Advertisement

ಸಿಆರ್‌ಝಡ್‌ ಸರಳೀಕೃತ ನಿಯಮಕ್ಕೆ ಅಸ್ತು : ಕರಾವಳಿಯ ಪ್ರವಾಸೋದ್ಯಮಕ್ಕೆ ಚೈತನ್ಯ

09:36 AM Sep 08, 2022 | Team Udayavani |

ಮಂಗಳೂರು/ಸುರತ್ಕಲ್‌ : ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಕಾಯ್ದೆಯನ್ನು ಸರಳಗೊಳಿಸಿ ರೂಪಿಸಿರುವ ಹೊಸ ನಕ್ಷೆಯನ್ನು ಕೊನೆಗೂ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಅನುಮೋ ದಿಸಿದ್ದು, ರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ.

Advertisement

ನೆರೆಯ ಗೋವಾ ಹಾಗೂ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸಿಆರ್‌ಝಡ್‌ ನಿಯಮದಲ್ಲಿ ತಿದ್ದುಪಡಿ ತರಬೇಕು ಎಂಬ ಕರಾವಳಿ ಭಾಗದ ಸುಮಾರು 3 ದಶಕಗಳ ಬೇಡಿಕೆ ಈಡೇರಿದೆ. ಈ ಮೂಲಕ ಸಾಗರತೀರ ಪ್ರವಾಸೋದ್ಯಮ ಹೊಂದಿರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ.

ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರವು (ಕೆಎಸ್‌ಸಿಝಡ್‌ಎಂಎ) ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ 2019ರಂತೆ ನಕ್ಷೆಯನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು.

ಅನುಕೂಲಗಳು
ಹೊಸ ನಿಯಮಾವಳಿಯಂತೆ ಸಿಆರ್‌ಝಡ್‌ ವಲಯದಲ್ಲಿ ಭರತ ರೇಖೆಯಿಂದ 10 ಮೀಟರ್‌ ಬಳಿಕ ತಾತ್ಕಾಲಿಕ ಕಟ್ಟಡ, ಸ್ಟ್ರಕ್ಚರ್‌ಗಳನ್ನು ನಿರ್ಮಿಸಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ. ಸಿಆರ್‌ಝಡ್‌ 2 ಮತ್ತು 3ನೇ ವಲಯದಲ್ಲಿ ಮೀನುಗಾರರ ಮನೆ ನಿರ್ಮಾಣ ಸರಳವಾಗಲಿದೆ. ಅನುಮೋದನೆ ದೊರಕದೆ ಬಾಕಿಯಾಗಿರುವ ನೂರಾರು ಕಡತಗಳು ಮುಂದಿನ ದಿನಗಳಲ್ಲಿ ವಿಲೇವಾರಿಯಾಗುವ ಸಾಧ್ಯತೆಯಿದೆ.

ಸಿಆರ್‌ಝಡ್‌ 1ರಲ್ಲಿ ಮ್ಯಾನ್‌ ಗ್ರೋವ್‌ ವಾಕ್‌, ಇಕೋ ಟೂರಿಸಂ ಮತ್ತಿತರ ತಾತ್ಕಾಲಿಕ ಚಟುವಟಿಕೆಗೆ ಅನುಮತಿ ಸಿಗಲಿದೆ. ಸಿಆರ್‌ಝಡ್‌ 3ರಲ್ಲಿ ಗ್ರಾಮೀಣ ತೀರ ಪ್ರದೇಶದಲ್ಲಿ 2011ರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ನಿಷೇಧಿತ ಪ್ರದೇಶ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಸಿಆರ್‌ಝಡ್‌ ವಲಯದ ನದಿ ಪ್ರದೇಶದಲ್ಲಿ ಈ ಹಿಂದೆ ಇದ್ದ ಸಿಆರ್‌ಝಡ್‌ ವ್ಯಾಪ್ತಿಯನ್ನು 100 ಮೀಟರ್‌ನಿಂದ 50 ಮೀಟರ್‌ಗೆ ಇಳಿಸಲಾಗಿದೆ. ಇದರಿಂದ ಕೇರಳದಂತೆ ಕರ್ನಾಟಕದಲ್ಲೂ ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗಲಿದೆ. ಕೇರಳ, ಕೊಡಗು ರಾಜ್ಯದಂತೆ ಸ್ವ ಉದ್ಯಮ, ಹೋಂ ಸ್ಟೇ, ಕಿರು ಆಹಾರ ಮಳಿಗೆ ಆರಂಭ ಮತ್ತಿತರ ಚಟುವಟಿಕೆಯಿಂದ ಸಾವಿರಾರು ಉದ್ಯೋಗವಕಾಶ ಸೃಷ್ಟಿಯಾಗಲಿದೆ.

Advertisement

ಬೀಚ್‌ ಟೂರಿಸಂಗೆ ಉತ್ತೇಜನ
ಹೊಸ ನಕ್ಷೆ ಅನುಮೋದನೆಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 34 ಬೀಚ್‌ಗಳು ಹಾಗೂ 6 ಹಿನ್ನೀರು ತಾಣಗಳಿಗೆ ಅನುಕೂಲವಾಗಲಿದೆ. ಇವುಗಳನ್ನು ಡೆಸಿಗ್ನಿನೇಟೆಡ್‌ ಬೀಚ್‌ ಎಂದು ಈಗಾಗಲೇ ಗುರುತಿಸಿ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣ ಕೇಂದ್ರಕ್ಕೆ ಸಲ್ಲಿಸಲಾಗಿತ್ತು.

ದಕ್ಷಿಣ ಕನ್ನಡದ ಸಸಿಹಿತ್ಲು, ಸುರತ್ಕಲ್‌, ಚಿತ್ರಾಪುರ, ಇಡ್ಯಾ, ಹೊಸಬೆಟ್ಟು, ಪಣಂಬೂರು, ಬೆಂಗ್ರೆ, ತಣ್ಣೀರುಬಾವಿ, ತಣ್ಣೀರುಬಾವಿ ಬ್ಲೂಫ್ಲ್ಯಾಗ್‌ ಬೀಚ್‌, ಉಳ್ಳಾಲ, ಸೋಮೇಶ್ವರ, ಸೋಮೇಶ್ವರ ಬಟ್ಟಪ್ಪಾಡಿ ಬೀಚ್‌ಗಳು, ಉಡುಪಿ ಜಿಲ್ಲೆಯ ಪಡುವರಿ ಸೋಮೇಶ್ವರ, ಕಿರಿಮಂಜೇಶ್ವರ, ಮರವಂತೆ, ತ್ರಾಸಿ, ಕೋಡಿ ಕುಂದಾಪುರ, ಕೋಟೇಶ್ವರ ಕೋಡಿ, ಬೀಜಾಡಿ, ಕೋಟ ಪಡುಕೆರೆ, ಕೋಡಿ ಕನ್ಯಾಣ, ಕೋಡಿ ಬೆಂಗ್ರೆ, ಕದಿಕೆ, ತೊಟ್ಟಂ, ಮಲ್ಪೆ, ಮಲ್ಪೆ ಸೀವಾಕ್‌, ಪಡುಕೆರೆ, ಮಟ್ಟು, ಕಾಪು, ಪಡುಬಿದ್ರೆ ಮುಖ್ಯ ಬೀಚ್‌, ಹೆಜ್ಮಾಡಿ ಬೀಚ್‌ಗಳು ಡೆಸಿಗ್ನಿನೇಟೆಡ್‌ ಬೀಚ್‌ಗಳನ್ನು ಒಳಗೊಂಡಿದೆ.

ಹಲವು ರಿಯಾಯಿತಿಗಳು
ನೆರೆಯ ಕೇರಳ ಹಾಗೂ ಗೋವಾ ರಾಜ್ಯಗಳು 2011ರ ಸಿಆರ್‌ಝಡ್‌ನ‌ಲ್ಲಿ ಈಗಾಗಲೇ ಕೆಲವು ರಿಯಾಯಿತಿಗಳನ್ನು ಹೊಂದಿವೆ. ಇಲ್ಲಿ ಹಿನ್ನೀರು ಹಾಗೂ ದ್ವೀಪಗಳ ಪ್ರದೇಶದಲ್ಲಿ ಈಗಾಗಲೇ ಇಲ್ಲಿ 100 ಮೀಟರ್‌ ಬದಲು 50 ಮೀಟರ್‌ ಸಿಆರ್‌ಝಡ್‌ ವ್ಯಾಪ್ತಿ ಇದೆ. ಇದಲ್ಲದೆ ಸಿಆರ್‌ಝಡ್‌ 2ರಲ್ಲಿ ಕೆಲವು ತಾತ್ಕಾಲಿಕ ನಿರ್ಮಾಣಗಳನ್ನು ಮಾಡಲು ಅವಕಾಶವಿತ್ತು. ಈ ರಿಯಾಯಿತಿಗಳು ಕರ್ನಾಟಕ ಕರಾವಳಿಗೆ ಇರಲಿಲ್ಲ. ಇದೀಗ ಹೊಸ ನಕ್ಷೆ ಅನುಮೋದನೆಯಿಂದ ಕರ್ನಾಟಕಕ್ಕೆ ಈ ರಿಯಾಯಿತಿ ಲಭಿಸಿದೆ. ಕೇರಳ ರಾಜ್ಯದ 2019ರ ಅಧಿಸೂಚನೆ ಇನ್ನೂ ಅಂಗೀಕಾರಗೊಂಡಿಲ್ಲ,

300 ಕಿ.ಮೀ. ಸಾಗರತೀರ
ಕರ್ನಾಟಕದ ಕರಾವಳಿಯಲ್ಲಿ ಸೋಮೇಶ್ವರದಿಂದ ಕಾರವಾರದವರೆಗೆ ಸುಮಾರು 300 ಕಿ.ಮೀ. ಸಾಗರತೀರವಿದೆ. ದ.ಕ. ಜಿಲ್ಲೆ 42 ಕಿ.ಮೀ. ಹಾಗೂ ಉಡುಪಿ ಜಿಲ್ಲೆ 98 ಕಿ.ಮೀ. ಸಮುದ್ರ ತೀರವನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 160 ಕಿ.ಮೀ. ಸಾಗರ ತೀರವಿದೆ. ಇದಲ್ಲದೆ ಒಳನಾಡಿನಲ್ಲೂ ನದಿಗಳ ಇಕ್ಕೆಲಗಳಲ್ಲಿ ಆನೇಕ ರಮಣೀಯ ಹಿನ್ನೀರು ತಾಣಗಳಿದ್ದು ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಹೂಡಿಕೆ ಮಾಡಲು ಈಗಾಗಲೇ ಬಹಳಷ್ಟು ಮಂದಿ ಉತ್ಸುಕತೆ ತೋರಿದ್ದಾರೆ.

ರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಸಿಆರ್‌ಝಡ್‌ನ‌ ನಿಯಮಗಳು ತೊಡಕಾಗಿದ್ದವು. ಕೇರಳ ಹಾಗೂ ಗೋವಾದಂತೆ ನಮಗೆ ಸಾಗರತೀರ ಅಭಿವೃದ್ಧಿ ಮಾಡಲು ಆಗಿರಲಿಲ್ಲ. ಇದೀಗ ನಮ್ಮ ಸರಕಾರ ಈ ಸಮಸ್ಯೆಗಳನ್ನು ನಿವಾರಣೆ ಮಾಡಿದೆ. ಮುಂದಿನ ದಿನಗಳಲ್ಲಿ ಮಂಗಳೂರಿನಿಂದ ಕಾರವಾರದ ತನಕದ ಸಾಗರತೀರ ವಲಯದಲ್ಲಿ ಪ್ರವಾಸೋದ್ಯಮ ಮತ್ತು ನಮ್ಮ ತುಳುನಾಡಿನ ಸಾಂಸ್ಕೃತಿಕ ಚಟುವಟಿಕೆಗಳು ಇನ್ನಷ್ಟು ವಿಶಾಲತೆ ಪಡೆಯಲು ನಿಯಮಾವಳಿಗಳ ಸಡಿಲಿಕೆಯಿಂದ ಸಾಧ್ಯವಾಗಲಿದೆ ಮತ್ತು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ.
– ಸುನಿಲ್‌ ಕುಮಾರ್‌, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next