Advertisement

Toll Gate; ಅಪಘಾತ ತಾಣವಾಗುತ್ತಿರುವ ಟೋಲ್‌ಗೇಟ್‌ಗಳು; ಘನ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌

11:25 PM Jan 01, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ – 66ರಲ್ಲಿರುವ ಟೋಲ್‌ ಸಂಗ್ರಹ ಕೇಂದ್ರಗಳು ಅಪಘಾತಗಳ ತಾಣವಾಗುತ್ತಿದ್ದು ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರ ಸವಾಲಾಗಿದೆ.

Advertisement

ಟೋಲ್‌ಗೇಟ್‌ಗಳ ಇಕ್ಕೆಲಗಳಲ್ಲಿ ಯೂ ಹಗಲು-ರಾತ್ರಿ ಟ್ರಕ್‌, ಲಾರಿ, ಟೆಂಪೋ ಸೇರಿದಂತೆ ಘನ ವಾಹನಗಳ ಅವ್ಯವಸ್ಥಿತ ನಿಲುಗಡೆಯಿಂದಾಗಿ ವಾಹನ ಸವಾರರು, ಚಾಲಕರು ಗೊಂದಲಕ್ಕೀಡಾಗುತ್ತಿದ್ದಾರೆ. ಹೆಚ್ಚಿನ ಟೋಲ್‌ಗೇಟ್‌ಗಳಲ್ಲಿ ಲೇನ್‌ಗಳಿಗೆ ಅಡ್ಡವಾಗಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಗೇಟ್‌ಗೆ ಬರುವ ಇತರ ವಾಹನಗಳು ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ ವಾಹನಕ್ಕೆ, ಟೋಲ್‌ಗೇಟ್‌ಗೆ, ರಸ್ತೆ ದಾಟುವವರಿಗೆ ಢಿಕ್ಕಿ ಹೊಡೆಯುವುದು ಸಾಮಾನ್ಯ ವಾಗುತ್ತಿದೆ.

ವಾರಗಟ್ಟಲೆ ಕದಲುವುದಿಲ್ಲ ರಾಜ್ಯದ ಗಡಿಭಾಗ ವಾದ ತ‌ಲಪಾಡಿ ಟೋಲ್‌ ಗೇಟ್‌, ಉಡುಪಿ ಮತ್ತು ದ.ಕ. ಜಿಲ್ಲೆಯ ಗಡಿಭಾಗವಾದ ಹೆಜಮಾಡಿ ಟೋಲ್‌ಗೇಟ್‌ ಹಾಗೂ ಬೈಂದೂರು ಬಳಿಯ ಶಿರೂರು ಟೋಲ್‌ಕೇಂದ್ರಗಳ ಪ್ರವೇಶ ಭಾಗದಲ್ಲಿ ಘನ ವಾಹನಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಕೆಲವೊಮ್ಮೆ ಇಡೀ ರಾತ್ರಿ, ಇನ್ನೂ ಕೆಲವೊಮ್ಮೆ ವಾರಗಟ್ಟಲೆಯೂ ನಿಲ್ಲಿಸು ತ್ತಿರುವುದೂ ಬೆಳಕಿಗೆ ಬಂದಿದೆ. ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದಿರುವುದು ಅಪಘಾತಗಳಿಗೆ ಮತ್ತೊಂದು ಕಾರಣವಾಗುತ್ತಿದೆ.

ವಿರುದ್ಧ ದಿಕ್ಕಿನ ಸಂಚಾರ
ತಲಪಾಡಿ ಮತ್ತು ಹೆಜಮಾಡಿ ಟೋಲ್‌ಗೇಟ್‌ಗಳ ಪಕ್ಕದಲ್ಲಿರುವ ಸ್ಥಳೀಯ ಸಂಪರ್ಕ ರಸ್ತೆಗಳ ಕಡೆಗೆ ಹೋಗುವ ವಾಹನಗಳು ವಿರುದ್ಧ ದಿಕ್ಕಿನಲ್ಲಿ (ರಾಂಗ್‌ ಸೈಡ್‌) ನುಗ್ಗುತ್ತವೆ. ತಲಪಾಡಿ ಟೋಲ್‌ಗೇಟ್‌ನಲ್ಲಿ ಟ್ರಕ್‌, ಲಾರಿ, ಟೆಂಪೋಗಳು ಮಾತ್ರವಲ್ಲದೆ ಟೂರಿಸ್ಟ್‌ ಬಸ್‌, ಮಿನಿಬಸ್‌, ಸಿಟಿಬಸ್‌ಗಳು ಕೂಡ ದಿನವಿಡೀ ನಿಲ್ಲುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಬ್ರಹ್ಮರಕೂಟ್ಲು, ಸಾಸ್ತಾನದಲ್ಲೂ ಸಮಸ್ಯೆ
ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿಯೂ ಘನ ವಾಹನಗಳ ಪಾರ್ಕಿಂಗ್‌ ಸಮಸ್ಯೆ ತಂದೊಡ್ಡಿದೆ. ಇಲ್ಲಿನ ಟೋಲ್‌ಗೇಟ್‌ ಪಕ್ಕದಲ್ಲಿ ಹೆದ್ದಾರಿ ಏಕಪಥವಾಗಿ ಕಿರಿದಾಗಿರುವುದರಿಂದಲೂ ಸಮಸ್ಯೆ ಯಾಗಿದೆ. ಆಗಾಗ್ಗೆ ಅಪಘಾತಗಳೂ ಸಂಭವಿಸುತ್ತಿವೆ. ಉಡುಪಿಯ ಸಾಸ್ತಾನ ಗೇಟ್‌ ಬಳಿಯೂ ಲಾರಿಗಳನ್ನು ಲೇನ್‌ಗೆ ಅಡ್ಡವಾಗಿಯೇ ನಿಲ್ಲಿಸಲಾಗುತ್ತಿದೆ. ಇದೇ ಕಾರಣದಿಂದ 5 ತಿಂಗಳ ಹಿಂದೆ ಇಲ್ಲಿ ಬೈಕ್‌ ಅಪಘಾತಕ್ಕೀಡಾಗಿ ಸವಾರ ಮೃತಪಟ್ಟಿದ್ದರು.

Advertisement

ತಪಾಸಣೆಯಿಂದಲೂ ತೊಡಕು
ಅಂತರ್‌ ಜಿಲ್ಲೆ, ಅಂತಾರಾಜ್ಯ ಗಡಿಯಲ್ಲಿ ಪೊಲೀಸ್‌, ಕಸ್ಟಮ್ಸ್‌ ಇಲಾಖೆಯವರಿಂದ ನಿರಂತರ ತಪಾಸಣೆ ನಡೆಯುತ್ತಿರುತ್ತದೆ.

ಮೊದಲೇ ಟ್ರಕ್‌, ಲಾರಿಗಳ ಪಾರ್ಕಿಂಗ್‌ನಿಂದ ತುಂಬಿರುವ ಟೋಲ್‌ಗೇಟ್‌ಗಳಲ್ಲಿ ಇಂತಹ
ತಪಾಸಣೆಗಾಗಿ ವಾಹನ ತಡೆಯುವುದ ರಿಂದ ಕೆಲವು ಸಂದರ್ಭಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಕೊಂಚ ಮುಂದಕ್ಕೋ ಆಥವಾ ಒಂದು ಬದಿಯಲ್ಲೋ ತಪಾಸಣೆ ನಡೆಸುವುದು ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಲಪಾಡಿ, ಹೆಜಮಾಡಿಯಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ಗಳಿವೆ. ಉಳಿದೆಡೆ ಹೈವೇ ಪ್ಯಾಟ್ರೊಲಿಂಗ್‌ ಪೊಲೀಸರು ಇರುತ್ತಾರೆ. ಆದರೆ ಯಾರೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಪರಿಹಾರ ಹುಡುಕುತ್ತಿಲ್ಲ ಎಂಬುದು ನಾಗರಿಕರ ದೂರಾದರೆ, ಕೆಲವೆಡೆ ಟ್ರಕ್‌ ಬೇ ಇಲ್ಲದಿರುವುದೂ ಸಮಸ್ಯೆಗೆ ಕಾರಣ ಎಂಬುದು ಚಾಲಕರ ಅನಿಸಿಕೆ.

ಟೋಲ್‌ಗೇಟ್‌ ಅವಘಡ ಸರಣಿ
– 2022ರ ಫೆಬ್ರವರಿಯಲ್ಲಿ ತಲಪಾಡಿ ಗೇಟ್‌ ಬಳಿ ಬೈಕ್‌ಗಳು ಢಿಕ್ಕಿ ಹೊಡೆದು ಓರ್ವ ಸಾವು.
– 2020ರಲ್ಲಿ ತಲಪಾಡಿ ಗೇಟ್‌ ಬಳಿ ರಸ್ತೆ ದಾಟುತ್ತಿದ್ದ ಲಾರಿ ಚಾಲಕ ಬಸ್‌ ಢಿಕ್ಕಿಯಾಗಿ ಸಾವು.
– ಈ ವರ್ಷದ ಮಾರ್ಚ್‌ನಲ್ಲಿ ಹೆಜಮಾಡಿ ಗೇಟ್‌ ಬಳಿ ಟ್ಯಾಂಕರ್‌ ಢಿಕ್ಕಿಯಾಗಿ ಸ್ಕೂಟರ್‌ ಸವಾರರಿಬ್ಬರ ಸಾವು.
-2022ರ ಎಪ್ರಿಲ್‌ನಲ್ಲಿ ಹೆಜಮಾಡಿ ಗೇಟ್‌ನಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿ ಅಡುಗೆ ಮಾಡುತ್ತಿದ್ದಾಗ ಬೆಂಕಿ ಅವಘಡ ಸಂಭವಿಸಿ ಲಾರಿ ಭಸ್ಮ.
– 2022ರ ಎಪ್ರಿಲ್‌ನಲ್ಲಿ ಹೆಜಮಾಡಿ ಗೇಟ್‌ನಲ್ಲಿ ನಿಲ್ಲಿಸಿದ್ದ ಬುಲೆಟ್‌ ಟ್ಯಾಂಕರ್‌ಗೆ ಸ್ಕೂಟರ್‌ ಢಿಕ್ಕಿಯಾಗಿ ಸವಾರ ಸಾವು.
– 2022ರ ಜುಲೈಯಲ್ಲಿ ಶಿರೂರು ಟೋಲ್‌ಗೇಟ್‌ಗೆ ಆ್ಯಂಬುಲೆನ್ಸ್‌ ಢಿಕ್ಕಿಯಾಗಿ ಮೂವರ ಸಾವು.

ಟೋಲ್‌ಗೇಟ್‌ಗಳಲ್ಲಿ ಯಾವುದೇ ವಾಹನವನ್ನು ನಿಯಮ ಬಾಹಿರವಾಗಿ, ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಸುಗಮ, ಸುರಕ್ಷಿತ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಹೈವೇ ಪ್ಯಾಟ್ರೊಲಿಂಗ್‌ ಪೊಲೀಸರಿಗೆ ಸೂಚಿಸಲಾಗಿದೆ. ಅಂತಹ ಚಾಲಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು.
– ಡಾ| ಕೆ. ಅರುಣ್‌, ಎಸ್‌ಪಿ, ಉಡುಪಿ

ಟೋಲ್‌ಗೇಟ್‌ ಬಳಿ ದಿನದ 24 ಗಂಟೆಯೂ ಟೀ, ಕಾಫಿ, ತಿಂಡಿ ಅಂಗಡಿಗಳು ಇರುವುದರಿಂದ ದೂರ ಸಂಚರಿಸುವ ಘನ ವಾಹನಗಳು ನಿಲ್ಲುತ್ತವೆ. ಇದರಿಂದಾಗುವ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಟೋಲ್‌ಪ್ಲಾಜಾದವರಿಗೂ ಸೂಚಿಸಲಾಗಿದೆ. ಪೊಲೀಸರು ಕೂಡ ಆಗಾಗ್ಗೆ ಸ್ಥಳದಲ್ಲಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
– ದಿನೇಶ್‌ ಕುಮಾರ್‌ ಬಿ.ಪಿ.
ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ, ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next