ನವದೆಹಲಿ: ಉತ್ತರ ಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡು ದಿನದ ಬಳಿಕ ಪಾರ್ಲಿಮೆಂಟಿನಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಯೋಗಿ ಆದಿತ್ಯನಾಥ್ ವಿದಾಯ ಭಾಷಣ ಮಾಡಿದರು. ಈ ವೇಳೆ ಅವರು ಕಾಂಗ್ರೆಸ್, ಎಸ್ಪಿಯ ಮೈತ್ರಿಯ ಕಾಲೆಳೆದರು. “ನನ್ನ ವಯಸ್ಸು 44. ನಾನು ರಾಹುಲ್‌ಗಿಂತ ಚಿಕ್ಕವನು, ಅಖೀಲೇಶ್‌ಗಿಂತ ದೊಡ್ಡವನು. ನಡುವೆ ಇದ್ದ ನನಗೆ ಜನ ಮತಹಾಕಿದ್ದರಿಂದ ಉ.ಪ್ರ.ದಲ್ಲಿ ಮೈತ್ರಿ ಸೋಲನ್ನಪ್ಪಿತು’ ಎಂದಿದ್ದಾರೆ.
ಮೋದಿಯನ್ನು ಗ್ಲೋಬಲ್ ಐಕಾನ್ ಎಂದು ಬಣ್ಣಿಸಿದ ಯೋಗಿ, ಉತ್ತರ ಪ್ರದೇಶವನ್ನು ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದಾಗಿ ಸಂಸತ್ತಿನಲ್ಲಿ ಪ್ರಕಟಿಸಿದರು. “ನನ್ನ ಸರ್ಕಾರ ಒಂದು ಸಮುದಾಯ, ಒಂದು ಜಾತಿಗಾಗಿ ದುಡಿಯದೆ ಎಲ್ಲರ ಏಳ್ಗೆಯನ್ನು ಬಯಸಲಿದೆ’ ಎಂದರು.
ಗೈರು, ಮೋದಿ ಗರಂ: ಸಂಸತ್ತಿನ ಅಧಿವೇಶನಗಳಿಗೆ ಗೈರಾಗುತ್ತಿರುವ ಬಿಜೆಪಿ ಸಂಸದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ. “ನಾನು ಯಾವುದೇ ಸಮಯದಲ್ಲಿ, ಯಾರಿಗೂ ಕರೆ ಮಾಡಿ ಈ ಬಗ್ಗೆ ಪ್ರಶ್ನಿಸಬಹುದು’ ಎಂದು ಎಚ್ಚರಿಸಿದ್ದಾರೆ. ಬಿಜೆಪಿ ಸಂಸದರ ವಾರದ ಸಭೆಯಲ್ಲಿ ಸಂಸತ್ತಿನಲ್ಲಿ ಕಡಿಮೆ ಹಾಜರಾತಿ ಕುರಿತು ಸಚಿವ ಅನಂತ್‌ಕುಮಾರ್ ಪ್ರಸ್ತಾಪಿಸಿದಾಗ, ಮೋದಿ ಗರಂ ಆಗಿದ್ದಾರೆ. ಬಜೆಟ್ ಮೇಲಿನ ಅಧಿವೇಶನದ ಚರ್ಚೆಯಲ್ಲಿ ಲೋಕಸಭೆಗಿಂತ ರಾಜ್ಯಸಭೆಯಲ್ಲಿ ಹೆಚ್ಚು ಹಾಜರಾತಿ ಇತ್ತು. “ಅಧಿವೇಶನಕ್ಕೆ ಹೋಗಿ ಎಂದು ನಾನು ನಿಮಗೆ ಮನವಿ ಮಾಡುವುದಿಲ್ಲ. ಅದು ನಿಮ್ಮ ಮೂಲಭೂತ ಕರ್ತವ್ಯ. ಸಂಸದನೊಬ್ಬನ ಕೆಲಸ ಆರಂಭ ಆಗವುದೇ ಪಾರ್ಲಿಮೆಂಟಿನಿಂದ’ ಎಂದು ಮೋದಿ ಬುದ್ಧಿವಾದ ಹೇಳಿದ್ದಾರೆ.