Advertisement

Tooth Kasu; ಹಂಸಲೇಖ ಶಿಷ್ಯರಿಂದ ಹೊಸ ಪ್ರಯತ್ನ

05:53 PM Mar 21, 2024 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ತೂತ್‌ ಕಾಸು’ ಸಿನಿಮಾ ಈ ವಾರ (ಮಾ. 22ಕ್ಕೆ) ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ “ದೇಸಿ ಶಾಲೆ’ಯಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ. ಕಾಮಿಡಿ ಜಾನರ್‌ ಕಥಾ ಹಂದರ ಹೊಂದಿರುವ ಈ “ತೂತ್‌ ಕಾಸು’ ಚಿತ್ರಕ್ಕೆ ಯುವ ಪ್ರತಿಭೆ ರವಿ ತೇಜಸ್‌ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಚಿಕ್ಕೇಗೌಡ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

Advertisement

ಇನ್ನು “ತೂತ್‌ ಕಾಸು’ ಸಿನಿಮಾದಲ್ಲಿ ವರುಣ್‌ ದೇವಯ್ಯ ನಾಯಕನಾಗಿ ಹಾಗೂ ಪ್ರಿಷಾ ಹಾಗೂ ಪ್ರೇರಣಾ ಭಟ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿನೋದ್‌ ಆನಂದ್‌ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ “ತೂತ್‌ ಕಾಸು’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

ಇದೇ ವೇಳೆ ಮಾತನಾಡಿದ ನಿರ್ದೇಶಕ ರವಿ ತೇಜಸ್‌, “ಬಹುತೇಕರಿಗೆ ಗೊತ್ತಿರುವಂತೆ, “ತೂತ್‌ ಕಾಸು’ ಎಂಬುದು 1942ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯದ ನಂತರ ತೂತ್‌ ಕಾಸಿನ ಚುನಾವಣೆಯನ್ನು ನಿಲ್ಲಿಸಲಾಯಿತು. ಸಿನಿಮಾದಲ್ಲಿ ಇದೊಂದು ಕೋಡ್‌ ವರ್ಡ್‌ ಆಗಿ ಬಳಸಲಾಗಿದೆ. ನಮ್ಮ ಚಿತ್ರ ಮಾಫಿಯಾ ಗ್ಯಾಂಗ್‌ ಬಗ್ಗೆ ಇದೆ. ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಇದರ ಕಥೆಯನ್ನು ಹೇಳಿದ್ದೇವೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

ನಾಯಕ ವರುಣ್‌ ದೇವಯ್ಯ ಮಾತನಾಡಿ, “ಸುಮಾರು 10 ವರ್ಷದ ಗ್ಯಾಪ್‌ ಬಳಿಕ ಮಾಡಿರುವ ಸಿನಿಮಾ ಇದು. ತುಂಬಾ ಎಫ‌ರ್ಟ್‌ ಹಾಕಿ ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಆಡಿಯನ್ಸ್‌ಗೆ ಇಷ್ಟವಾಗುವ ಎಲ್ಲ ಥರದ ಅಂಶಗಳೂ ಸಿನಿಮಾದಲ್ಲಿದ್ದು, ಥಿಯೇಟರಿನಲ್ಲಿ ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ನಾಯಕಿ ಪ್ರಿಷಾ, ಸಂಗೀತ ನಿರ್ದೇಶಕ ಲೋಕಿ ತವಸ್ಯ, ಛಾಯಾಗ್ರಹಕ ಗಣೇಶ್‌ ಕೆಳಮನೆ, ಹಿನ್ನೆಲೆ ಸಂಗೀತ ನೀಡಿರುವ ಮಹೇಶ್‌ ಭಾರದ್ವಾಜ್‌ ಮತ್ತಿತರ ಕಲಾವಿದರು ಮತ್ತು ತಂತ್ರಜ್ಞರು “ತೂತ್‌ ಕಾಸು’ ಸಿನಿಮಾದ ಬಗ್ಗೆ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next