Advertisement

ನಾಳೆ ಆಟಿ ಅಮಾವಾಸ್ಯೆ: ಹಾಲೆ ಕಷಾಯ ಒಂದೇ ದಿನಕ್ಕೆಂದರ್ಥವಲ್ಲ

05:35 AM Jul 22, 2017 | |

ಉಡುಪಿ: ಆಷಾಢ ಮಾಸದ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ (ಜು. 23) ಹಾಲೆ ಮರದ ತೊಗಟೆ ಕಷಾಯ ಸೇವಿಸುವುದು ಜನಜನಿತ. ಹಾಲೆ ಮರದರಲ್ಲಿರುವ ರೋಗನಿರೋಧಕ ಶಕ್ತಿಯೇ ಕಷಾಯ ಸೇವನೆಗೆ ಕಾರಣ. ಇದು ಕರಾವಳಿಯಲ್ಲಿ ಕಂಡುಬರುವ ಪದ್ಧತಿ. ಇದಕ್ಕೂ ಇಲ್ಲಿ ಹೆಚ್ಚಿಗೆ ಮಳೆ ಬರುತ್ತಿರುವುದು ಕಾರಣ ಎಂದು ತಿಳಿದುಬರುತ್ತದೆ.  

Advertisement

ಹಾಲೆ ಮರಕ್ಕೆ ಆಯುರ್ವೇದದಲ್ಲಿ ಸಪ್ತಪರ್ಣ ಎನ್ನುತ್ತಾರೆ. ಈ ಎಲೆಗಳಲ್ಲಿ ಏಳು ಎಳೆಗಳಿರುವ ಕಾರಣ ಸಪ್ತ ಪರ್ಣ ಎಂದು ಹೆಸರು ಬಂದಿದೆ.

ಔಷಧೀಯ ಗುಣ
ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ಆಯುರ್ವೇದ ಔಷಧಿಗಳಲ್ಲಿ ಇದು ಧಾರಾಳವಾಗಿ ಬಳಕೆಯಾಗುತ್ತಿದೆ. ಈ ಔಷಧಿಗಳನ್ನು ಸೇವಿಸುವವರಿಗೆ ಅದರಲ್ಲಿ ಹಾಲೆ ಮರದ ಅಂಶಗಳಿವೆ ಎನ್ನುವುದೂ ಗೊತ್ತಿರುವುದಿಲ್ಲ. ವಿಶೇಷವೆಂದರೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಈ ವಿಚಾರವನ್ನು ಆಯುರ್ವೇದ ತಿಳಿವಳಿಕೆ ಇಲ್ಲದ ಸಾಮಾನ್ಯ ವ್ಯಕ್ತಿಗಳೂ ಪಾಲಿಸುವ ಸಂಸ್ಕೃತಿ ಕಾಣಬಹುದಾಗಿದೆ. 

ಈಗ ಮಳೆಗಾಲ. ಮಳೆ ಜೊತೆಗೆ ಬಿಸಿಲೂ ಬರುತ್ತದೆ. ವೈರಾಣುಗಳಿಂದಾಗಿ ಡೆಂಗ್ಯು, ಇಲಿ ಜ್ವರ, ಮಲೇರಿಯಾದಂತಹ ಜ್ವರ ಬರುತ್ತಿದೆ. ಆಯುರ್ವೇದದಲ್ಲಿ ಇಂತಹ ಜ್ವರಗಳನ್ನು ವಿಷಮ ಜ್ವರ ಎಂದು ಕರೆದಿದ್ದಾರೆ. ಹಾಲೆ ಮರದ ಕೆತ್ತೆಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಇದೆ. ಇದಕ್ಕೆ ಕಿಡ್ನಿ ಸಮಸ್ಯೆ, ಕ್ರಿಮಿ ನಿವಾರಕ, ಚರ್ಮ ರೋಗ ಪರಿಹರಿಸುವ ಶಕ್ತಿಯೂ ಇದೆ. ಹೀಗಾಗಿ ಹವಾಮಾನ ವೈಪರೀತ್ಯದ ಈ ವೇಳೆ ಕಷಾಯ ಕುಡಿಯುವ ಕ್ರಮ ಬಂದಿದೆ ಎನ್ನುತ್ತಾರೆ ಆಯುರ್ವೇದ ದ್ರವ್ಯಗುಣ ತಜ್ಞ ಡಾ| ಶ್ರೀಧರ ಬಾಯರಿಯವರು. 

ಆಟಿ ಅಮಾವಾಸ್ಯೆ ದಿನ ಕಷಾಯ ಕುಡಿಯಬೇಕು ಎನ್ನುವಾಗ ಅದೊಂದೇ ದಿನ ಕುಡಿಯಬೇಕು ಎಂದು ಅರ್ಥವಲ್ಲ. ದೀಪಾವಳಿಗೆ ಅಭ್ಯಂಗ ಮಾಡಬೇಕೆಂದಾಕ್ಷಣ ಅದೊಂದೇ ದಿನ ಮಾಡಬೇಕೆಂದರ್ಥವೆ? ನೆನಪು ಮಾಡಲು ಅದೊಂದು ದಿನ ಆಚರಣೆ ಇದೆ. ಆಟಿ ಅಮಾವಾಸ್ಯೆಗಿಂತ ಒಂದು ತಿಂಗಳು ಹಿಂದೆ, ಅನಂತರ 2-3 ತಿಂಗಳು ಈ ಕಷಾಯವನ್ನು ನಿಯಮಿತವಾಗಿ ಕುಡಿಯಬಹುದು. ಸಾಮಾನ್ಯವಾಗಿ 10-16 ಎಂಎಲ್‌ ಕುಡಿಯಬಹುದು ಎಂದು ಡಾ|ಶ್ರೀಧರ ಬಾಯರಿ ಹೇಳುತ್ತಾರೆ. 

Advertisement

ವಿಶ್ವಭಾರತಿ ವಿ.ವಿ. ವಿಶೇಷ
ಕೋಲ್ಕತ್ತಾ ಸಮೀಪದ ರವೀಂದ್ರನಾಥ ಠಾಗೋರರು 1921ರಲ್ಲಿ ಸ್ಥಾಪಿಸಿದ ವಿಶ್ವಭಾರತಿ ವಿ.ವಿ. ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಹಾಲೆ ಮರದ ಐದು ಎಲೆಗಳನ್ನು ಕೊಡುತ್ತಾರೆ. ಹಾಲೆ ಮರ ಪಶ್ಚಿಮಬಂಗಾಳ ರಾಜ್ಯದ ವೃಕ್ಷವಾಗಿದೆ.

ಶ್ರೀಕೃಷ್ಣಮಠದಲ್ಲಿ ವಿತರಣೆ
ಉಡುಪಿ ಶ್ರೀಕೃಷ್ಣಮಠದಲ್ಲಿ ಪ್ರತಿವರ್ಷ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ಕಷಾಯ ವಿತರಿಸುತ್ತಾರೆ. ಅದೇ ದಿನ ಬೆಳಗ್ಗೆ ಮೇಸಿŒಯವರು ನಾಲ್ಕೈದು ಕೆ.ಜಿ. ಆಗುವಷ್ಟು ಹಾಲೆ ಮರದ ತೊಗಟೆ ತಂದು ಕೊಡುತ್ತಾರೆ. ಇದನ್ನು ಕಷಾಯ ಮಾಡಿ ಬೆಳಗ್ಗೆ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವಾಗ ಸಮರ್ಪಿಸಿ ಬಳಿಕ ಸಾರ್ವಜನಿಕರಿಗೆ ವಿತರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆಯುರ್ವೇದ ಕೇಂದ್ರಗಳಲ್ಲಿ ಹಾಲೆ ಮರದ ಕಷಾಯವನ್ನು ವಿತರಿಸುವ ಕ್ರಮ ಚಾಲ್ತಿಯಲ್ಲಿದೆ. 

ತಯಾರಿ ಹೇಗೆ?
ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ರಸವನ್ನು ತೆಗೆಯುತ್ತಾರೆ. ಕೆಲವರು ಓಮಾ ಜತೆ ಸೇರಿಸಿ ಕುಡಿಯುತ್ತಾರೆ. ಕಾಳುಮೆಣಸು, ಜೀರಿಗೆ ಮಿಶ್ರ ಮಾಡಿ ಕುದಿಸಿ ಕುಡಿಯುವವರೂ ಇದ್ದಾರೆ.

ಎಚ್ಚರ ಅಗತ್ಯ
ಸಾರ್ವಜನಿಕರು ಅದೇ ದಿನ ಮುಂಜಾವ ತೊಗಟೆ ತೆಗೆಯಲು ಹೋಗುತ್ತಾರೆ. ನಸುಕಿನಲ್ಲಿ ಸರಿಯಾಗಿ ತೋರದೆ ಹಾಲೆ ಮರದ ಬದಲು ಬೇರೊಂದು ಮರದ ಕೆತ್ತೆ ತಂದು ಜೀವಕ್ಕೆ ಅಪಾಯ ಆಗುವ ಸಾಧ್ಯತೆಯೂ ಇರುವುದರಿಂದ ಜಾಗರೂಕತೆ ವಹಿಸಬೇಕು. ಹಿಂದಿನ ದಿನವೇ ಗುರುತಿಸಿ ಮರುದಿನ ಸಂಗ್ರಹಿಸುವುದು ಉತ್ತಮ. ಇಲ್ಲವಾದರೆ ಹಾಲೆ ಮರದ ಎಲೆಯನ್ನು ಸ್ಪಷ್ಟವಾಗಿ ಗುರುತಿಸಿ ಅದರ ತೊಗಟೆಯನ್ನು ತೆಗೆಯಬೇಕು. ಬ್ರಾಹ್ಮಿà ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವುದರಿಂದ ಮುಂಜಾವವೇ ತೊಗಟೆ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿರಬಹುದು.

ಆಟಿ ಅಮಾವಾಸ್ಯೆ ದಿನ ಕಷಾಯ ಕುಡಿಯಬೇಕು ಎನ್ನುವಾಗ ಅದೊಂದೇ ದಿನ ಕುಡಿಯಬೇಕು ಎಂದು ಅರ್ಥವಲ್ಲ. ದೀಪಾವಳಿಗೆ ಅಭ್ಯಂಗ ಮಾಡಬೇಕೆಂದಾಕ್ಷಣ ಅದೊಂದೇ ದಿನ ಮಾಡ ಬೇಕೆಂದರ್ಥವೆ? ನೆನಪು ಮಾಡಲು ಅದೊಂದು ದಿನ ಆಚರಣೆ ಇದೆ. 

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next