Advertisement
ರಾಜ್ಯದಲ್ಲಿ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಬೆಂಗಳೂರಿನ ಸುತ್ತಮುತ್ತ ಭಾಗಗಳಿಂದಲೂ ನಗರಕ್ಕೆ ಟೊಮೆಟೋ ಹೆಚ್ಚಿನ ಪ್ರಮಾಣ ಬರುತ್ತಿಲ್ಲ. ಹೀಗಾಗಿ ಬೇಡಿಕೆ ಹೆಚ್ಚಾಗಿ ದರ ಹೆಚ್ಚಳವಾಗಿತ್ತು. ಆದರೆ, ಎರಡು ದಿನಗಳಿಂದ ಮಹಾರಾಷ್ಟ್ರದ ನಾಸಿಕ್ ಹಾಗೂ ಆಂಧ್ರಪ್ರದೇಶದ ಮದನಪಲ್ಲಿಯಿಂದ ಟೊಮೆಟೋ ಪೂರೈಕೆಯಾಗುತ್ತಿರುವುದರಿಂದ ದರ ಇಳಿಯುವ ಸಾಧ್ಯತೆಯಿದೆ.
Related Articles
Advertisement
ಗಾಂಧಿ ಬಜಾರ್, ಬಸವನಗುಡಿ, ಎನ್.ಆರ್.ಕಾಲೋನಿ, ಚಾಮರಾಜಪೇಟೆ, ಕತ್ರಿಗುಪ್ಪೆ ಸೇರಿದಂತೆ ನಗರದ ಕೆಲವು ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ ತಳ್ಳುವ ಗಾಡಿಗಳಲ್ಲಿ ಟೊಮೆಟೋ ಬೆಲೆ 50-40 ರೂ.ಗಳಿಗೆ ಇಳಿದಿತ್ತು. ರಾಜಾಜಿನಗರ, ಮಲ್ಲೇಶ್ವರ, ಜಯನಗರ ಸೇರಿದಂತೆ ವಿವಿಧೆಡೆ 70 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು.
ಹಾಪ್‌ಕಾಮ್ಸ್ ದರ: ಹಾಪ್‌ಕಾಮ್ಸ್‌ನಲ್ಲಿ ಸೋಮವಾರದಿಂದ ಟೊಮೊಟೋ ಬೆಲೆ ಏರಿಕೆ ಮಾಡಿದ್ದು, ಮಂಗಳವಾರ ಒಂದು ಕೆ.ಜಿ.ಗೆ 60 ರೂ.ಗಳಿಗೆ ಮಾರಾಟ ಮಾಡಲಾಗಿತ್ತು. ನಂತರ ಶುಕ್ರವಾರ ಒಂದು ಕೆ.ಜಿ.ಗೆ 50 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಶನಿವಾರ 45 ರೂ.ಗೆ ಇಳಿಯಾಗುವ ಸಾಧ್ಯತೆ ಇದೆ. ಪ್ರತಿದಿನ ಹಾಪ್‌ಕಾಮ್ಸ್‌ನಲ್ಲಿ ಐದಾರು ಟನ್‌ಗಳಷ್ಟು ಟೊಮೆಟೋ ಬೇಡಿಕೆ ಇರಲಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ತಿಳಿಸಿದ್ದಾರೆ.
ಮಾರುಕಟ್ಟೆಗೆ ಟೊಮೆಟೋ: ಕರ್ನಾಟಕದಲ್ಲಿ ಮೈಸೂರು, ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಳ್ಳಾರಿಯಲ್ಲಿ ಹೆಚ್ಚು ಟೊಮೆಟೋ ಬೆಳೆಯಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಭಾಗದಿಂದ ಬೆಂಗಳೂರಿಗೆ ಟೊಮೆಟೋ ಪೂರೈಕೆಯಾಗುತ್ತದೆ. ಚಳಿಗಾಲದಲ್ಲಿ ಟೊಮೆಟೋ ಹೂ ಬಿಟ್ಟು, ಹಣ್ಣಾಗಲು ಬಹಳ ಸಮಯ ಹಿಡಿಯುತ್ತದೆ.
ಅಲ್ಲದೆ ಈ ಬಾರಿ ಕೊಂಚ ಚಳಿ ಹೆಚ್ಚಿರುವ ಕಾರಣ ಫಸಲು ಬರುವುದು ನಿಧಾನವಾಗಲಿದೆ. ಸಂಕ್ರಾಂತಿ ಕಳೆದ ನಂತರ ರಾಜ್ಯದಲ್ಲಿ ಟೊಮೆಟೋ ಇಳುವರಿ ಉತ್ತಮವಾಗಿರಲಿದ್ದು, ನಂತರ ದಿನಗಳಲ್ಲಿ ಮಾರುಕಟ್ಟೆಗೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಟೊಮೆಟೋ ಪೂರೈಕೆಯಾಗಲಿದೆ ಹಾಗೂ ದರ ಕಡಿಮೆಯಾಗಲಿದೆ.
ಚೈನಿಸ್ ಟೊಮೆಟೋ: ಚೈನಿಸ್ ಟೊಮೆಟೋ ಎಂದರೆ ಚೀನಾದಿಂದ ಆಮದು ಮಾಡಿಕೊಳ್ಳುವುದಲ್ಲ. ಇಲ್ಲೇ ಬೆಳೆಯುವುದು. ಫಾರಂ ಮತ್ತು ನಾಟಿ ಟೊಮೆಟೋ ಗಿಡಗಳ ಮಧ್ಯೆ ಚೈನಿಸ್ ಟೊಮೆಟೋ ಗಿಡಗಳನ್ನು ರೈತರು ಬೆಳೆಸಲಿದ್ದು ಇದರ ಬೆಲೆ ಕಡಿಮೆ ಇರಲಿದೆ. ಗಾಢ ಕೇಸರಿ ಬಣ್ಣದ ಈ ಟೊಮೆಟೋ ರುಚಿ ಸಪ್ಪೆಯಾಗಿರಲಿದೆ. 12 ಕೆ.ಜಿ.ಯ ಒಂದು ಟ್ರೇ ಚೈನಿಸ್ ಟೊಮೆಟೋ 100 ರೂ.ಗಳಿಗೆ ದೊರೆಯುತ್ತಿದೆ. ಟೊಮೆಟೋ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಈ ಟೊಮೆಟೋ ಖರೀದಿಸುತ್ತಿವೆ.
ನಾಟಿ ಟೊಮೆಟೋ ಹುಳಿ ಮತ್ತು ಬೀಜ ಹೆಚ್ಚು ಹಾಗೂ ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೆಚ್ಚಿನ ಮಂದಿ ಅಡುಗೆಗೆ ಬಳಸುವುದಿಲ್ಲ. ಹೀಗಾಗಿ ಇದರ ಬೆಲೆ ಏರಿಕೆಯಾಗುವುದಿಲ್ಲ. ಫಾರಂ ಟೊಮೆಟೋ ಹೆಚ್ಚು ದಿನ ಹಾಳಾಗುವುದಿಲ್ಲ. ಅಲ್ಲದೆ ಹುಳಿ ಮತ್ತು ಬೀಜ ಕಡಿಮೆ ಇರುವುದರಿಂದ ಬಹುತೇಕ ಮಂದಿ ಕೊಳ್ಳುತ್ತಾರೆ ಹೀಗಾಗಿ ಬೆಲೆ ಏರಿದೆ. -ಕೃಷ್ಣಕುಮಾರಿ, ಕೆ.ಆರ್.ಮಾರುಕಟ್ಟೆ ತರಕಾರಿ ವ್ಯಾಪಾರಿ * ಶೃತಿ ಮಲೆನಾಡತಿ