ಪ್ರಕೃತಿಯ ಮಡಿಲಿನಲ್ಲಿ ಕಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಚ್ಚ ಹಸುರಿನ ಸುಂದರ ತಾಣಗಳು ಸಹಜವಾಗಿಯೇ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಇದೇ ಕಾರಣಕ್ಕೆ ರಜಾದಿನಗಳಲ್ಲಿ ಬಹುತೇಕರು ಪ್ರಶಾಂತ ವಾತಾವರಣ, ಸುಂದರ ಪರಿಸರವನ್ನರಸಿ ಕೊಂಡು ಹೋಗುತ್ತಾರೆ. ಅದಕ್ಕೆ ಸರಿಯಾಗಿಯೇ ತಮ್ಮ ಪ್ರವಾಸದ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ನೀವು ಕೂಡ ಗದಗ ಕಡೆ ಹೋಗುವವರಿದ್ದರೆ ಅಲ್ಲೇ ಸಮೀಪ ಸುಂದರ ಬೆಟ್ಟವಿದೆ.
ಎಲ್ಲರನ್ನೂ ಸೆಳೆಯುವ ಅಪೂರ್ವ ಬೆಟ್ಟವಿದು. ಅದುವೇ ಕಪ್ಪತ ಗುಡ್ಡ. ಏಷ್ಯಾ ಖಂಡದಲ್ಲಿಯೇ ಶುದ್ಧವಾದ ಗಾಳಿಗೆ ಹೆಸರುವಾಸಿ. ಮುಂಗಾರು ಅವಧಿಯಲ್ಲಿ ಕಪ್ಪತಗುಡ್ಡ ಇನ್ನಷ್ಟು ಆಕರ್ಷಕವಾಗಿ ಕಾಣಲಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ವಾಯು ವಿಹಾರ ಮತ್ತು ಟ್ರೆಕ್ಕಿಂಗ್‌ಗೆ ಈ ಸ್ಥಳ ಹೇಳಿ ಮಾಡಿಸಿದಂತಿದೆ.
ಕ್ಷಣಕಾಲ ಆ ಗುಡ್ಡದಲ್ಲಿ ನಿಂತರೆ ಬೀಸುವ ಗಾಳಿಯಲ್ಲಿನ ವನಸ್ಪತಿಯ ಸುವಾಸನೆ ಮೂಗಿಗೆ ಬಡಿಯುತ್ತದೆ. ದೇವರೆ ರುಜು ಮಾಡಿದ, ಪ್ರಕೃತಿಯ ಹಚ್ಚಹಸುರ ಸೊಬಗಿನ ಸೆಳೆತದ ನಡುವೆ ಇನ್ನೇನು ಆಗಸಕ್ಕೆ ತಾಗಿಬಿಡುವೆ ಎನ್ನವಂತಿದೆ ಕಪ್ಪತಗುಡ್ಡದ ವೈಯ್ನಾರ. ಬಯಲು ಸೀಮೆಯ ಸಹ್ಯಾದ್ರಿ ಎಂದೇ ಕರೆಯಲ್ಪಡುವ ಕಪ್ಪತಗುಡ್ಡದಲ್ಲಿ ಬೀಸುವ ತಂಗಾಳಿ, ಚದುರುವ ಶ್ವೇತ ಮೋಡಗಳು ಸೂಜಿಗಲ್ಲಿನಂತಹ ಸೆಳೆತ ಹೊಂದಿವೆ. ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದಲ್ಲಿರುವ ಈ ಕಪ್ಪತಗುಡ್ಡ, ಗದಗ ತಾಲೂಕಿನ ಬಿಂಕದಕಟ್ಟದಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರು ತನಕ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 65 ಕಿ. ಮೀ. ಪ್ರದೇಶದಲ್ಲಿ ಹರಡಿಕೊಂಡಿದೆ.
ಕಪ್ಪತ ಗುಡ್ಡದ ನೈಸರ್ಗಿಕ ಸಿರಿ ಸೌಂದರ್ಯ ಹೃನ್ಮನಗಳಿಗೆ ತಂಪೆರೆಯುತ್ತದೆ. ಬೇಸಗೆಯಲ್ಲಿ ದಣಿವಾರಿಸಿಕೊಳ್ಳಲು, ಮಳೆಗಾಲದಲ್ಲಿ ವರ್ಷಧಾರೆಯ ಸೊಬಗು ಕಣ್ತುಂಬಿಕೊಳ್ಳಲು, ಚಳಿಗಾಲದಲ್ಲಿ ಸೃಷ್ಟಿಯ ವಿಸ್ಮಯ ನೋಡಲು ಮಡಿಕೇರಿ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನಬೆಟ್ಟ, ನಂದಿ ಬೆಟ್ಟಕ್ಕೆ ಕಪ್ಪತಗುಡ್ಡ ಯಾವ ರೀತಿಯಲ್ಲಿಯೂ ಕಡಿಮೆ ಇಲ್ಲ.
ಕಪ್ಪತ ಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಅತೀ ಹೆಚ್ಚು ಆಯುರ್ವೇದದ ಗಿಡಗಳನ್ನು ಹೊಂದಿರುವ ಕಾರಣಕ್ಕಾಗಿ ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಸಾಕು ಯಾವ ದವಾಖಾನೆನೂ ಬೇಡ ಎನ್ನಬಹುದು. ಎಪ್ಪತ್ತು ಗಿರಿಗಳಿಗಿಂತ ಕಪ್ಪತಗಿರಿ ಲೇಸು ಎಂಬುದು ಸ್ಕಂದ ಪುರಾಣದಲ್ಲಿನ ಉಲ್ಲೇಖ. ಎಪ್ಪತ್ತು ಗಿರಿಗಳಲ್ಲಿ ಸಿಗದ ಔಷಧೀಯ ಗಿಡಮೂಲಿಕೆಗಳು ಕಪ್ಪತಗುಡ್ಡ ಒಂದರಲ್ಲೇ ಸಿಗುವ ಕಾರಣಕ್ಕೆ ಈ ಮಾತು ಬಂತೆಂದು ಹಿರಿಯರು ಹೇಳುತ್ತಾರೆ. ಪುರಾಣಗಳಲ್ಲಿಯೂ ಕಪ್ಪತಗುಡ್ಡವನ್ನು ಸಾಧು ಸಂತರು ತಮ್ಮ ತಪೋಭೂಮಿಯನ್ನಾಗಿಸಿಕೊಂಡಿದ್ದರು ಎಂಬ ಉಲ್ಲೇಖಗಳಿವೆ.
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಖ್ಯಾತವಾಗಿರುವ ಕಪ್ಪತ ಗುಡ್ಡ, ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಈ ಪ್ರದೇಶವನ್ನು ಇತ್ತೀಚೆಗೆ ಕರ್ನಾಟಕ ಸರಕಾರವು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದೆ.
ಒಟ್ಟು 17,872 ಹೆಕ್ಟೇರ್ ವಿಸ್ತೀರ್ಣದಲ್ಲಿ ಹರಡಿರುವ ಈ ಕಪ್ಪತಗುಡ್ಡ ಅರಣ್ಯ ಪ್ರದೇಶವು ಗದಗ ತಾಲೂಕಿನಲ್ಲಿ 401.811 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 15,433.673 ಹೆಕ್ಟೇರ್ ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2,016 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಹಬ್ಬಿಕೊಂಡಿದೆ. ಇದರಲ್ಲಿ 89.92 ಹೆಕ್ಟೇರ್ ಪ್ರದೇಶದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆಗೆಂದೇ ಮೀಸಲಿಡಲಾಗಿದೆ. ಈ ಪ್ರದೇಶವು ನೂರಾರು ವರ್ಷಗಳಿಂದ ಔಷಧೀಯ ಸಸ್ಯಗಳ ವಾಸಸ್ಥಾನವಾಗಿದೆ.
ಈ ಕಾಡಿನಲ್ಲಿ ಬೆಟ್ಟದ ತುದಿಯಲ್ಲಿ ಸುಮಾರು 250 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನ್ನ ಜ್ಞಾನ ದಾಸೋಹ ಮಠ ಅಥವಾ ಆಶ್ರಮವಿದ್ದು, ಈ ಮಠವು ಕಪ್ಪತಗುಡ್ಡದ ಹತ್ತಿರದ ಡೋಣಿ ನಗರದಿಂದ 3 ಕಿ.ಮೀ. ದೂರದಲ್ಲಿ ಇದೆ.
ಶುಲ್ಕಗಳ ವಿವರ
ಕಪ್ಪತ ಹಿಲ್ಸ್‌ಗೆ ಬೆಳಗ್ಗೆ 6ರಿಂದ ಸಂಜೆ 5 ಗಂಟೆಯ ತನಕ ಪ್ರವಾಸಿಗರಿಗೆ ಹೋಗಲು ಅವಕಾಶವಿದೆ. ಇಲ್ಲಿ ಪ್ರವೇಶ ಶುಲ್ಕವಿದ್ದು, ವಯಸ್ಕರಿಗೆ 25 ರೂ., ಮಕ್ಕಳಿಗೆ (7ರಿಂದ 14 ವರ್ಷ) 10 ರೂ. ಪಡೆಯಲಾಗುತ್ತದೆ. ಅದೇ ರೀತಿ ಫೋಟೋ-ವೀಡಿಯೋ ಚಿತ್ರೀಕರಣಕ್ಕೂ ಶುಲ್ಕವಿದ್ದು, 200 ಎಂ.ಎಂ.ಗಿಂತ ಕಡಿಮೆ ಲೆನ್ಸ್‌ನ ಕೆಮರಾಗೆ 100 ರೂ., 200 ಎಂ.ಎಂ.ಗಿಂತ ಹೆಚ್ಚಿನ
ಲೆನ್ಸ್‌ನ ಕೆಮರಾಗೆ 200 ರೂ. ಪಡೆಯಲಾಗುತ್ತದೆ. ವೀಡಿಯೋ ಚಿತ್ರೀಕರಣಕ್ಕೆ 500 ರೂ. ಶುಲ್ಕದೊಂದಿಗೆ ಮುಂಚಿತವಾಗಿ ಪರವಾನಿಗೆ ಪಡೆಯಬೇಕಾಗುತ್ತದೆ. ಕಪ್ಪತ ಗುಡ್ಡಕ್ಕೆ ಆಗಮಿಸುವ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ 50 ರೂ. ಶುಲ್ಕ, ಲಘು ವಾಹನ (ಕಾರು, ಜೀಪ್)ಕ್ಕೆ 100 ರೂ. ಶುಲ್ಕವಿದೆ.
ಜುಲೈ ಅಂತ್ಯದಲ್ಲಿ ಭಾರೀ ಮಳೆಯಾಗುವುದರಿಂದ ಕಪ್ಪತಗುಡ್ಡದಲ್ಲಿ ಮಣ್ಣು ಕುಸಿತ ಸಂಭವಿಸುವ ಸನ್ನಿವೇಶಗಳಿರುತ್ತವೆ, ಅದ್ದರಿಂದ ಈ ಅವಧಿಯಲ್ಲಿ ಡೋಣಿ ಮಾರ್ಗವಾಗಿ ಕಪ್ಪತಗುಡ್ಡದ ಗಾಳಿಗುಂಡಿಗೆ ಹೋಗುವ ರಸ್ತೆಯನ್ನು ಸಾರ್ವಜನಿಕರಿಗೆ ಮುಚ್ಚಲಾಗುತ್ತದೆ. ಇಲ್ಲಿಗೆ ಚಾರಣ ಕೈಗೊಳ್ಳುವ ಮುನ್ನ ಸ್ಥಳೀಯರಿಂದ ಮಾಹಿತಿ ಪಡೆದು ಸಾಗುವುದು ಉತ್ತಮ.
ಸಂತೋಷ ಕುಮಾರ ಹೆಚ್. ಕೆ.
ಉಪನ್ಯಾಸಕ, ಕೊಪ್ಪಳ ವಿವಿ