Advertisement

ಸೇವೆಯಿಂದ ಕನ್ನಡ ಜಗದ್ಗುರು ಎನಿಸಿದ್ದ ತೋಂಟದಶ್ರೀ

11:35 AM Nov 02, 2021 | Shwetha M |

ವಿಜಯಪುರ: ಗದಗ ತೋಂಟದ ಡಾ| ಸಿದ್ಧಲಿಂಗ ಶ್ರೀಗಳು ಶಿಕ್ಷಣ, ಕೃಷಿ, ದಾಸೋಹ, ತತ್ವಗಳನ್ನು ಜೀವನದುದ್ದಕ್ಕೂ ಅನುಸರಿಸಿ ಕನ್ನಡ ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದರು. ಕನ್ನಡ ಕಟ್ಟುವಲ್ಲಿ ಶ್ರಮಿಸಿದ್ದ ಶ್ರೀಗಳು ಉಸಿರಿನ ಕೊನೆವರೆಗೂ ಕನ್ನಡಕ್ಕಾಗಿಯೇ ಜೀವಿಸಿದ್ದರು ಎಂದು ಹಿರಿಯ ಮೋಡಿ ಲಿಪಿ ತಜ್ಞ, ಸಂಶೋಧಕ ಡಾ| ಸಂಗಮೇಶ ಕಲ್ಯಾಣಿ ಅಭಿಪ್ರಾಯಪಟ್ಟರು.

Advertisement

ನಗರದ ತೋಂಟದಾರ್ಯ ಅನುಭವನ ಮಂಟಪದಲ್ಲಿ ಲಿಂ. ತೋಂಟದ ಜಗದ್ಗುರು ಡಾ| ಸಿದ್ಧಲಿಂಗ ಶ್ರೀಗಳ 3ನೇ ಪುಣ್ಯ ಸ್ಮರಣೋತ್ಸವದ “ಜಗದ ಗುರುವಿಗೆ ಕಾವ್ಯ ದೀವಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕವಿ ಆಗಬಯಸುವ ವ್ಯಕ್ತಿ ತನ್ನ ಕಾವ್ಯಕ್ಕೆ ಶಕ್ತಿ ನೀಡಲು ಕಾವ್ಯದ ಅಧ್ಯಯನ ಮಾಡಬೇಕು. ಜೊತೆಗೆ ತನ್ನ ಕಾವ್ಯ ಪದೇ ಪದೇ ಓದಿ ತಿದ್ದಬೇಕು. ಕಾವ್ಯಕ್ಕೆ ತಿದ್ದಿಸಿಕೊಳ್ಳುವ ಗುಣವಿದೆ. ಕಾವ್ಯ ತಿದ್ದಿದಂತೆ ತನ್ನ ಮೂರ್ತ ಸ್ವರೂಪ ಪಡೆಯುತ್ತದೆ ಎಂದರು.

ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ಗದಗ ತೋಂಟದ ಡಾ| ಸಿದ್ಧಲಿಂಗ ಶ್ರೀ ಕನ್ನಡ ನಾಡಿನ ನೆಲ-ಜಲ, ಭಾಷೆ ಮೇಲೆ ಅಪಾರ ಗೌರವ ಹೊಂದಿ ನಾಡು-ನುಡಿಗಾಗಿ ಹಗಲಿರುಳು ಶ್ರಮಿಸಿ ಕನ್ನಡದ ಜಗದ್ಗುರು ಎಂಬ ಕೀರ್ತಿ ಸಂಪಾದಿಸಿದ್ದರು. ವಿಶ್ವವಿದ್ಯಾಲಯಗಳು ಮಾಡಬೇಕಾದ ಸಾಹಿತ್ಯ ಕೃತಿಗಳ ಅದರಲ್ಲೂ ಕನ್ನಡದ ಕೃತಿಗಳನ್ನು ಮುದ್ರಣ, ಪ್ರಕಾಶನ ಕಾರ್ಯ ಮಾಡಿದ ಕೀರ್ತಿ ಗದಗ ತೋಂಟದ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಗದಗ ಡಾ| ಎಂ.ಎಂ. ಕಲಬುರ್ಗಿ ಲಿಂಗಾಯಿತ ಅಧ್ಯಯನ ಸಂಸ್ಥೆಯಿಂದ 500ಕ್ಕೂ ಹೆಚ್ಚು ಕನ್ನಡ ಪುಸ್ತಕ ಪ್ರಕಟಣೆ ಮೂಲಕ ಕನ್ನಡ ನಾಡಿನಲ್ಲಿ ಘನ ಕಾರ್ಯ ಮಾಡಿದರು. ಈ ಕಾರಣಕ್ಕೆ ನಾಡಿನಲ್ಲಿ ಕನ್ನಡ ಜಗದ್ಗುರು ಎಂಬ ಪ್ರೀತಿಯ ಕೀರ್ತಿ ಸಂಪಾದಿಸಿದ್ದರು ಎಂದು ಬಣ್ಣಿಸಿದರು.

Advertisement

ಹಿರಿಯ ಸಾಹಿತಿ ಸಿದ್ಧರಾಮ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, “ಜಗದ ಗುರುವಿಗೆ ಕಾವ್ಯ ದೀವಿಗೆ’ ವಿನೂತನ ಕಾರ್ಯಕ್ರಮದ ಮೂಲಕ ನಾಡು-ನುಡಿ ಸೇವಕನಿಗೆ ಗೌರವ ಅರ್ಪಿಸಿರುವುದು ಕನ್ನಡ ತಾಯಿ ಮಹಾಪೂಜೆಯಾಗಿದೆ ಎಂದರು.

ಕನ್ನಡ ನಾಡಿನಲ್ಲಿ ಆಗಿ ಹೋದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿದ ಮಹಾನುಭಾವರ ಜೀವನ ಚರಿತ್ರೆ ತಮ್ಮ ಪ್ರಕಾಶನ ಸಂಸ್ಥೆ ಮೂಲಕ ಮುದ್ರಣ ಮಾಡಿ ಇತಿಹಾಸದ ಗತದಲ್ಲಿ ಕಳೆದು ಹೋಗಿದ್ದ ಮಹಾತ್ಮರ ಚರಿತ್ರೆ ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಕೀರ್ತಿ ತೋಂಟದ ಸಿದ್ಧಲಿಂಗರಿಗೆ ಸಲ್ಲುತ್ತದೆ ಎಂದರು.

ಕೆ.ಎಸ್‌. ಬಾಗೇವಾಡಿ ಮಾತನಾಡಿದರು. ಬಸವರಾಜ ಕುಂಬಾರ, ಆದಪ್ಪ ಗೊರಚಿಕ್ಕನವರ, ಮೋಹನ ಕಟ್ಟಿಮನಿ, ಎಂ.ಎಂ. ಮುಲ್ಲಾ, ಮುರುಗೇಶ ಸಂಗಮ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ತೊದಲಬಾಗಿ, ಸವಿತಾ ಹಲಸಗಿ, ಈರಮ್ಮ ಬೋನೂರ, ಅರ್ಜುನ ಹಂಜಗಿ, ಸಂಗಮೇಶ ಜಂಗಮಶೆಟ್ಟಿ, ಸುಮಿತ್ರಾ ಬಾಗಲಕೋಟ, ಶಿವಾಜಿ ಮೋರೆ, ಮಂಜುನಾಥ ಜುನಗೊಂಡ, ಸುಮಾ ಗಾಜರೆ, ಯಮನೂರಪ್ಪ ಅರಬಿ, ರಮೇಶ ಜೋಗೂರ, ಲಾಯಪ್ಪ ಇಂಗಳೆ, ರಂಗನಾಥ ತೋರಪೆ, ರಾಹುಲ ಮರಳಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕವಿಗಳು ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ಕುರಿತು ಕವನ ವಾಚಿಸಿದರು. ಸಾಹಿತಿ ಶಂಕರ ಬೈಚಬಾಳ ಆಶಯ ಭಾಷಣ ಮಾಡಿದರು. ಡಾ| ಮಾಧವ ಗುಡಿ, ಸಿ.ಜಿ. ಹಿರೇಮಠ ನಿರೂಪಿಸಿದರು. ಬಿ.ಜಿ. ವಾಲಿಕಾರ ಪ್ರಾರ್ಥಿಸಿದರು. ಎನ್‌.ಕೆ. ಕುಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next