ಬೆಂಗಳೂರು: ಪ್ರಿಯಕರನ ಜತೆ ಸೇರಿ ತನ್ನ ಮೂರೂವರೆ ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಪ್ರಕರಣ ಸಂಬಂಧ ಮಗುವಿನ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೀರಭದ್ರನಗರ ನಿವಾಸಿ ಶಾರೀನ್ ಮತ್ತು ಆಕೆಯ ಪ್ರಿಯಕರ ದಿನೇಶ್ ಬಂಧಿತರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಾಗರತ್ನ ಹಾಗೂ ರಾಜೇಶ್ವರಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪತಿಯಿಂದ ವಿಚ್ಚೇಧನ ಪಡೆದು ಶಾರೀನ್ ತನ್ನ ಮೂರೂವರೆ ವರ್ಷದ ಗಂಡು ಮಗುವಿನ ಜತೆ ವೀರಭದ್ರ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಈಕೆಗೆ ದಿನೇಶ್ ಎಂಬ ಪ್ರಿಯಕರ ಇದ್ದಾನೆ. ಈಕೆ ಮಗುವನ್ನು ಮನೆಯಲ್ಲಿ ಒಂಟಿಯಾಗಿ ಕೂಡಿ ಹಾಕಿ ಹೊರಗೆ ಹೋಗುತ್ತಿದ್ದಳು. ಸಂಜೆ ಮನೆಗೆ ಬರುತ್ತಿದ್ದಳು. ಇನ್ನು ಆಗಾಗ ಮನೆಗೆ ಬರುತ್ತಿದ್ದ ಪ್ರಿಯಕರನ ದಿನೇಶ್ ಜತೆ ಸೇರಿಕೊಂಡು ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದರು. ಮಗುವಿಗೆ ಕುಕ್ಕರ್‌ನಿಂದ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು.
ಮಗುವಿನ ಮರ್ಮಾಂಗ ಸೇರಿ ದೇಹದ ಹಲವೆಡೆ ಗಾಯದ ಗುರುತುಗಳಿವೆ. ಅದನ್ನು ಗಮನಿಸಿದ ಸ್ಥಳೀಯರು ಮಗುವನ್ನು ರಕ್ಷಿಸಿ, ಗಿರಿನಗರ ಠಾಣೆ ಪೊಲೀಸರ ಮೂಲಕ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.
ಕಲ್ಯಾಣ ಸಮಿತಿ ಮಗುವನ್ನು ಮಾತನಾಡಿಸಿದಾಗ ತಾಯಿ ಮತ್ತು ಆಕೆಯ ಪ್ರಿಯಕರ ನೀಡುತ್ತಿದ್ದ ಹಿಂಸೆಯ ಬಗ್ಗೆ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಕುರಿತು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.