Advertisement

Tourism: ಚಾರಣ ಪ್ರಿಯರ ಸ್ವರ್ಗ- ದೇವರಮನೆ ಬೆಟ್ಟ

10:18 AM Nov 03, 2023 | Team Udayavani |

ಕಾಫಿನಾಡು ಚಿಕ್ಕಮಗಳೂರು ಹಚ್ಚ ಹಸಿರಿನ ಪರಿಸರಕ್ಕೆ ಹೆಸರುವಾಸಿಯಾಗಿದೆ. ಇದು ಪ್ರವಾಸಿಗರ ನೆಚ್ಚಿನ ತಾಣ ಎಂದರೆ ತಪ್ಪಿಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ನೀವೊಮ್ಮೆ ಚಿಕ್ಕಮಗಳೂರಿಗೆ ಭೇಟಿ ಕೊಡಬೇಕು.

Advertisement

ಚಾರಣ ಪ್ರಿಯರಿಗೆ ಇದೊಂದು ಸ್ವರ್ಗಕ್ಕೆ ಹೋದಂತ ಅನುಭವ ನೀಡುತ್ತದೆ. ಚಿಕ್ಕಮಗಳೂರಿನಲ್ಲಿ ಹಲವಾರು ಚಾರಣ ಸ್ಥಳಗಳಿವೆ. ಬಾಬಾ ಬುಡನ್‌ ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ದೇವರಮನೆ ಬೆಟ್ಟ, ಎತ್ತಿನಬುಜ ಹೀಗೆ. ವಿವಿಧ ಗಿರಿ ಶಿಖರಗಳು ಈ ಪ್ರದೇಶದ ಸುತ್ತಮುತ್ತಲಿನಲ್ಲಿದೆ.

ನಾನೀಗ ಇಲ್ಲಿ ಹೇಳ ಹೊರಟಿರುವುದು ದೇವರಮನೆ ಬೆಟ್ಟದ ಕುರಿತು. ಇದು ನನ್ನ ನೆಚ್ಚಿನ ತಾಣಗಳಲ್ಲಿ ಒಂದು.

ಭೂಲೋಕದ ಸ್ವರ್ಗ ಈ ದೇವರಮನೆ ಬೆಟ್ಟ ಎನ್ನಲಾಗುತ್ತದೆ. ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಇದು ಒಂದು. ಸುಮಾರು 800 ವರ್ಷಗಳ ಇತಿಹಾಸವಿರುವ ಕಾಲಭೈರವೇಶ್ವರ ದೇವಾಲಯ ಇಲ್ಲಿದೆ. ದೇವರಮನೆ ಬೆಟ್ಟ ಸಮುದ್ರಮಟ್ಟದಿಂದ 2 ಸಾವಿರ ಅಡಿ ಎತ್ತರದಲ್ಲಿದೆ. ಚಿಕ್ಕಮಗಳೂರಿನ ಮೂಡಿಗೆರೆಯಿಂದ ಸುಮಾರು 25 ಕಿ. ಮೀ. ದೂರದಲ್ಲಿದೆ ಈ ಬೆಟ್ಟ.

ಚಿಕ್ಕಮಗಳೂರು ಜಿಲ್ಲೆಯ ದೇವರಮನೆ ಗ್ರಾಮದಲ್ಲಿರುವ ಈ ಬೆಟ್ಟಕ್ಕೆ ವರ್ಷದ ಯಾವ ಸಮಯದಲ್ಲೂ ಭೇಟಿ ನೀಡಬಹುದು. ಚಳಿಗಾಲದ ಸಮಯದಲ್ಲಿ ಭೇಟಿ ನೀಡಿದರೆ ಅಲ್ಲಿನ ಮಂಜಿನಿಂದ ಆವರಿಸಿದ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯ ಸವಿಯಲು ಇನ್ನೂ ಉತ್ತಮ ಸಮಯ.

Advertisement

20-25 ಕಿ.ಮಿ. ದೂರಕ್ಕೆ ಚಾರಣ ಮಾಡಿ ಬೆಟ್ಟ- ಗುಡ್ಡ ಹತ್ತುವುದೇ ಒಂದು ಸುಂದರ ಅನುಭವ. ಇಲ್ಲಿ ಬೀಸುವ ತಂಪಾದ ಗಾಳಿ, ಸೂರ್ಯನ ಶಾಖ ಬಿಸಿಲನ್ನು ತಡೆಯುವಂತಿರುತ್ತದೆ. ಮುಂಜಾನೆ ಸೂರ್ಯೋದಯದ ಮುನ್ನ ಅಲ್ಲಿನ ಮಂಜು ಮುಸುಕಿದ ಅಥವಾ ಮಂಜಿನಿಂದ ಕೂಡಿದ ಬೆಟ್ಟ ನೋಡುವುದೇ ಆನಂದ. ಅಲ್ಲಿನ ಹಚ್ಚ ಹಸಿರಿನ ಕಣಿವೆಗಳು ಚಾರಣಿಗರನ್ನು ಕೈ ಬೀಸಿ ಕರೆಯುವಂತಿದೆ.

ಪ್ರಕೃತಿಯೊಂದಿಗೆ ಸಮಯ ಕಳೆಯಲು ಇಚ್ಛೆಸುವವರಿಗೆ ಇದೊಂದು ಇಷ್ಟವಾಗುವ ಸ್ಥಳ. ಈ ಹಸಿರ ಬೆಟ್ಟಗಳ ಸಾಲಿನಲ್ಲಿ ಫೋಟೋ, ಸೆಲ್ಫಿ ತೆಗೆದು ಸಮಯವನ್ನು ಆನಂದಿಸಬಹುದು. ಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ.. 12 ವರ್ಷಗಳಿಗೊಮ್ಮೆ ಅರಳುವ ಹೂವು ಈ ಬೆಟ್ಟದಲ್ಲಿದೆ.

ಹಚ್ಚ ಹಸಿರಿನ ಪ್ರದೇಶದಲ್ಲಿ 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಎಂಬ ನೇರಳೆ ಬಣ್ಣದ ಹೂವು ಇಡೀ ಬೆಟ್ಟವನ್ನೇ ಅವರಿಸುತ್ತದೆ. ಈ ಸೌಂದರ್ಯ ಅನುಭವಿಸಲು ಆ ಹೂವು ಅರಳುವ ಸಂದರ್ಭದಲ್ಲಿ ಭೇಟಿ ನೀಡಿ. ಕಳೆದ ವರ್ಷ ನವೆಂಬರ್‌ ನಲ್ಲಿ ನೀಲಕುರುಂಜಿ ಹೂವು ಅರಳಿತ್ತು.

ಕಸಿನ್ಸ್‌ ಆರ್‌ ದಿ ಬೆಸ್ಟ್‌ ಫ್ರೆಂಡ್ಸ್‌ ಆಫ್‌ ಆವರ್‌ ಲೈಫ್ ಅನ್ನೋ ಹಾಗೆ.. ನನ್ನೆಲ್ಲಾ ಚಾರಣಗಳಿಗೆ ನನ್ನ ಕಸಿನ್ಸ್‌ ಉತ್ತಮ ಜತೆಗಾರರು. ಸಮಯ ಸಿಕ್ಕಾಗಲೆಲ್ಲಾ ಅವರೊಂದಿಗೆ ಬೆಟ್ಟ-ಗುಡ್ಡಗಳಿಗೆ ತೆರಳಿ ಸಮಯ ಕಳೆಯುವುದೇ ನನ್ನ ರಿಲ್ಯಾಕ್ಸ್‌  ಮೂಡ್‌. ಹಾಗೇ ನಿಮಗೂ ಮನಸ್ಸಿಗೆ ನೆಮ್ಮದಿ ಬೇಕಾದಾಗ ಚಾರಣಕ್ಕೆ ಹೋಗಲು ಬಯಸುವವರು ದೇವರ ಮನೆ ಬೆಟ್ಟಕ್ಕೊಂದು ಭೇಟಿ ನೀಡಿ.

ನಮ್ಮ ಈಗಿನ ಜಂಜಾಟದ ಬದುಕಿನಲ್ಲಿ ವಿಶ್ರಾಂತಿ ಪಡೆಯಲು ಜೀವನದ ಒತ್ತಡದ ನಿವಾರಿಸಲು ಇಲ್ಲಿಗೆ ಭೇಟಿ ನೀಡಿ ಪ್ರಕೃತಿ ಮಾತೆಯ ಮಡಿಲಲ್ಲಿ ಅಲ್ಲಿನ ಸೌಂದರ್ಯ ಅನುಭವಿಸುವುದು ಒಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತದೆ ಎಂಬುದು ನನ್ನ ಅಭಿಪ್ರಾಯ.

ದೇವರಮನೆ ಬೆಟ್ಟದ ಅಕ್ಕಪಕ್ಕ ಹಲವು ಪರ್ವತ ಶಿಖರ, ಬೆಟ್ಟ-ಗುಡ್ಡಗಳು, ಕಾಫಿ ತೋಟಗಳು, ಜಲಪಾತಗಳು, ಧಾರ್ಮಿಕ ಸ್ಥಳಗಳು , ಸರೋವರಗಳು, ವನ್ಯಜೀವಿ ಅಭಯಾರಣ್ಯ ಪ್ರದೇಶ, ಬಲ್ಲಳರಾಯನ ದುರ್ಗಾ ಕೋಟೆ, ರೆಸಾರ್ಟ್‌ ಮುಂತಾದ ಸ್ಥಳಗಳು ಇಲ್ಲಿವೆ. ಕುಟುಂಬ -ಗೆಳೆಯರೊಂದಿಗೆ ಸಮಯ ಕಳೆಯಲು ಉತ್ತಮ ತಾಣಗಳಲ್ಲಿ ಇದು ಒಂದು

„ ಕಾವ್ಯಶ್ರೀ,

ಮಡಂತ್ಯಾರು

 

Advertisement

Udayavani is now on Telegram. Click here to join our channel and stay updated with the latest news.

Next