Advertisement
ಬೆಳ್ತಂಗಡಿಯ ಹಳೆಕೋಟೆ ಪರಿಸರದಲ್ಲಿ ಕೆಲವು ದಿನಗಳಿಂದ ತಮಿಳುನಾಡಿನ ವರ್ತಕರು ರಸ್ತೆ ಬದಿಯಲ್ಲಿ ನಿಂತು ಓಲೆ ಬೆಲ್ಲದ ವ್ಯಾಪಾರ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಸಾಗುವವರು ತಮ್ಮ ವಾಹನಗಳನ್ನು ನಿಲ್ಲಿಸಿ, ಬೆಲ್ಲ ಖರೀದಿಸುತ್ತಿದ್ದಾರೆ. ತಾವೇ ಬೆಲ್ಲವನ್ನು ತಯಾರಿಸಿ ತರುವುದರಿಂದ ಉತ್ತಮ ಲಾಭ ಸಿಗುತ್ತಿದೆ. ಗುಣಮಟ್ಟದ ಬಗ್ಗೆಯೂ ಖಾತ್ರಿ ಇದೆ ಎಂದು ವರ್ತಕರು ಹೇಳುತ್ತಾರೆ.
ಇವರು ತಯಾರಿಸಿದ ಬೆಲ್ಲವನ್ನು ತಾಳೆ ಮರದ ಗರಿಗಳಿಂದ ಬುಟ್ಟಿಯ ಮಾದರಿ ತಯಾರಿಸಿ, ತಲಾ 10 ಕೆ.ಜಿ.ಯಂತೆ ಪ್ಯಾಕ್ ಮಾಡುತ್ತಾರೆ. 10 ಕೆ.ಜಿ.ಗೆ 1,400 ರೂ. ಬೆಲೆ. ಅಷ್ಟು ಪ್ರಮಾಣದ ಬೆಲ್ಲ ಬೇಡ ಎಂದಾದಲ್ಲಿ ಕೆ.ಜಿ.ಗೆ 140 ರೂ.ಗಳಂತೆಯೂ ಮಾರಾಟ ಮಾಡುತ್ತಾರೆ. ತಾಳೆ ಮರದ ಗರಿಗಳ ಬುಟ್ಟಿ ಮಾದರಿಯಲ್ಲಿ ಪ್ಯಾಕ್ ಮಾಡುವುದರಿಂದ ಬೆಲ್ಲ ಎಷ್ಟು ಸಮಯವಾದರೂ ಹಾಳಾಗುವುದಿಲ್ಲ ಎಂದು ವರ್ತಕ ವೇಲುದುರೈ ತಿಳಿಸಿದರು.
Related Articles
ಊರೂರು ಸುತ್ತಿ ಬೆಲ್ಲ ಮಾರಾಟ ಮಾಡುವುದೇ ಇವರ ಉದ್ಯಮ. ಒಮ್ಮೆ ಬರುವಾಗ ಒಂದೂವರೆ ಟನ್ ಬೆಲ್ಲ ತಯಾರಿಸಿ ತರುತ್ತಾರೆ. ಇಷ್ಟಕ್ಕೆ ಅವರಿಗೆ ಬರೊಬ್ಬರಿ ಮೂರು ತಿಂಗಳು ಬೇಕಾಗುತ್ತದೆ. ಲೋಡ್ ಖಾಲಿಯಾದ ಮೇಲೆಯೇ ಊರಿಗೆ ಮರಳುವುದು. ವರ್ಷದಲ್ಲಿ ಒಂದು ಸಲ ಬಂದ ಊರಿಗೆ ಮತ್ತೆ ಬರುವುದಿಲ್ಲ. ಈ ಬಾರಿ ಕರಾವಳಿ ಪ್ರದೇಶಕ್ಕೆ
ಆಗಮಿಸಿದ್ದು, ಮುಂದಿನ ಸಲ ಬೆಂಗಳೂರಿಗೆ ತೆರಳುತ್ತೇವೆ. ಆಯಾ ಪ್ರದೇಶದ ವ್ಯಾಪಾರ ನೋಡಿಕೊಂಡು ಮುಂದಿನ ಭೇಟಿಯನ್ನು ನಿರ್ಧರಿಸುತ್ತೇವೆ. ಬೆಳ್ತಂಗಡಿ ಹಳೆಕೋಟೆ ಭಾಗದಲ್ಲಿ 4 ದಿನಗಳಿಂದ ವ್ಯಾಪಾರ ಮಾಡುತ್ತಿದ್ದು, ವಾಹನಗಳನ್ನು ನಿಲ್ಲಿಸಿ ಜನ ಬೆಲ್ಲ ಖರೀದಿಸುತ್ತಿದ್ದಾರೆ. ಉತ್ತಮ ವ್ಯಾಪಾರ ಆಗಿದೆ ಎಂದು ಖುಷಿಯಿಂದಲೇ ಹೇಳಿದರು.
Advertisement
ಮಸಾಲ ಮಿಕ್ಸ್ ಬೆಲ್ಲನಾವು ಓಲೆ ಬೆಲ್ಲದ ಜತೆಗೆ ಮಸಾಲ ಮಿಕ್ಸ್ ಬೆಲ್ಲವನ್ನೂ ಮಾರಾಟ ಮಾಡುತ್ತಿದ್ದೇವೆ. ಬೆಲ್ಲಕ್ಕೆ ಶುಂಠಿ, ಏಲಕ್ಕಿ, ಕರಿಮೆಣಸು ಸೇರಿಸಿ ಮಸಾಲ ಮಿಕ್ಸ್ ತಯಾರಿಸಲಾಗುತ್ತಿದೆ. ಇದು ಶೀತ, ಕಫ, ಕೆಮ್ಮಿಗೆ ಉತ್ತಮ ಔಷಧ. ಕರಾವಳಿ ಭಾಗದಲ್ಲಿ ಇದಕ್ಕೆ ಬೇಡಿಕೆಯೂ ಉತ್ತಮವಾಗಿದೆ. ಈ ಬೆಲ್ಲಕ್ಕೆ ಕೆ.ಜಿ.ಗೆ. 240 ರೂ. ಧಾರಣೆ ಇದೆ. ಮೂರು ತಿಂಗಳಲ್ಲಿ ಒಂದುವರೆ ಟನ್ ಬೆಲ್ಲ ತಯಾರಿಸಲು ಸಾಧ್ಯವಾಗುತ್ತದೆ. ನಾವೇ ತಯಾರಿಸಿ ಮಾರುವುದರಿಂದ ಲಾಭವಿದೆ ಎಂದು ಬೆಲ್ಲ ವರ್ತಕ ರಾಜಾ ವಿವರಿಸಿದರು. ಕಿರಣ್ ಸರಪಾಡಿ