Advertisement

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

12:36 AM Sep 30, 2023 | Team Udayavani |

ಮಂಗಳೂರು /ಉಡುಪಿ: ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಉಭಯ ಜಿಲ್ಲೆಯ ವಿವಿಧ ಕಡೆ ಬಿಟ್ಟು ಬಿಟ್ಟು ಮಳೆಯಾಗಿದ್ದು, ವಾತಾವರಣ ತುಸು ತಂಪಾಗಿದೆ. ಮಂಗಳೂರಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ಬಿರುಸಿನ ಮಳೆಯಾಗಿದೆ.

Advertisement

ಬೆಳ್ತಂಗಡಿ ಉತ್ತಮ ಮಳೆ
ಬೆಳ್ತಂಗಡಿ: ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಸಾಧಾರಣೆ ಮಳೆಯಾ ಗುತ್ತಿದ್ದು, ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಮಳೆಯಾಗಿದ್ದು ಶಿಶಿಲ, ಅರಸಿನಮಕ್ಕಿ, ಧರ್ಮಸ್ಥಳ, ಮುಂಡಾಜೆ, ಬೆಳ್ತಂಗಡಿ, ಮಡಂತ್ಯಾರು, ವೇಣೂರು, ಗೇರುಕಟ್ಟೆ, ಚಾರ್ಮಾಡಿ ಸಹಿತ ಉತ್ತಮ ಮಳೆಯಾಗಿದೆ. ಸತತ ಮಳೆಯಿಂದ ಹೆದ್ದಾರಿ ಅಗಲೀಕರಣ ಆಗುವಲ್ಲಿ ರಸ್ತೆ ಕೆಸರುಮಯವಾಗಿದೆ. ಕೆಲವೆಡೆ ಹೊಂಡಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳಿಗೆ ಹಾನಿಯಾಗಿದೆ.

ಕಾರ್ಕಳ: ವಿವಿಧೆಡೆ ಉತ್ತಮ ಮಳೆ
ಕಾರ್ಕಳ: ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನ ತನಕ ಬಿರುಸಿನ ಮಳೆ ಯಾಗಿದ್ದು, ಬಳಿಕ ವಿಶ್ರಾಂತಿ ಪಡೆದು ಕೊಂಡಿತ್ತು. ದಿನವಿಡಿ ಮೋಡದ ವಾತಾವರಣವಿತ್ತು. ತಣ್ಣನೆಯ ಚಳಿಯ ಅನುಭವ ಆಗುತ್ತಿತ್ತು. ಮಾಳ, ಬಜಗೋಳಿ ಸಹಿತ ವಿವಿಧ ಕಡೆ ಉತ್ತಮ ಮಳೆಯಾಗಿದೆ.

ಮರ ಬಿದ್ದು ಮನೆಗೆ ಹಾನಿ
ಕುಂಬಳೆ ಮಾಟೆಂಗುಳಿಯಲ್ಲಿ ಅಬ್ದುಲ್ಲ ಅವರ ಮನೆಯ ಸಿಟೌಟ್‌ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಈ ಸಂದರ್ಭ ಯಾರೂ ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಅಂಗಡಿಮೊಗರು ದೇಲಂ ಪಾಡಿಯಲ್ಲಿ ಬಂಡೆಕಲ್ಲು ಸಹಿತ ಗುಡ್ಡೆ ಕುಸಿತದಿಂದ ಫ್ರಾನ್ಸಿಸ್‌ ಕ್ರಾಸ್ತಾ ಅವರ ಮನೆ ಹಾನಿಗೀಡಾಗಿದೆ.

ಮೀನುಗಾರರಿಗೆ ಎಚ್ಚರಿಕೆ: ಭಾರತೀಯ ಹವಾಮಾನ ಇಲಾಖೆಯು ನೀಡಿದ ಹವಾಮಾನ ಮುನ್ಸೂಚನೆಯಂತೆ ಅ.2ರ ವರೆಗೆ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು, ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Advertisement

ಮಳೆ ಗಾಳಿಗೆ ಹಾರಿಹೋದ ತಗಡಿನ ಛಾವಣಿ
ಮೂಡುಬಿದಿರೆ: ಮಳೆ ಗಾಳಿಯ ಬಿರುಸಿಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿರುವ ತಾಲೂಕು ಕ್ರೀಡಾಂಗಣದ ಪೆವಿಲಿಯನ್‌ನ ತಗಡಿನ ಛಾವಣಿ ಮೂರು ಕಡೆ ಹಾರಿ ಹೋಗಿದೆ.

ಈ ಕ್ರೀಡಾಂಗಣದ ಛಾವಣಿ ಮುಂಭಾಗದಲ್ಲಿ ಅರೆ ವೃತ್ತಾಕಾರ ದಲ್ಲಿ ಇಳಿಜಾರಾಗಿರುವಂತೆ ಹಿಂಭಾಗದಲ್ಲಿ ಇಳಿಜಾರಾಗಿಲ್ಲ. ಹಾಗಾಗಿ ವೇಗವಾಗಿ ಬೀಸುವ ಗಾಳಿಗೆ ತಗಡಿನ ಶೀಟುಗಳು ಸುಲಭವಾಗಿ ಹಾರಿ ಹೋಗುವ ಪರಿಸ್ಥಿತಿಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next