Advertisement

Kittur: ಶೌಚಾಲಯವಾದ ಕಿತ್ತೂರು ಅರಸರ ಸಮಾಧಿಗಳು!

12:02 AM Oct 21, 2023 | Team Udayavani |

ಧಾರವಾಡ: ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರರ ಸಮಾಧಿಗೆ ಹಾಲು ತುಪ್ಪದ ಅಭಿಷೇಕ ನಡೆಯಬೇಕಿತ್ತು. ಆದರೆ ಸಾರಾಯಿ ಸುರಿಯಲಾಗುತ್ತಿದೆ. ಹೂವು-ಹಣ್ಣು ಏರಿಸಿ ಪೂಜೆ ಮಾಡಬೇಕಿತ್ತು, ಆದರೆ ಜಲಬಾಧೆ ತೀರಿಸಿಕೊಳ್ಳಲಾಗುತ್ತಿದೆ. ಅಕ್ಷರಶಃ ಈ ಸಮಾಧಿಗಳು ಬಯಲು ಶೌಚಾಲಯವಾಗಿ ಮಾರ್ಪಟ್ಟಿವೆ.

Advertisement

ಹೌದು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಪ್ರಾಣ ತ್ಯಾಗ ಮಾಡಿದ ಕಿತ್ತೂರು ರಾಣಿ ಚನ್ನಮ್ಮನ ಅರಮನೆ ಸಹಿತ ಎಲ್ಲವನ್ನೂ ಬ್ರಿಟಿಷರು ನಾಶ ಮಾಡಿದ್ದು ಗೊತ್ತಿರುವ ಸಂಗತಿ. ದುರ್ದೈವ ಎಂದ ರೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷವಾದರೂ ಅಂತಹ ಹೆಮ್ಮೆಯ ಸಂಸ್ಥಾನದ ದೇಶಗತಿಯ ಸ್ಮಾರಕಗಳು ಈಗಲೂ ನಾಶವಾಗುತ್ತಿವೆ. ಕಿತ್ತೂರು ಕಟ್ಟಿ ಆಳಿದ ಅರಸರ ಸಮಾಧಿಗಳಲ್ಲಿ ಬಯಲು ಶೌಚ ನಿರಂತರವಾಗಿ ನಡೆಯುತ್ತಿದೆ.

ಇದು ಸ್ವಾಭಿಮಾನಿ ಕನ್ನಡಿಗರೆಲ್ಲರೂ ತಲೆ ತಗ್ಗಿಸುವ ವಿಚಾರ. ರಾಜಕೀಯಕ್ಕಾಗಿ ರಾಣಿ ಚನ್ನಮ್ಮನ ಹೆಸರು ಬಳಸಿಕೊಳ್ಳುವವರಿಗಂತೂ ಇನ್ನು ಮುಂದೆ ಅವಳ ಹೆಸರು ಎತ್ತಲು ನೈತಿಕತೆಯೇ ಇಲ್ಲ ಎನ್ನುವಷ್ಟು ಕೆಟ್ಟದಾಗಿದೆ ಸಮಾಧಿಗಳ ಸ್ಥಿತಿ. ಕಿತ್ತೂರು ಉತ್ಸವದ ನೆಪದಲ್ಲಿ ಕೋಟಿ ಕೋಟಿ ರೂ. ಖರ್ಚು ಮಾಡುವ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗಾದರೂ ಕನಿಷ್ಠ ಸೌಜನ್ಯ ಇರಬೇಕಾಗಿತ್ತು.

ಮದ್ಯದ ಅಭಿಷೇಕ
ಸುಸ್ಥಿತಿಯಲ್ಲಿದ್ದ ಕಿತ್ತೂರು ಅರಸರ ಸಮಾಧಿಗಳ ಬಗ್ಗೆ ನಿರ್ಲಕ್ಷ್ಯ ಹೆಚ್ಚುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮದ್ಯಪಾನದ ಅಭಿಷೇಕವಾಗುತ್ತಿದೆ. ಹುತಾತ್ಮರ ಸಮಾಧಿ ಮೇಲೆ ಸ್ಥಾಪಿಸಿದ್ದ ನಂದಿ ಮತ್ತು ಈಶ್ವರ ವಿಗ್ರಹಗಳು ನಾಪತ್ತೆಯಾಗಿವೆ. ಮಹಾಪುರುಷರನ್ನು ಮಣ್ಣು ಮಾಡಿದ ಸಮಾಧಿ ಮಂದಿರದಲ್ಲಿ ಜಲಬಾಧೆ ತೀರಿಸಿಕೊಳ್ಳಲಾಗುತ್ತಿದೆ.

ಅಕ್ರಮಗಳ ತಾಣ
ಸಮಾಧಿ ಪರಿಸರದಲ್ಲಿ ವಿದ್ಯಾರ್ಥಿಗಳ ಓಡಾಟವೂ ಹೆಚ್ಚಿದ್ದು, ರಾತ್ರಿಯಾದರೆ ಕರಾಳ ಸ್ವರೂಪ ಪಡೆದು ಕೊಳ್ಳುತ್ತಿದೆ. ಹಾವು, ಚೇಳು, ಬಾವುಲಿ, ಕಣ್ಣಕಪ್ಪಡಿ, ಜೇಡರ ಬಲೆ ಈ ಸಮಾಧಿ ಮಂದಿರಗಳನ್ನು ಆವರಿಸಿಕೊಂಡಿವೆ. ಕುಡುಕರ ಮಜಾ ತಾಣಗಳಾಗಿವೆ. ಮದ್ಯದ ಬಾಟಲು, ಗುಟ್ಕಾ ಚೀಟಿಗಳು, ಸಾರಾಯಿ ಪ್ಯಾಕೆಟ್‌, ಸಿಗರೇಟ್‌ ಸೇವನೆ ಮುಂತಾದವು ರಾಜಾರೋಷವಾಗಿ ನಡೆಯುತ್ತಿದೆ.

Advertisement

ಕಿತ್ತೂರಿನ ಕೋಟೆಗೆ ಹೊಂದಿಕೊಂಡಿರುವ ಸಂಸ್ಥಾನ ಕಲ್ಮಠದ ಆವರಣದಲ್ಲಿ ದೊರೆ ಮಲ್ಲಸರ್ಜ ದೇಸಾಯಿ, ಅಲ್ಲಪ್ಪಗೌಡ ದೇಸಾಯಿ, ವೀರಪ್ಪ ದೇಸಾಯಿ ಸಹಿತ ಕಿತ್ತೂರು ಸಂಸ್ಥಾನದ ವಿವಿಧ ತಲೆಮಾರುಗಳ ಆರೇಳು ಸಮಾಧಿಗಳಿವೆ. ಈ ಸಮಾಧಿಗಳ ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ ಎಂದು ಕೇಳಿದರೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಲ್ಲಿ ಉತ್ತರವೇ ಇಲ್ಲ.

ಆಗಬೇಕಾಗಿದ್ದೇನು?
ಕಿತ್ತೂರಿನ ಅರಸರಿಗೆ ಮಾರ್ಗದರ್ಶಕರಾಗಿದ್ದ ಸಂಸ್ಥಾನ ಕಲ್ಮಠದ ಆವರಣ ಮತ್ತು ಕಬಾjದಲ್ಲಿಯೇ ಈ ಸಮಾಧಿಗಳಿವೆ. ಕಿತ್ತೂರು ಸಂಸ್ಥಾನವನ್ನು ಕಟ್ಟಿದ್ದ ಹಿರೇಮಲ್ಲಪ್ಪ ಶೆಟ್ಟಿ ಮತ್ತು ಚಿಕ್ಕ ಮಲ್ಲಪ್ಪ ಶೆಟ್ಟಿ ಅವರಿಂದ ಹಿಡಿದು ಕೊನೆ ಅರಸರವರೆಗಿನ ಇತಿಹಾಸವನ್ನು ಈ ಮಠದಲ್ಲಿ ಬರೆಯಲಾಗಿದೆ. ಆದರೆ ಸ್ಮಾರಕಗಳ ರಕ್ಷಣೆ ಮಠದಿಂದಲೂ ಕಷ್ಟ ಎನ್ನುವಂಥ ಸ್ಥಿತಿ ಸದ್ಯಕ್ಕೆ ಅಲ್ಲಿದೆ. ಹೀಗಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕಲ್ಮಠದ ಆಡಳಿತ ಮಂಡಳಿ ಅಥವಾ ಕಿತ್ತೂರು ಚನ್ನಮ್ಮನ ವಂಶಸ್ಥರಿಗೆ ಹಸ್ತಾಂತರಿಸಿ ಇವುಗಳನ್ನು ಸುಸ್ಥಿತಿಯಲ್ಲಿ ಇಡಬೇಕಾಗಿದೆ.

ಎಷ್ಟೋ ಬಾರಿ ಸ್ವಂತ ಖರ್ಚು ಮಾಡಿ ಈ ಸಮಾಧಿಗಳನ್ನು ಸ್ವತ್ಛಗೊಳಿಸಿದ್ದೇವೆ. ಆದರೆ ನಾವಿರುವುದು ಖಾನಾಪುರದಲ್ಲಿ. ಇವುಗಳನ್ನು ನಿರ್ವಹಣೆ ಮಾಡುವಂತೆ ಅನೇಕ ಬಾರಿ ಕೇಳಿದ್ದೇವೆ. ಆದರೆ ಯಾರೂ ಗಮನ ಹರಿಸುತ್ತಿಲ್ಲ. ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಅನಿವಾರ್ಯ.
– ಉದಯ ದೇಸಾಯಿ, ಕಿತ್ತೂರು ಚನ್ನಮ್ಮನ ವಂಶಸ್ಥರು

ಚನ್ನಮ್ಮನ ಹೆಸರು ಹೇಳಿ ರಾಜಕಾರಣ ಮಾಡುವವರಿಗೆ ನಾಚಿಕೆಯಾಗಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ? ಕಿತ್ತೂರು ರಾಜರ ಗೌರವಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ. ಈ ಸಮಾಧಿಗಳನ್ನು ಪಂಚಮಸಾಲಿ ಸಮಾಜದ ವಶಕ್ಕೆ ಕೊಡಿ, ನಾವು ನೋಡಿಕೊಳ್ಳುತ್ತೇವೆ.
– ಬಸವಜಯ ಮೃತ್ಯುಂಜಯ ಶ್ರೀ, ಪಂಚಮಸಾಲಿ ಪೀಠ

 ಬಸವರಾಜ ಹೊಂಗಲ್‌

 

Advertisement

Udayavani is now on Telegram. Click here to join our channel and stay updated with the latest news.

Next