Advertisement

ಬೆಳೆ ಸಾಗಾಟಕ್ಕೆ ಟೋಲ್‌ ಸಿಬ್ಬಂದಿ ತೊಂದರೆ

06:31 PM Oct 28, 2021 | Team Udayavani |

ಶಿರಾ: ಬೆಳೆದ ಬೆಳೆಯನ್ನು ಹೊರ ಜಿಲ್ಲೆಯ ಮಾರು ಕಟ್ಟೆಗೆ ಸಾಗಾಟ ಮಾಡಲು, ರಾಷ್ಟ್ರೀಯ ಹೆದ್ದಾರಿ ನಂ.48ರಲ್ಲಿನ ಕರೇಜವನಹಳ್ಳಿ ಟೋಲ್‌ ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ. ತಮ್ಮ ನೆರವಿಗ ಜಿಲ್ಲಾಡಳಿತ, ತಾಲೂಕು ಆಡಳಿತ, ಶಾಸಕರು ಬರುತ್ತಾರೆಯೇ ಎಂದು ರೈತರು ಕನವರಿಸುವಂತಾಗಿದೆ.

Advertisement

ತಾಲೂಕಿನಲ್ಲಿ ರೈತರು ಸಮೃದ್ಧವಾಗಿ ಟೊಮೆಟೋ ಬೆಳೆದಿದ್ದು, ಕೋಲಾರದ ಮಾರುಕಟ್ಟೆಗೆ ಸಾಗಿಸುವುದು ವಾಡಿಕೆಯಾಗಿ ಬೆಳೆದುಬಂದಿದೆ. ಹಗಲೆಲ್ಲ ಹೊಲದಲ್ಲಿ ಬೆಳೆಯನ್ನು ಕಟಾವು ಮಾಡಿ, ಕ್ರೇಟ್‌ಗಳಲ್ಲಿ ತುಂಬಿ ರಾತ್ರಿ 8ರಿಂದ 9 ಗಂಟೆಗೆ ಶಿರಾದಿಂದ ಲಾರಿಗಳು ಹೊರಡುತ್ತವೆ. ಬೆಳಗಿನ ಜಾವ 3 ಗಂಟೆಯೊಳಗೆ ಕೋಲಾರ ತಲುಪಿಸುವ ವ್ಯವಸ್ಥೆಯನ್ನು ರೈತರು ಮಾಡಿಕೊಂಡಿದ್ದಾರೆ. ಹೀಗೆ ಸಮಯಕ್ಕೆ ಸರಿಯಾಗಿ ಹೋಗುವ ಬೆಳೆಗೆ ಪ್ರಸ್ತುತ ಉತ್ತಮ ಬೆಲೆ ಸಿಗುತ್ತಿದೆ.

ತುಮಕೂರು, ಬೆಂಗಳೂರು ಮಾರ್ಗವಾಗಿ, ಕೆಲ ವೊಮ್ಮೆ ತುಮಕೂರು, ದೊಡ್ಡಬಳ್ಳಾಪುರ, ವಿಜಯಪುರ ಮಾರ್ಗವಾಗಿ ಕೋಲಾರಕ್ಕೆ ಲಾರಿಗಳು ತೆರಳುತ್ತವೆ. ಹೀಗೆ ಲೋಡ್‌ ತೆಗೆದುಕೊಂಡು ಹೋಗುವ ಲಾರಿಗಳಿಗೆ ಬಾಡಿಗೆ ದರ ನಿಗದಿಪಡಿಸಿ, ಚಾಲಕರ ಊಟ-ತಿಂಡಿ ಇತರೆ ಖರ್ಚಿಗೆ ಇಂತಿಷ್ಟು ಹಣವನ್ನು ನೀಡಿ ಕಳುಹಿಸಲಾಗುತ್ತದೆ. ಚಾಲಕರ ಜೊತೆಯಲ್ಲಿ ಕೆಲವೊಮ್ಮೆ ರೈತರೂ ಕೋಲಾರ ಮಾರುಕಟ್ಟೆಗೆ ಹೋಗಿ ಬರುತ್ತಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ;- ನೈಜತೆ ಕಳೆದುಕೊಂಡ ಶಾಲಾ ಮೈದಾನ

ಟೋಲ್‌ ಸಿಬ್ಬಂದಿ ಕಿರಿಕಿರಿ: ಹೀಗಿ ಕೋಲಾರ ಮಾರು ಕಟ್ಟೆಗೆ ಹೋಗುವ ಲಾರಿಗಳು, ರಾ.ಹೆ. 48ರ ಕರೇ ಜವನಹಳ್ಳಿ ಟೋಲ್‌ ದಾಟುವುದು ಅನಿವಾರ್ಯ. ಟೋಲ್‌ ಈಗ ಫಾಸ್ಟ್‌ ಟ್ಯಾಗ್‌ ಮೂಲಕ ನಿರ್ವಹಿಸು ತ್ತಿದ್ದು, ಕ್ಯಾಶ್‌ಲೆಸ್‌ ವ್ಯವಹಾರ ನಡೆಸಲಾಗುತ್ತಿದೆ. ಒಮ್ಮೆ ಟೋಲ್‌ ಮೂಲಕ ಲಾರಿ ಹೋದರೆ, ಪಾಸ್ಟ್‌ ಟ್ಯಾಗ್‌ ಮೂಲಕ ಸಂಬಂಧಿಸಿದ ಹಣ ಐಆರ್‌ಬಿ ಖಾತೆಗೆ ಜಮಾ ಆಗುತ್ತದೆ. ಇಲ್ಲಿರುವ ಸಿಬ್ಬಂದಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ.

Advertisement

ಸುಗಮ ಸಂಚಾರಕ್ಕೆ ನೆರವಾಗಬೇಕಿದ್ದ ಟೋಲ್‌ ಸಿಬ್ಬಂದಿ, ಲಾರಿಗಳನ್ನು ತಡೆದು ನಿಗದಿತ ಟನ್ನೇಜ್‌ಗಿಂತ ಹೆಚ್ಚು ಲೋಡ್‌ ತರುತ್ತೀರಿ. ಅದಕ್ಕಾಗಿ 155 ರೂ. ಗಳನ್ನು ಪಾವತಿ ಮಾಡಬೇಕು ಎಂದು ಲಾರಿ ಸಿಬ್ಬಂದಿಯನ್ನು ಬೆದರಿಸುತ್ತಾರೆ. ಹಣಪಾವತಿ ಮಾಡುತ್ತೇವೆ ರಸೀದಿ ಕೊಡಿ ಎಂದು ಲಾರಿ ಸಿಬ್ಬಂದಿ ಕೇಳುವಂತಿಲ್ಲ. ಇದರಿಂದ ಲಾರಿ ಚಾಲಕರು ಮತ್ತು ಟೋಲ್‌ ಸಿಬ್ಬಂದಿ ನಡುವೆ ಮಾತಿನ ಚಕಮಕಿ, ನಿತ್ಯ ಒಂದಲ್ಲೊಂದು ಗಲಾಟೆ ನಡೆಯುತ್ತಿದೆ. ಕೆಲ ಲಾರಿ ಚಾಲಕರು ಅದನ್ನು ತಮ್ಮ ಮೊಬೈಲ್‌ಗ‌ಳಲ್ಲಿ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಹೆಚ್ಚುವರಿ ಹಣಕ್ಕೆ ಬೇಡಿಕೆ: ಫಾಸ್ಟ್‌ಟ್ಯಾಗ್‌ನಲ್ಲಿಯೇ ಹೆಚ್ಚುವರಿ ಟನ್ನೇಜಿಗೆ ಸಂಬಂಧಿಸಿದ ಹೆಚ್ಚುವರಿ ಹಣ ಜಮಾ ಮಾಡಿಕೊಳ್ಳುವಂತೆ ಚಾಲಕರು ತಿಳಿಸಿದರೂ, ಇಂತಿಷ್ಟು ಹಣ ಕೊಡದೇ ಹೋದರೆ ಲಾರಿಯನ್ನು ಬಿಡುವುದಿಲ್ಲ ಎಂದು ಸಿಬ್ಬಂದಿ ದಬಾಯಿಸುತ್ತಾರೆ ಎನ್ನುವ ದೂರು ಕೇಳಿಬಂದಿದೆ. ಅನಿವಾರ್ಯವಾಗಿ ಲಾರಿ ಚಾಲಕರು ತಮ್ಮ ಊಟ-ತಿಂಡಿಗೆ ನೀಡಿರುವ ಖರ್ಚಿನಲ್ಲಿ ಬಹುತೇಕ ಪಾಲನ್ನು ಟೋಲ್‌ ಸಿಬ್ಬಂದಿಗೆ ನೀಡುವುದು ಅನಿವಾರ್ಯವಾಗಿದೆ ಎಂದು ತಿಳಿದು ಬಂದಿದೆ.

ಟೋಲ್‌ನಲ್ಲಿ ಆರ್‌ಟಿಒ ಕೆಲಸ: ಸಾಮಾನ್ಯವಾಗಿ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕವನ್ನು ಲಾರಿಗಳಲ್ಲಿ ಹೇರಿದಾಗ, ಅದನ್ನು ಪರಿಶೀಲಿಸಿ, ಅದಕ್ಕೆ ತಕ್ಕಂತೆ ದಂಡ ವಿಧಿಸುವುದು ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳ ಕೆಲಸ. ಆದರೆ, ಆ ಕೆಲಸವನ್ನೂ ಟೋಲ್‌ ಸಿಬ್ಬಂದಿಯೇ ಗುತ್ತಿಗೆಗೆ ತೆಗೆದುಕೊಂಡಿರುವಂತೆ ವರ್ತಿಸುತ್ತಿದ್ದಾರೆ ಎನ್ನುವುದು ಲಾರಿ ಚಾಲಕರ ದೂರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದ ಪತ್ರಿಕೆಗೆ ದೊರೆತ ಪ್ರತಿಕ್ರಿಯೆಯೂ ಅದೆ.

ಅದು ಆರ್‌ ಟಿಒ ಕೆಲಸ. ಅದನ್ನು ಟೋಲ್‌ ಸಿಬ್ಬಂದಿ ಹೇಗೆ ಮಾಡು ತ್ತಾರೆ ಎಂದು ಸಚಿವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಫಾಸ್ಟ್‌ಟ್ಯಾಗ್‌, ಕ್ಯಾಷ್‌ ಲೆಸ್‌ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವವರು ಹಣಪಾವತಿ ಮಾಡಿ ಮುಂದುವರಿ ಯುತ್ತಾರೆ ಎಂದು ರೈತರೇ ಬೇಸರ ವ್ಯಕ್ತಪಡಿಸಿದ್ದಾರೆ.

ಕೈಚಲ್ಲಿದ ತಾಲೂಕು ಆಡಳಿತ: ಈ ಬಗ್ಗೆ ಸಿಕ್ಕ ವಿಡಿಯೋಗಳು ಮತ್ತು ರೈತರಿಂದ ಮಾಹಿತಿ ಪಡೆದ ಪತ್ರಿಕೆ ಟೋಲ್‌ ಸಿಬ್ಬಂದಿ ದಬ್ಟಾಳಿಕೆ ಬಗ್ಗೆ ತಹಶೀ ಲ್ದಾರರ್‌ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸುವಂತೆ ಕೇಳಿದಾಗ, ಈ ಬಗ್ಗೆ ನಮಗೆ ರೈತರಿಂದ ನೇರ ದೂರು ಬರಲಿ. ತಪ್ಪಿದರೆ, ನಾವು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಉತ್ತರ ದೊರೆತಿದೆ. ಪ್ರಸ್ತುತ ರೈತರಿಗೆ ಉತ್ತಮ ದರ ದೊರೆಯುತ್ತಿರುವ ಕಾರಣ, ಆದಷ್ಟು ಬೇಗನೆ ತಮ್ಮ ಬೆಳೆಯನ್ನು ಕಟಾವು ಮಾಡಿ, ಸಮಯಕ್ಕೆ ಸರಿ ಯಾಗಿ ಕೋಲಾರ ಮಾರುಕಟ್ಟೆಗೆ ತಲುಪಿಸಿ, ಒಂದಷ್ಟು ಕಾಸಿನ ಮುಖವನ್ನು ಕಾಣಲು ಬಯಸುತ್ತಿರುವ ರೈತರು ತಹಶೀಲ್ದಾರರಿಗೆ ದೂರು ಸಲ್ಲಿಸಲು ಮುಂದೆ ಬರಬೇಕಿದೆ.

ʼಕರೇಜೀವನ ಹಳ್ಳಿ ಟೋಲ್‌ನಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಸಾಗಿಸುವುದು ಅನಿವಾರ್ಯವಾಗಿದೆ. ಕೆಲವು ರೈತರು ಹೆಚ್ಚಿನ ತೂಕ ಸಾಗಿಸು ತ್ತಿದ್ದಾರೆ ಎಂದು ಕರೇಜೀವನಹಳ್ಳಿ ಟೋಲ್‌ ಪ್ರಾಜೆಕ್ಟ್ ವ್ಯವಸ್ಥಾಪಕ ಪಾಟೀಲ್‌, ಸೆಕ್ಯೂ ರಿಟಿ ಮುಖ್ಯಸ್ಥ ಶಿವಲಿಂಗಯ್ಯ ಅವರು ಹೆಚ್ಚುವರಿ ತೂಕಕ್ಕೆ ಮಾತ್ರ ಶುಲ್ಕ ವಸೂಲಿ ಮಾಡಿರುವುದಾಗಿ ತಿಳಿಸಿದ್ದಾರೆ. ಅದರಂತೆ ಬಿಲ್‌ಗ‌ಳನ್ನು ಸಹ ನೀಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಟೋಲ್‌ ಸಿಬ್ಬಂದಿಗೆ ಸೂಚನೆ ನೀಡಲಾಗಿದೆʼ. – ಮಮತಾ.ಎಂ, ತಹಶೀಲ್ದಾರ್‌.

ಸರ್ಕಾರದ ಆದೇಶಗಳಿಗೆ ಬೆಲೆ ನೀಡುತ್ತಿಲ್ಲ

ಪ್ರಸ್ತುತ ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ ಉತ್ತಮ ಬೆಲೆ ಸಿಗುತ್ತಿದೆ. ಕಳೆದ 2 ತಿಂಗಳಿಂದ ಕೋಲಾರ ಮಾರುಕಟ್ಟೆಗೆ ಸಾಗಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ರೈತರು ಮತ್ತು ಹಿರಿಯೂರು ಭಾಗದ ರೈತರು ಬೆಳೆದಿರುವ ಟೊಮೆಟೋ ಸಾಗಿಸುವ ಕೆಲಸ ಮಾಡುತ್ತಿದ್ದೇವೆ. ಲಾರಿಯಲ್ಲಿ ಸುಮಾರು 700ರಿಂದ 800 ಕ್ರೇಟ್‌ ವರೆಗೆ ಸಾಗಿಸಲಾಗುತ್ತದೆ.

ಒಮ್ಮೊಮ್ಮೆ ರೈತರು ಬೆಳೆದಿರುವುದನ್ನು ಬಿಟ್ಟು ಹೋಗಲಾಗದೇ ಹತ್ತಿಪ್ಪತ್ತು. ಕ್ರೇಟ್‌ ಹೆಚ್ಚಿಗೆ ಲೋಡ್‌ ಮಾಡುವುದೂ ಉಂಟು. ಲಾರಿಯಲ್ಲಿ 500 ಕ್ರೇಟ್‌ ಇರಲೀ 800 ಕ್ರೇಟ್‌ ಇರಲಿ ಟೋಲ್‌ ಮಂದಿ ಹೇಳುವುದು ಮಾತ್ರ ಓವರ್‌ ಟನ್ನೇಜ್‌. ಅದಕ್ಕೆ 155 ರೂ. ಪಾವತಿಸಬೇಕು ಎಂದು ಒತ್ತಾಯಿಸುತ್ತಾರೆ. ನಾವು ಈ ಹಿಂದೆ ಕರಬೂಜ, ಕಲ್ಲಂಗಡಿಯನ್ನು ರಾಜ್ಯದ ವಿವಿಧೆಡೆ ಸರಬರಾಜು ಮಾಡಿದ್ದೇವೆ. ಯಾವುದೇ ಟೋಲ್‌ಗ‌ಳಲ್ಲಿ ಟನ್ನೇಜ್‌ಗೆ ದಂಡ ವಿಧಿಸುವುದಿಲ್ಲ. ಆದರೆ, ಕರೇಜವನಹಳ್ಳಿ ಟೋಲ್‌ ಮಾತ್ರ ಎಲ್ಲದಕ್ಕಿಂತ ಭಿನ್ನ. ಇಲ್ಲಿ ಸಿಬ್ಬಂದಿ ನಿತ್ಯ ಕಿರಿಕಿರಿ ಮಾಡುತ್ತಾರೆ. ಫಾಸ್‌ ಟ್ಯಾಗ್‌ನಲ್ಲಿ ಹಣ ಕಟಾವು ಮಾಡಿಕೊಳ್ಳಿ ಎಂದರೂ ಸುಮ್ಮನಾಗದೇ, ದಂಡ ಕಟ್ಟಲೇಬೇಕು ಎಂದು ಒತ್ತಾಯಿಸುತ್ತಾರೆ. ಸರ್ಕಾರ ಕ್ಯಾಷ್‌ ಲೆಸ್‌ ಎನ್ನುತ್ತದೆ. ಇವರು ಸರ್ಕಾರದ ಆದೇಶಗಳಿಗೆ ಕ್ಯಾರೇ ಎನ್ನದೇ ವರ್ತಿಸುತ್ತಾರೆ ಎಂದು ಶಿರಾದ ಲಕ್ಕವ್ವನಹಳ್ಳಿಯ ರೈತ ರಮೇಶ್‌ ಮತ್ತು ಹಿರಿಯೂರಿನ ಧರ್ಮಪುರದ ರೈತ ಮಂಜುನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ

  • – ಎಸ್‌.ಕೆ.ಕುಮಾರ್‌
Advertisement

Udayavani is now on Telegram. Click here to join our channel and stay updated with the latest news.

Next