ನವದೆಹಲಿ:ಕೇರಳ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತವನ್ನು ನಡೆಸುವ ರಾಜಮನೆತನಗಳ ಹಕ್ಕನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಅಲ್ಲದೇ ತಿರುವನಂತಪುರಂನಲ್ಲಿರುವ ಐತಿಹಾಸಿಕ ದೇವಾಲಯದ ಮೇಲೆ ರಾಜ್ಯ ಸರ್ಕಾರ ಅಧಿಕಾರದ ಹಿಡಿತ ಸಾಧಿಸಬೇಕು ಎಂಬ 2011ರ ಕೇರಳ ಹೈಕೋರ್ಟ್ ನಿರ್ದೇಶನವನ್ನು ತಳ್ಳಿಹಾಕಿದೆ.
ರಾಜಮನೆತನ ಆಡಳಿತ ಮಂಡಳಿಯನ್ನು ಅಂತಿಮವಾಗಿ ರಚಿಸುವವರೆಗೂ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ತಿರುವನಂತಪುರಂ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ನೋಡಿಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಯು,ಯು.ಲಲಿತ್ ಮತ್ತು ಇಂದು ಮಲೋತ್ರಾ ನೇತೃತ್ವದ ಪೀಠ ತಿಳಿಸಿದೆ.
2011ರಲ್ಲಿಯೇ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಮಿತಿಯೇ ಆಂತರಿಕವಾಗಿ ಕಾರ್ಯನಿರ್ವಹಿಸಲಿದೆ. ರಾಜಮನೆತನ ಸಮಿತಿಯನ್ನು ಅಂತಿಮಗೊಳಿಸಿ ರಚಿಸಲಿದೆ.
ಪದ್ಮನಾಭ ಸ್ವಾಮಿ ದೇವಸ್ಥಾನದ ರಹಸ್ಯ ನಿಧಿ ನಿಕ್ಷೇಪ ಇದೆ ಎಂದು ನಂಬಿರುವ ನೆಲಮಾಳಿಗೆಯ ಪ್ರಮುಖ ಕೋಣೆಯ ಬಾಗಿಲನ್ನು ತೆರೆಯಬೇಕೆ ಅಥವಾ ಬೇಡವೇ ಎಂಬ ಬಗ್ಗೆ ರಾಜಮನೆತನದ ಸಂಪ್ರದಾಯದ ಪ್ರಕಾರ ಅಂತಿಮ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಹಾಗಂತ ಇದು ರಾಜಮನೆತನಕ್ಕೆ ಕಾನೂನು ಹೋರಾಟದಲ್ಲಿ ದೊರೆತ ಜಯ ಎಂಬುದಾಗಿ ಪರಿಗಣಿಸಬಾರದು. ಯಾಕೆಂದರೆ ಪದ್ಮನಾಭ ಸ್ವಾಮಿಯ ಎಲ್ಲಾ ಭಕ್ತರ ಆಶೀರ್ವಾದ ಎಂದು ನಾವು ಗ್ರಹಿಸಿದ್ದೇವೆ. ಈ ತೀರ್ಪನ್ನು ಕೇರಳ ಸರ್ಕಾರ ಕೂಡಾ ಸ್ವಾಗತಿಸಿದೆ.