿತರು, ಅದ್ವೈತ ವಿದ್ವಾಂಸರು, ಮಠದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಗಣಪತಿ ಹೋಮ ಸಂಪನ್ನಗೊಳ್ಳಲಿದೆ.
ಮಾ. 31ರಂದು ಮಠದ ಆವರಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣ ನೆರವೇರಲಿ. ಈ ಸಂದರ್ಭ ಶ್ರೀ ಜಗದ್ಗುರುಗಳು ಸಾರ್ವಜನಿಕ ದರ್ಶನ ನೀಡಲಿದ್ದು, ಪಾದಪೂಜೆ ಮತ್ತು ಭಿಕ್ಷಾವಂದನೆ ನಡೆಯಲಿದೆ. ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ ಸಂಸ್ಥೆಗಳಿಗೆ ಅವರು ಭೇಟಿ ನೀಡಲಿದ್ದಾರೆ. ರಾತ್ರಿ 8.30ಕ್ಕೆ ಮಠದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ ನೆರವೇರಿಸಲಿದ್ದಾರೆ.
Related Articles
ಏ. 1ರಂದು ಬೆಳಗ್ಗೆ 8ಕ್ಕೆ ಶ್ರೀ ಜಗದ್ಗುರುಗಳು ನಂಜನಗೂಡಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಂದು ರಾತ್ರಿ 8.30ಕ್ಕೆ ಮೈಸೂರಿನ ಶಂಕರ ಮಠದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಸಲಿದ್ದಾರೆ. ಏ. 2ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಂಕರ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನ , ಪಾದಪೂಜೆ ಹಾಗೂ ಭಿಕ್ಷಾ ವಂದನೆ ನಡೆಯಲಿದೆ. ಸಂಜೆ 4:30ಕ್ಕೆ ನಗರದ ವಿವಿಧ ದೇವಾಲಯಗಳು ಹಾಗೂ ಸಂಘ ಸಂಸ್ಥೆಗಳಿಗೆ ಜಗದ್ಗುರುಗಳು ಭೇಟಿ ನೀಡಲಿದ್ದಾರೆ.
Advertisement
ವಿಶ್ವೇಶ್ವರ ದೇವಸ್ಥಾನದಲ್ಲಿ ಕುಂಭಾಭಿಷೇಕ:ಏ. 3ರ ಬೆಳಗ್ಗೆ 9ಕ್ಕೆ ನಗರದ ಗೀತಾ ರಸ್ತೆಯ ಶ್ರೀ ಪ್ರಸನ್ನ ವಿಶ್ವೇಶ್ವರ ದೇವಸ್ಥಾನದಲ್ಲಿ ಆಯೋಜನೆ ಗೊಂಡಿರುವ ಕುಂಭಾಭಿಷೇಕದ ಸಾನ್ನಿಧ್ಯವನ್ನು ಶ್ರೀ ಜಗದ್ಗುರುಗಳು ವಹಿಸಲಿದ್ದಾರೆ. ಪಾದಪೂಜೆ ಮತ್ತು ಭಿಕ್ಷಾವಂದನೆಯನ್ನು ಜಗದ್ಗುರುಗಳು ಸ್ವೀಕರಿಸಲಿರುವುದು ವಿಶೇಷ. ಸಂಜೆ 4.30 ರಿಂದ 7 ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ ಸಂಸ್ಥೆಗಳಿಗೆ ಪೂಜ್ಯರು ಭೇಟಿ ನೀಡಿ ಭಕ್ತರನ್ನು ಅನುಗ್ರಹಿಸಲಿದ್ದಾರೆ. ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ:
ಏ. 4 ರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1ರ ವರೆಗೆ ಶಂಕರ ಮಠದ ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ ಸನ್ನಿಧಿಗಳಲ್ಲಿ ಕುಂಭಾಭಿಷೇಕ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ. ಶ್ರೀ ವಿಧುಶೇಖರ ಭಾರತೀ ತೀರ್ಥ ಜಗದ್ಗುರುಗಳು ಸಾರ್ವಜನಿಕ ದರ್ಶನ, ಪಾದಪೂಜೆ ಮತ್ತು ಭಿಕ್ಷಾವಂದನೆ ಸಾನ್ನಿಧ್ಯ ವಹಿಸಿ ಭಕ್ತ ವೃಂದವನ್ನು ಆಶೀರ್ವದಿಸಲಿದ್ದಾರೆ. ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಮರ್ಪಿಸಲಿದ್ದಾರೆ. 5ರಂದು ಗುರುವಂದನಾ ಕಾರ್ಯಕ್ರಮ
ಏ. 5ರ ಬೆಳಗ್ಗೆ 8:30 ರಿಂದ ಮಧ್ಯಾಹ್ನ 1 ರವರೆಗೆ ಶಂಕರ ಮಠದ ಆವರಣದಲ್ಲಿ ಶ್ರೀ ಶಾರದಾಂಬಾ ಹಾಗೂ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ ಮತ್ತು ಶಿಖರ ಕುಂಭಾಭಿಷೇಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಲಿವೆ. ಸಂಜೆ 5.30ಕ್ಕೆ ಮಠದ ಆವರಣದ ವಿದ್ಯಾಶಂಕರ ನಿಲಯ ಕಲ್ಯಾಣ ಮಂಟಪದಲ್ಲಿ ‘ಗುರುವಂದನಾ’ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಆಗಮಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆ ಪ್ರಮುಖರು, ನಗರದ ಗಣ್ಯರು, ಸಾರ್ವಜನಿಕರು ಮತ್ತು ಮಠದ ಭಕ್ತರು ಸಾಕ್ಷಿಯಾಗಲಿದ್ದಾರೆ. ಮಂತ್ರಾಕ್ಷತೆ ಅನುಗ್ರಹ:
ಏ. 6ರ ಬೆಳಗ್ಗೆ 9ಕ್ಕೆ ಪೂಜ್ಯ ಜಗದ್ಗುರುಗಳು ಸಾರ್ವಜನಿಕ ದರ್ಶನ ನೀಡಿ, ಪಾದಪೂಜೆ ಮತ್ತು ಭಿಕ್ಷಾ ವಂದನೆ ಸ್ವೀಕಾರ ಮಾಡಲಿದ್ದಾರೆ. ಈ ಸಂದರ್ಭ ಅವರು ಶಿಷ್ಯರಿಗೆ, ಭಕ್ತರಿಗೆ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ ಎಂದು ಅಭಿನವ ಶಂಕರಾಲಯದ ಧರ್ಮಾಧಿಕಾರಿ ಎಚ್. ರಾಮಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.