Advertisement

UV Fusion: ಅಚ್ಚರಿಯ ಆಗರ ಇಕ್ಕೇರಿಯ ಅಘೋರೇಶ್ವರ

12:48 PM Sep 25, 2023 | Team Udayavani |

ಚರಿತ್ರೆಯ ಪುಟಗಳು ತೆರೆದಷ್ಟೂ ಮುಗಿಯದ ಅಕ್ಷಯ ಗಡಿಗೆ. ಅಂತಹ ಒಂದು ರಮ್ಯ ತಾಣ ಸಾಗರದ ಇಕ್ಕೇರಿಯಲ್ಲಿರುವ ಅಘೋರೇಶ್ವರನ ಸನ್ನಿಧಿ. ಪತ್ನಿ ಅಖೀಲಾಂಡೇಶ್ವರಿಯೊಂದಿಗೆ ನೆಲೆ ನಿಂತಿರುವ ಅಘೋರೇಶ್ವರನ ದರ್ಶನ ಪ್ರತಿಯೊಬ್ಬರ ಬದುಕಿನಲ್ಲಿಯೂ ಧನ್ಯತೆಯನ್ನು ಮೂಡಿಸುತ್ತದೆ.

Advertisement

ವಿಜಯನಗರದ ಅರಸರ ಕಾಲದಲ್ಲಿ ಕೆಳದಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಇಕ್ಕೇರಿಯು ಶಕ್ತಿಶಾಲಿ ಸ್ವತಂತ್ರ ರಾಜ್ಯವಾಗಿ ಮೆರೆದಿತ್ತು. 1499ರಿಂದ 1544ರ ವರೆಗೆ ಆಳ್ವಿಕೆ ನಡೆಸಿದ್ದ ಚೌಡಪ್ಪ ನಾಯಕರ ಕಾಲದಲ್ಲಿ ಇಕ್ಕೇರಿ ಕೆಳದಿ ಅರಸರ ರಾಜಧಾನಿಯೂ ಆಗಿತ್ತು.

ಹೈದರಾಲಿಯ ಆಕ್ರಮಣವಾಗುವವರೆಗೆ ಅಂದರೆ ಕ್ರಿ. ಶ. 1499ರಿಂದ 1763ರ ವರೆಗೆ ಮಲೆನಾಡು ಹಾಗೂ ಕರಾವಳಿ ಸೀಮೆಯಲ್ಲಿ ಏಳುಬೀಳುಗಳ ನಡುವೆಯೂ ಪ್ರಾಬಲ್ಯ ಸಾಧಿಸಿದ್ದವರು ಕೆಳದಿಯ ಅರಸರೆಂಬುದು ನಿರ್ವಿವಾದದ ಅಂಶ. ಆ ಕಾಲದಲ್ಲಿ ಅವರು ಸಾಹಿತ್ಯ, ಕಲೆ, ವಾಸ್ತುಶಿಲ್ಪ ಹಾಗೂ ಸಂಗೀತಕ್ಕೆ ನೀಡಿದ ಕೊಡುಗೆಗಳು ಮಹತ್ತರವಾದುದು. ವಾಸ್ತುಶಿಲ್ಪಗಳಿಗೆ ಅವರು ನೀಡಿದ ಕೊಡುಗೆಗಳಲ್ಲಿ ಪ್ರಧಾನವಾಗಿ ನಮಗೆ ಕಾಣ ಸಿಗುವುದು ಇಕ್ಕೇರಿ ಮತ್ತು ಕೆಳದಿಯಲ್ಲಿ ನಿರ್ಮಿಸಲಾದ ಅವಳಿ ಶಿವ ಕ್ಷೇತ್ರಗಳೆನಿಸಿದ ಅಘೋರೇಶ್ವರ ಮತ್ತು ರಾಮೇಶ್ವರ ದೇಗುಲಗಳು. ಈ ಪೈಕಿ ಇಕ್ಕೇರಿಯ ಅಘೋರೇಶ್ವರ ದೇವಾಲಯವನ್ನು ನಾವು ಸಂದರ್ಶಿಸಿದೆವು.

ಶಿವ ಶಿವೆಯರು ಜತೆಯಾಗಿ ನೆಲೆ ನಿಂತಿರುವ ಇಕ್ಕೇರಿಯ ಈ ದೇಗುಲ ಕೌತುಕಗಳ ಕಣಜವೆನಿಸಿದರೆ ಅತಿಶಯವೇನಲ್ಲ. ಸೂಕ್ಷ್ಮ ವಿಚಾರಗಳನ್ನಿಟ್ಟುಕೊಂಡು ಅತ್ಯುತ್ತಮ ವಿವರಗಳೊಂದಿಗೆ ವಿಶಿಷ್ಟವಾದದ್ದನ್ನು ನಿರ್ಮಿಸುವ ಕೆಳದಿಯ ಅರಸರ ತಲ್ಲೀನತೆ ಇಲ್ಲಿ ಕಾಣ ಸಿಗುತ್ತದೆ.

ಸ್ಥಳೀಯರ ಪ್ರಕಾರ ಅಘೋರೇಶ್ವರ ಮತ್ತು ಅಖೀಲಾಂಡೇಶ್ವರಿಯ ವಿಗ್ರಹಗಳು ಕಾಡಿನಲ್ಲಿ ಕಂಡುಬಂದ ಉದ್ಭವ ಲಿಂಗಗಳು. ಚೌಡಪ್ಪ ನಾಯಕರು ತನ್ನ ಆಳ್ವಿಕೆಯ ಕಾಲದಲ್ಲಿ ಈ ಉದ್ಭವ ಲಿಂಗಗಳಿಗೆ ಕದಂಬ, ಹೊಯ್ಸಳ, ವಿಜಯನಗರ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪಗಳ ಸಮ್ಮಿಶ್ರಣದಲ್ಲಿ ಆಲಯ ನಿರ್ಮಿಸಿ ಪ್ರತಿಷ್ಠಾಪಿಸಿದರು ಎಂಬುದಕ್ಕೆ ಅಲ್ಲಿಯೇ ಆಧಾರ ದೊರೆಯುತ್ತದೆ.

Advertisement

ದೇಗುಲದ ಮುಖಮಂಟಪಕ್ಕೆ ಮೂರು ಕಟಾಂಬಿನ ಸಹಿತ ಮೆಟ್ಟಿಲುಗಳಿಂದ ಕೂಡಿದ ಪ್ರವೇಶ ದ್ವಾರವಿದ್ದು ಉತ್ತರ ಭಾಗದ ಪ್ರವೇಶ ದ್ವಾರದ ಎರಡೂ ಕಡೆಗಳಲ್ಲಿ ಸ್ಥಾಪಿತರಾದ ಸರ್ವಾಭರಣಗಳಿಂದ ಅಲಂಕೃತ ಗಜರಾಜ ದ್ವಯರು ಅಭ್ಯಾಗತರನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾರೆ. ಭಿತ್ತಿಗಳಲ್ಲಿ ಸುಮಾರು ಇಪ್ಪತೈದು ಜಾಲಂಧ್ರ ಕಿಟಕಿಗಳಿದ್ದು ಅವುಗಳಿಗೆ ಅಲಂಕರಿಸಲ್ಪಟ್ಟ ತೋರಣಗಳ ಸಹಿತ ಬಹು ಸಂಖ್ಯೆಯಲ್ಲಿ ಶಿಲ್ಪಗಳನ್ನು ಕೆತ್ತಿಸಲಾಗಿದೆ.

ಅಲ್ಲಿಂದ ಮುಂದುವರಿದರೆ ನಂದಿಮಂಟಪದಲ್ಲಿ ಶಿಸ್ತಿನ ಸಿಪಾಯಿಯಂತೆ ಕುಳಿತಿರುವ ಬೃಹತ್‌ ನಂದೀಶನ ವಿಗ್ರಹವಿದೆ. ಹೊಳೆಯುವ ಕಪ್ಪು ಗ್ರಾನೈಟ್‌ ಮಾದರಿಯ ಶಿಲೆಯಿಂದ ನಿರ್ಮಿತನಾದ ನಂದಿ ದಕ್ಷಿಣಾಭಿಮುಖವಾಗಿ ಮಂಡಿಸಿ¨ªಾನೆ. ನಂದಿ ಮಂಟಪದ ದಕ್ಷಿಣ ದಿಕ್ಕಿಗೆ ಯಾಳಿ ಕಟಾಂಜನಗಳ ದೊಡ್ಡ ದೊಡ್ಡ ಮೆಟ್ಟಿಲುಗಳಿವೆ. ಈ ಮಂಟಪಕ್ಕೆ ಸಿಂಹಾಧಾರಿತ ಸ್ತಂಭಗಳು ನೀಡುವ ಸೊಬಗು ವರ್ಣಿಸಲಸದಳ.

ಅಘೋರೇಶ್ವರ, ಅಖೀಲಾಂಡೇಶ್ವರಿಯರ ದೇವಾಲಯವು ಹದಿನಾರನೇ ಶತಮಾನದಲ್ಲಿ ರಚಿಸಲ್ಪಟ್ಟ ಕೆಳದಿ ನಾಯಕ ವಾಸ್ತುಶಿಲ್ಪದ ಸೊಬಗಿನ ಖನಿಯೆನಿಸಿದ್ದು ಕಣಶಿಲೆಯಲ್ಲಿ ದಕ್ಷಿಣಾಭಿಮುಖವಾಗಿ ತಲೆಯೆತ್ತಿ ನಿಂತಿದೆ. ತಲ ವಿನ್ಯಾಸದಲ್ಲಿ ಗರ್ಭಗೃಹ, ಅರ್ಧಮಂಟಪ ಮತ್ತು ದೊಡ್ಡದಾದ ಮುಖ ಮಂಟಪಗಳಿಂದ ಶೋಭಿಸುವ ಈ ದೇಗುಲಕ್ಕೆ ತನ್ನದೇ ಆದ ನಂದಿ ಮಂಟಪವಿದೆ. ಪಶ್ಚಿಮದಲ್ಲಿರುವ ಅಖೀಲಾಂಡೇಶ್ವರಿಯ ದೇವಾಲಯದ ವಿನ್ಯಾಸವೆಲ್ಲವೂ ಅಘೋರೇಶ್ವರನ ಗುಡಿಯಂತೆಯೇ ಆದರೂ ಇದಕ್ಕಿಂತ ಚಿಕ್ಕದಾಗಿ ನಿರ್ಮಿಸಲಾಗಿದೆ.

ಗುಡಿಯ ಎದುರಿನ ನೆಲಹಾಸಿನಲ್ಲಿ ಕೆಳದಿಯ ಮೂವರು ಅರಸರ ಚಿತ್ರವಿದೆ. ಗರ್ಭಗೃಹದೊಳಗೆ ದೊಡ್ಡದೊಂದು ವೇದಿಕೆಯಿದ್ದು ಹಿಂದೆ ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಬಗ್ಗೆ ಉÇÉೇಖವಿದೆ. ಗರ್ಭಗೃಹದ ಭಿತ್ತಿಯ 3/4ರಷ್ಟು ಭಾಗವನ್ನು ಮೂವತ್ತೆರಡು ದೇವಿಯರ ವಿಗ್ರಹಗಳ ಕೆತ್ತನೆಗಳಿಂದ ಅಲಂಕರಿಸಿವೆ. ಅಷ್ಟೇ ಅಲ್ಲದೆ ಮೂವತ್ತೆರಡು ಬಾಹುಗಳಿಂದ ಕಂಗೊಳಿಸುವ ಲೋಹದ ಅಘೋರೇಶ್ವರನ ಪ್ರತಿಮೆ ಕಣ್ಮನ ಸೆಳೆಯುವಂತಿದೆ.

ಸುಕನಾಸಿಯಲ್ಲಿ ಒಂದು ಬಿಳಿಕಲ್ಲಿನ ಚಿಕ್ಕ ಅಪಾರದರ್ಶಕ ನಂದಿ ವಿಗ್ರಹವಿದೆ. ಅರ್ಧಮಂಟಪದ ಪ್ರವೇಶ ದ್ವಾರದ ಎರಡೂ ಕಡೆಗಳಲ್ಲಿಯೂ ದೇವ ಕೋಷ್ಠಕಗಳಿವೆ. ಅವುಗಳಲ್ಲಿ ಬಲಪಾರ್ಶ್ವವನ್ನು ಗಣಪತಿ ಮತ್ತು ಕಾರ್ತಿಕೇಯರು ಅಲಂಕರಿಸಿದರೆ ಎಡಪಾರ್ಶ್ವದಲ್ಲಿ ಮಹಿಷಾಸುರ ಮರ್ದಿನಿ ಮತ್ತು ಭೈರವ ಮೂರ್ತಿ ವಿರಾಜಮಾನರಾಗಿದ್ದಾರೆ. ಗರ್ಭಗೃಹವು ದ್ರಾವಿಡ ಶೈಲಿಯ ಬ್ರಹತ್ತಾದ ಶಿಖರವನ್ನು ಹೊಂದಿದ್ದು ಗರ್ಭಗೃಹದ ಗೋಡೆಯು ಗೂಡಸ್ತಂಭಗಳನ್ನಾದರಿಸಿದ ಕೂಟಗಳಿಂದ ಅಲಂಕರಿಸಲ್ಪಟ್ಟಿವೆ.

ವರ್ಷದ ಯಾವುದೇ ಸಮಯದÇÉಾದರೂ ದರ್ಶಿಸಲು ಸೂಕ್ತವಾದ ವಾತಾವರಣವೇ ಇಲ್ಲಿದ್ದರೂ ಸೆಪ್ಟಂಬರ್‌ನಿಂದ ಫೆಬ್ರವರಿವರೆಗಿನ ವಾತಾವರಣ ಹೆಚ್ಚು ಪ್ರಶಸ್ತ. ಸಾಗರದಿಂದ ಕೇವಲ ಐದು ಕಿ.ಮೀ. ನಷ್ಟು ಅಂತರದಲ್ಲಿರುವ ಈ ದೇಗುಲಕ್ಕೆ ತಲುಪಿಕೊಳ್ಳಲು ಹೆಚ್ಚೇನೂ ಕಷ್ಟ ಪಡಬೇಕಾಗಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು, ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ಸುಗಳು ಹಾಗೆಯೇ ಟ್ಯಾಕ್ಸಿಗಳೂ ಕೂಡ ಲಭ್ಯವಿದೆ. ಕನಿಷ್ಠ ಪಕ್ಷ ನಿಮ್ಮ ಪ್ರವಾಸದಲ್ಲಿ ಒಂದು ಗಂಟೆಯ ಅವಧಿಯಷ್ಟನ್ನಾದರೂ ನಿಗದಿಪಡಿಸಿಕೊಂಡು ಇಲ್ಲಿಗೆ ಭೇಟಿ ನೀಡಿದರೆ ಒಳ್ಳೆಯದು.  ಸಭ್ಯವಾದ ನಡವಳಿಕೆ ಹೊಂದಿದ ಶಿಸ್ತಿನ ಧಿರಿಸು ಧರಿಸಿದ ಎಲ್ಲರಿಗೂ ಬೆಳಗ್ಗೆ 6 ಗಂಟೆಯಿಂದ  ರಾತ್ರಿ 8ರ ತನಕ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕವಿಲ್ಲದೆ ಯಾವುದೇ ಕಾಲದಲ್ಲಾದರೂ ಇಲ್ಲಿಗೆ ಭೇಟಿ ನೀಡಬಹುದು.

-ಗೌತಮ್‌ ತಗ್ಗರ್ಸೆ

Advertisement

Udayavani is now on Telegram. Click here to join our channel and stay updated with the latest news.

Next