Advertisement

ಪ್ರವಾಸೋದ್ಯಮಕ್ಕೆ ಪೂರಕ ಗೆಜೆಟ್‌

03:16 PM Jul 10, 2022 | Team Udayavani |

ಗಂಗಾವತಿ: ಹಂಪಿ-ಆನೆಗೊಂದಿ ಭಾಗದ ಪ್ರವಾಸೋದ್ಯಮಕ್ಕೆ ಪೂರಕವಾಗಿ ರಾಜ್ಯ ಸರಕಾರ ಇತ್ತೀಚಿಗೆ ಗೆಜೆಟ್‌(ರಾಜ್ಯಪತ್ರ) ಪ್ರಕಟಿಸಿದ್ದು, ಹಂಪಿ ಅಭಿವೃದ್ಧಿ ಪ್ರಾಧಿಕಾರದ 29 ಹಳ್ಳಿಗಳ ಜನರ ಬಹುದಿನಗಳ ಬೇಡಿಕೆ ಈಡೇರುವ ಹಂತದಲ್ಲಿದ್ದು, ಇದರಿಂದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ಸಿಗುವ ಭರವಸೆಗಳಿವೆ.

Advertisement

2008ರಲ್ಲಿ ಹವಾಮಾದಿಂದ ಮಹಾಯೋಜನೆ ಘೋಷಣೆಯಾಗಿ ಹಂಪಿ-ಆನೆಗೊಂದಿ ಭಾಗದ ಕೃಷಿ ಭೂಮಿಯಲ್ಲಿ ಮತ್ತು ಗ್ರಾಮಗಳ ಹತ್ತಿರ ಯಾವುದೇ ವಾಣಿಜ್ಯ ಚಟುವಟಿಕೆ ಮಾಡಲು ಅವಕಾಶಗಳಿರಲಿಲ್ಲ. ಇದರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಊಟ, ವಸತಿ, ಮೂಲಸೌಕರ್ಯ ಕಲ್ಪಿಸಲು ಖಾಸಗಿ ಅವರಿಗೆ ಅವಕಾಶಗಳಿರಲಿಲ್ಲ. ಹೊಟೇಲ್‌, ರೆಸಾರ್ಟ್‌ ಏನೇ ಮಾಡಿದರೂ ಅದು ಅಕ್ರಮವಾಗಿ ಮಾಡಬೇಕಿತ್ತು. ಆದರೂ ಸ್ಥಳೀಯರು ಸಣ್ಣಪುಟ್ಟ ಗುಡಿಸಲು ಹಾಕಿಕೊಂಡು ಪ್ರವಾಸಿಗರಿಗೆ ಊಟ, ವಸತಿ ಕಲ್ಪಿಸುತ್ತಿದ್ದರು. ಇದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಹವಾಮಾ ಮತ್ತು ಜಿಲ್ಲಾಡಳಿತ ಕಳೆದ ಡಿಸೆಂಬರ್‌ನಲ್ಲಿ ಎಲ್ಲ ಹೊಟೇಲ್‌, ಹೋಮ್‌ ಸ್ಟೇ ಸೇರಿ ಸಣ್ಣಪುಟ್ಟ ಅಂಗಡಿಗಳಿಗೆ ಬೀಗ ಜಡಿದು ಸೀಜ್‌ ಮಾಡಿತ್ತು. ಇದರಿಂದ ಕಳೆದ 7-8 ತಿಂಗಳಿಂದ ಆನೆಗೊಂದಿ ಭಾಗದಲ್ಲಿ ವ್ಯಾಪಾರ- ವಹಿವಾಟು ಸ್ಥಗಿತಗೊಂಡು ಹೊಟೇಲ್‌ ಮಾಲೀಕರು ಸೇರಿ ಕಾರ್ಮಿಕರಿಗೆ ತೊಂದರೆಯಾಗಿತ್ತು.

ಸುಮಾರು 20 ವರ್ಷಗಳ ಹಳೆಯ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತಂದು ಪರಿಸರಕ್ಕೂ ಹಾನಿಯಾಗದಂತೆ ವಾಣಿಜ್ಯ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲು ಹವಾಮಾ ನಿಯಮಗಳನ್ನು ಅನುಷ್ಠಾನ ಮಾಡುವಂತೆ ಆನೆಗೊಂದಿ ಭಾಗದ 15 ಹಳ್ಳಿಗಳ ಜನರು ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ನಗರಾಭಿವೃದ್ಧಿ, ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪದೇ ಪದೆ ಮನವಿ ಮಾಡಿದ್ದರಿಂದ ಸರಕಾರ ಇದೀಗ ಹಲವು ಗೆಜೆಟ್‌ (ರಾಜ್ಯಪತ್ರ) ಪ್ರಕಟಿಸಿದ್ದು, ಹವಾಮಾ ವ್ಯಾಪ್ತಿಯ ಹಂಪಿ- ಆನೆಗೊಂದಿ ಭಾಗದಲ್ಲಿ ಕೃಷಿ ಭೂಮಿಯಲ್ಲಿ ಶೇ.5 ಭೂಮಿಯನ್ನು ಕಮರ್ಷಿಯಲ್‌ ಆಗಿ ಪರಿವರ್ತಿಸಿ ಫಾರ್ಮ್ ಸ್ಟೇ, ಗ್ರಾಮಗಳ ಮನೆಗಳಲ್ಲಿ ಹೋಂ ಸ್ಟೇಗಳಿಗೆ ಅವಕಾಶ ಕಲ್ಪಿಸಲಾಗಿದೆ.

ನದಿಯಿಂದ 100 ಮೀಟರ್‌ ಮತ್ತು ಸ್ಮಾರಕಗಳಿರದ ನಿಷೇಧಿತವಲ್ಲದ ಪ್ರದೇಶದಿಂದ 200 ಮೀಟರ್‌ ಒಟ್ಟು 300 ಮೀಟರ್‌ ಅಂತರದಲ್ಲಿ ವಾಣಿಜ್ಯ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಪ್ರವಾಸೋದ್ಯಮ ಸಮಿತಿಗೆ ಹೆಚ್ಚಿನ ಅಧಿಕಾರ ಕಲ್ಪಿಸಲಾಗಿದೆ. ಜತೆಗೆ ಯಲ್ಲೋ, ಬಪ್ಪರ್‌, ಪೆರಿಪರಲ್‌ ಝೋನ್‌ಗಳಲ್ಲಿ ಈ ಮೊದಲಿದ್ದ ನಿಯಮಾವಳಿಗಳಿಗೆ ಪ್ರವಾಸೋದ್ಯಮ ಪ್ರೋತ್ಸಾಹಿಸಲು ಕೆಲ ತಿದ್ದುಪಡಿ ಮಾಡಲಾಗಿದ್ದು, ಭೂಪರಿವರ್ತನೆ ಮಾಡುವ ನಿಯಮಗಳನ್ನು ಸರಳಗೊಳಿಸಲಾಗಿದೆ. ಸರಕಾರದ ಮಾನ್ಯತೆ ಪಡೆದ ಪ್ರಕರಣಗಳಿಗೆ ಸರಕಾರದಿಂದ ಎನ್‌ಒಸಿ ಬದಲು ಜಿಲ್ಲಾಧಿಕಾರಿ ಪ್ರವಾಸೋದ್ಯಮ ಕಮಿಟಿಯಿಂದ ಪರವಾನಗಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಹಂಪಿ ಅಭಿವೃದ್ಧಿ ಪ್ರಾ ಧಿಕಾರದ ನೂತನ ಮಹಾಯೋಜನೆ(ಮಾಸ್ಟರ್‌ ಪ್ಲಾನ್‌) ಘೋಷಣೆಗೂ ಮುನ್ನ ಸರಕಾರ ಗೆಜೆಟ್‌ನಲ್ಲಿ ಹವಾಮಾ ವ್ಯಾಪ್ತಿಯ 29 ಹಳ್ಳಿಗಳಲ್ಲಿ ಪ್ರವಾಸೋದ್ಯಮ ಮತ್ತು ಭೂ ಪರಿವರ್ತನೆಗೆ ಅನುಕೂಲವಾಗುವ ನಿಯಮಗಳನ್ನು ಪ್ರಕಟಿಸಿದ್ದು, 30ದಿನಗಳೊಳಗೆ ಆಕ್ಷೇಪ ಆಹ್ವಾನಿಸಿದೆ. ಕೃಷಿ ಭೂಮಿಯಲ್ಲಿ ಶೇ.5 ಮಾತ್ರ ಕಮರ್ಷಿಯಲ್‌ ಆಗಿ ಬಳಸಲು ಅವಕಾಶ ನೀಡಿದ್ದಕ್ಕೆ ಬಹುತೇಕರು ಆಕ್ಷೇಪವೆತ್ತಿದ್ದು ಇದನ್ನು ಹೆಚ್ಚು ಮಾಡುವಂತೆ ಮನವಿ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಪ್ರವಾಸಿಗರಿಗೆ ಊಟ ವಸತಿ ಕೊಡಲು ಇನ್ನಷ್ಟು ವಿಸ್ತೀರ್ಣ ಸ್ಥಳಾವಕಾಶ ಮತ್ತು ಹೋಮ್‌ ಸ್ಟೇ ಕೆಲ ನಿಯಮಗಳಿಗೆ ತಿದ್ದುಪಡಿ ಮಾಡಲು ಅವಕಾಶ ಕೋರಲಾಗಿದೆ.

Advertisement

ಈಗಾಗಲೇ ರಾಜ್ಯ ಸರ್ಕಾರ ಹಂಪಿ ಆನೆಗೊಂದಿ ಭಾಗದ 29 ಗ್ರಾಮಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಕುರಿತು ಗೆಜೆಟ್‌ನಲ್ಲಿ ನಿಯಮಾವಳಿಗಳನ್ನು ಕೆಲ ಬದಲಾವಣೆಗಳೊಂದಿಗೆ ಪ್ರಕಟಿಸಿದೆ. ಆದಾಗ್ಯೂ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವ ಮೂಲಕ ಇನ್ನಷ್ಟು ನಿಯಮಗಳ ಬಗ್ಗೆ ಸರಕಾರದ ಗಮನಕ್ಕೆ ತರಬೇಕಿದೆ. ಸಕ್ಷಮ ಪ್ರಾಧಿಕಾರ ಈ ಕುರಿತು ಅಗತ್ಯ ನಿಯಮಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. -ವಿಕಾಸ್‌ ಕಿಶೋರ್‌ ಸುರಳ್ಕರ್‌, ಜಿಲ್ಲಾಧಿಕಾರಿ, ಉಪಾಧ್ಯಕ್ಷರು ಹಂಪಿ ಅಭಿವೃದ್ಧಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next