ಚಿಕ್ಕಮಗಳೂರು.ಅ.07: ಜೀವವೈದ್ಯಮಯ ತಾಣ. ಪ್ರಾಕೃತಿಕ ಸೊಬಗು. ಸುಂದರ ಪ್ರವಾಸಿ ತಾಣವಾಗಿರೋ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನ ಬಿಸಾಡಿರುವುದರಿಂದ ಸ್ಥಳಿಯರು ಪ್ರವಾಸಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದೇವರಮನೆ ಗುಡ್ಡ, ದತ್ತಪೀಠ ಇವುಗಳಷ್ಟೆ ಸುಂದರವಾಗಿರೋ ತಾಣ ಬಲ್ಲಾಳರಾಯನ ದುರ್ಗ. ಹಿಂದೆ ಇಲ್ಲಿ ರಾಜರ ಆಳ್ವಿಕೆಯ ಕುರುಹುಗಳು ಇವೆ.
ಇದನ್ನೂ ಓದಿ:- ವಾಡಿ ಎಸಿಸಿ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು
ಈ ಬಲ್ಲಾಳರಾಯನ ದುರ್ಗದ ಪಕ್ಕದ ಪಕ್ಕದಲ್ಲೇ ರಾಣಿಝರಿ ಕೂಡ ಇದೆ. ಎತ್ತರದ ಪ್ರದೇಶದಿಂದ ಧುಮ್ಮಿಕ್ಕೋ ಈ ಜಲಪಾತದ ಸೌಂದರ್ಯ ನೋಡುಗರ ಕಣ್ಣಿಗೆ ಕಟ್ಟುವಂತಿದೆ. ಹಿಂದೆ ಇಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜನ ಪತ್ನಿ ಝರಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಇಲ್ಲಿನ ಝರಿಗೆ ರಾಣಿಝರಿ ಎಂದು ಹೆಸರು ಬಂದತು ಅನ್ನೋದು ಸ್ಥಳಿಯರ ಮಾತು. ಆದರೆ, ಮುಗಿಲೆತ್ತರದ ಬೆಟ್ಟ-ಗುಡ್ಡಗಳಿಂದ ಕೂಡಿರೋ ಇಲ್ಲಿನ ಸುಂದರ ವಾತಾವರಣದಲ್ಲಿ ರಾತ್ರಿ ವೇಳೆ ಪಾರ್ಟಿ ಕೂಡ ಮಾಡುತ್ತಿರುವುದು ಇಲ್ಲಿನ ಸೌಂದರ್ಯಕ್ಕೆ ಮುಳ್ಳಾಗಿದೆ.
ಪ್ರವಾಸಿಗರು ಹಾಗೂ ಸ್ಥಳಿಯರು ರಾತ್ರಿ ಈ ಸುಂದರ ಜಾಗದಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನ ಅಲ್ಲೇ ಬಿಟ್ಟು, ಹೊಡೆದು ಹಾಕಿ ಹೋಗುತ್ತಿದ್ದಾರೆ. ಇದರಿಂದ ಇಲ್ಲಿನ ಸೌಂದರ್ಯ ಹಾಳಾಗುತ್ತಿದೆ. ಮುಂದಕ್ಕೆ ಇನ್ನೂ ಹಾಳಾಗುತ್ತೆ ಅನ್ನೋ ಆತಂಕ ಸ್ಥಳಿಯರದ್ದು. ಸುತ್ತಲು ಬೆಟ್ಟ-ಗುಡ್ಡಗಳು. ತಣ್ಣನೆಯ ಗಾಳಿ. ಟ್ರಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದ ಟ್ರಕ್ಕಿಂಗ್ ಸ್ಪಾಟ್. ಈ ಸುಂದರ ತಾಣ ಇರುವುದು ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಭಾಗಕ್ಕೂ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಆದರೆ, ಬರುವಂತಹಾ ಪ್ರವಾಸಿಗರು ಇಲ್ಲಿ ಎಲ್ಲೆಂದರಲ್ಲಿ ನೀರಿನ ಬಾಟಲಿ, ಮದ್ಯದ ಬಾಟಲಿಗಳು ಸೇರಿದಂತೆ ತಿಂಡಿ-ತಿನಿಸುಗಳನ್ನ ತಿಂದು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಕೂಡ ನೂರಾರು ಪ್ರವಾಸಿಗರು ಭೇಟಿ ನೀಡಿದ್ದರು. ಹೀಗೆ ಬಂದವರು ಪ್ರವಾಸಿಗರು ಬಂದು ನಿಂತು ನೋಡುವ ಸ್ಥಳದಲ್ಲೇ ಪ್ಲಾಸ್ಟಿಕ್‍ಗಳನ್ನ ಎಸೆದು ಹೋಗಿದ್ದಾರೆ. ಪ್ರಕೃತಿ ಸೌಂದರ್ಯವನ್ನ ಸವಿಯಲು ಬಂದ ಪ್ರವಾಸಿಗರು ಪ್ರವಾಸಿಗರೇ ವಿರುದ್ಧವೇ ಕಿಡಿ ಕಾರಿದ್ದಾರೆ.
ಇದು ನಮ್ಮದು. ನಾವು ಉಳಿಸಿ-ಬೆಳೆಸಬೇಕು ಅನ್ನೋ ಮನೋಭಾವ ಪ್ರವಾಸಿಗರಲ್ಲಿ ಬರಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದರೆ ಕ್ರಮೇಣ ಸೃಷ್ಠಿಸಲಸಾಧ್ಯವಾದಂತಹಾ ಇಂತಹಾ ಸುಂದರ ತಾಣವನ್ನ ಕಳೆದುಕೊಳ್ಳುವುದು ನಿಶ್ಚಿತ. ಹಾಗಾಗಿ, ಪ್ರವಾಸಿಗರು ಕೂಡ ಸ್ವಯಂ ಈ ಸೌಂದರ್ಯವನ್ನ ಉಳಿಸಬೇಕು. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಪ್ರವಾಸಿಗರು ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.