ಕೋಲಾರ: ಸಾಮಾಜಿಕ ನ್ಯಾಯ, ಹಾಗೂ ಬದ್ಧತೆಯಿಂದ ಏಳು ಬಾರಿ ಗೆದ್ದು ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಅವರು 8ನೇ ಬಾರಿಯೂ ಲೋಕಸಭಾ ಚುನಾವಾಣೆಯಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ಹಿಂದೆ ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ಕೆ.ಎಚ್.ಮುನಿಯಪ್ಪ ಈಗಾಗಲೇ ಮತದಾರರ ಮನದಾಳದಲ್ಲಿದ್ದಾರೆ. ಲೋಕಸಭಾದ 8ಕ್ಷೇತ್ರದಲ್ಲಿ 6 ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದು ಮತ್ತು ಮೈತ್ರಿ ಸರ್ಕಾರ ಇರುವುದರಿಂದ ಜೆಡಿಎಸ್-ಕಾಂಗ್ರೆಸ್ ಬೆಂಬಲ ನೀಡುವುದರಿಂದ ಗೆಲವು ಕಟ್ಟಿಟ್ಟಬುತ್ತಿ ಎಂದು ತಿಳಿಸಿದರು.
ಸ್ಪೀಕರ್ ರಮೇಶ್‌ಕುಮಾರ್ ಸೇರಿ ಯಾವುದೇ ಶಾಸಕರು ಸಂಸದ ಕೆ.ಎಚ್.ಮುನಿಯಪ್ಪ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಚುನಾವಣೆಗೆ ಮುನ್ನ ಅವರೆಲ್ಲರೂ ಪ್ರವಾಸ ತೆರಳಿದ್ದಾರೆ. ಚುನಾವಣೆ ವೇಳೆ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಮುನಿಯಪ್ಪರನ್ನು ಗೆಲ್ಲಿಸಲು ಶ್ರಮಿಸಲಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುವುದರಿಂದ ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕೆಲವು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮೋಡ ಮುಸುಕಿದ ವಾತಾವರಣ ಇದೆ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಸಾದ್‌ಬಾಬು, ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ಅವರೇ ನಿಲ್ಲುತ್ತಾರೆಂದರು. ಕಾಂಗ್ರೆಸ್ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ಬುಸನಹಳ್ಳಿ ಆಂಜಿನಪ್ಪ, ರೈತರ ಹಿತದೃಷ್ಟಿಯಿಂದ ಕಾಂಗ್ರೆಸ್ ಗೆದ್ದು ರಾಹುಲ್ ಗಾಂಧಿ ಕೈ ಬಲಪಡಿಸುವುದಾಗಿ ಹೇಳಿದರು.
ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ನಗರಸಭೆ ಮಾಜಿ ಸದಸ್ಯ ಲಾಲ್ ಬಹುದ್ದೂರ್ ಶಾಸ್ತ್ರಿ, ಕಾಂಗ್ರೆಸ್ ಕಿಸಾನ್ ಮೋರ್ಚಾ ತಾಲೂಕು ಅಧ್ಯಕ್ಷ ನಾಗರಾಜ್, ಯುವ ಕಾಂಗ್ರೆಸ್ ಕಾರ್ಯದರ್ಶಿ ರಘು ಇದ್ದರು.